ಗುಂಡ್ಲುಪೇಟೆ: ಕೋವಿಡ್ 3ನೇ ಅಲೆ ವೇಳೆ ಟಾಸ್ಕ್ ಪೋರ್ಸ್ ಗಳು ನಿಷ್ಕ್ರಿಯಯವಾಗಿದೆ ಎಂಬ ದೂರುಗಳಿವೆ. ಈ ಬಗ್ಗೆ ಅಧಿಕಾರಿಗಳು ಕೂಡಲೇ ಕ್ರಮವಹಿಸಬೇಕೆಂದು ಶಾಸಕ ನಿರಂಜನ್ ಕುಮಾರ್ ತಾಕೀತು ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಮ್ಮ ನೇತೃತ್ವದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಶಾಸಕರು, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪಿಡಿಒಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಇಲ್ಲದಿದ್ದರೆ ಸ್ಥಳೀಯವಾಗಿ ಸಮಸ್ಯೆಗಳು ಇನ್ನಷ್ಟು ಹೆಚ್ಚಳವಾಗಲಿವೆ ಎಂದರು.
ಮಗಳು ಕೋವಿಡ್‌ನಿಂದ ಮೃತ ಪಟ್ಟಿದ್ದರು. ಆದರೆ ಸರ್ಕಾರ ನೀಡುವ 1 ಲಕ್ಷ ಪರಿಹಾರದಲ್ಲಿ ನಮ್ಮ ಹೆಸರು ಕೈಬಿಡಲಾಗಿದೆ ಎಂದು ಚಿಕ್ಕತುಪ್ಪೂರು ಗ್ರಾಮದ ಬಂಗಾರಾಚಾರಿ ಬೇಸರ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಶಾಸರು, ಪರಿಶೀಲಿಸಿ ಕೂಡಲೇ ಪರಿಹಾರ ದೊರಕಿಸುವಂತೆ ಕ್ರಮ ವಹಿಸಲಾಗುವುದು ಎಂದರು.
ದೇವರಹಳ್ಳಿ ದ ಮಹೇಶ್ ಮಾತನಾಡಿ, ವಾರ್ಡ್ ಹಾಗೂ ಗ್ರಾಮದ ಸಭೆ ನಡೆಸದೆ ಮನೆ ಮಂಜೂರಾತಿ ಫಲಾನುಭವಿಗಳ ಪಟ್ಟಿಯನ್ನು ಗ್ರಾಪಂ ಸದಸ್ಯರು ಸಿದ್ಧಪಡಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಗ್ರಾಮ ಸಭೆ ನಡೆಸಿ ನಂತರ ಎಲ್ಲಾ ಸದಸ್ಯರನ್ನು ಗಣನೆಗೆ ತೆಗೆದುಕೊಂಡು ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಬೇಕು. ಈಗಾಗಲೇ ಆಯ್ಕೆ ಮಾಡಿದ್ದರೂ ಸಹ ಅದನ್ನು ರದ್ದುಗೊಳಿಸಿ ಮತ್ತೆ ಗ್ರಾಮ ಸಭೆ ನಡೆಸಿ ಆಯ್ಕೆ ಮಾಡಬೇಕು ಎಂದು ತಾಪಂ ಇಒ ಶ್ರೀಕಂಠರಜೇ ಅರಸ್ ಅವರಿಗೆ ಸೂಚನೆ ನೀಡಿದರು.
ಏತ ನೀರಾವತಿ ಯೋಜನೆ ಮೂಲಕ ಸಾಗಡೆ ಗ್ರಾಮದ ಕೆರೆಗೆ ನೀರು ತುಂಬಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು. ಜಮೀನು ಸರ್ವೇ ಮಾಡಿಸಿಕೊಡುವಂತೆ ಎಲಚೆಟ್ಟಿ ವೃದ್ಧರೊಬ್ಬರು ಮನವಿ ಮಾಡಿದರು. ಗಂಗಾ ಕಲ್ಯಾಣ ಮಂಜೂರಾತಿಗೆ ರೈತರೊಬ್ಬರು ಆಗ್ರಹಿಸಿದ್ದರು.
ಜೊತೆಗೆ ಇಂಜಿನಿಯರ್ ಕಾಲೇಜು ಸೀಟು ಕೊಡಿಸುವಂತೆ ವಿದ್ಯಾರ್ಥಿನಿಯೊಬ್ಬಳು ಮನವಿ ನೀಡಿದರು. ಸಭೆಯಲ್ಲಿ ತಾಪಂ ಇಒ ಶ್ರೀಕಂಠರಾಜೇ ಅರಸ್, ಗ್ರೇಡ್-2 ತಹಶೀಲ್ದಾರ್ ಮಹೇಶ್, ಬಿಸಿಯೂಟ ಅಧಿಕಾರಿ ಮಂಜಣ್ಣ, ಪಿಡ್ಲ್ಯೂಡಿ ಎಇಇ ರವಿಕುಮಾರ್, ಸಿಡಿಪಿಒ ಚಲುವರಾಜು, ಪುರಸಭೆ ಮುಖ್ಯಾಧಿಕಾರಿ ಹೇಮಂತ್ ರಾಜ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಕೃಷಿ ಇಲಾಖೆ ಸಹಾಯ ನಿರ್ದೇಶಕ ಪ್ರವೀಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.