ಕೋವಿಡ್ ಸೋಂಕು ಆರಂಭವಾಗಿ ಒಂದು ವರ್ಷ ಕಳೆದರೂ ಇದರ ಕಬಂಧಬಾಹುಗಳಿಂದ ಇನ್ನೂ ಮುಕ್ತವಾಗಲು ಸಾಧ್ಯವಾಗಿಲ್ಲ. ಈಗ “ಎರಡನೇ ಅಲೆ’ ಎಂಬ ಮಹಾ ಸವಾಲು ಎದುರಾಗಿದ್ದು, ಇದರ ನಿಯಂತ್ರಣ ಕಾರ್ಯವೀಗ ದೊಡ್ಡ ಆಂದೋಲನದಂತೆ ನಡೆಯುತ್ತಿದೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಆಸ್ಪತ್ರೆ ಮೂಲಸೌಕರ್ಯ ಹೆಚ್ಚಿಸುವಲ್ಲಿಂದ ಆರಂಭವಾಗಿ ಜನರಿಗೆ ಲಸಿಕೆ ಪಡೆಯಲು ಪ್ರೇರೇಪಿಸುವವರೆಗೆ ನಿರಂತರವಾಗಿ ಶ್ರಮಿಸುತ್ತಿವೆ. ವೈದ್ಯರು, ಶುಶ್ರೂಷಕರು, ಅಧಿಕಾರಿಗಳು ಸೇರಿದಂತೆ ಸರಕಾರದ ಭಾಗವಾಗಿರುವ ಈ ಎಲ್ಲ ಯೋಧರು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಕಳೆದ ವರ್ಷ ಆರಂಭವಾದ ಆರೋಗ್ಯ ವಲಯದ ಮೇಲಿನ ಅಪಾರ ಒತ್ತಡ ಇನ್ನೂ ಕಡಿಮೆಯಾಗಿಲ್ಲ.
ಕಳೆದ ವರ್ಷವೇ ನಾವು ಕೋವಿಡ್ ಸೋಂಕಿನ ಕ್ರೂರ ರೂಪ ನೋಡಿದ್ದು, ಇದು ಮರುಕಳಿಸದಿರಲಿ ಎಂಬ ಉದ್ದೇಶಕ್ಕೆ ಕೆಲವು ಕಠಿನ ನಿರ್ಧಾರ ಕೈಗೊಳ್ಳಲಾಗಿದೆ. ಆದರೂ ಸೋಂಕು ಹೆಚ್ಚುತ್ತಲೇ ಇರುವುದರಿಂದ ಆರೋಗ್ಯ ಮೂಲಸೌಕರ್ಯ ಹೆಚ್ಚಿಸಲಾಗಿದೆ. ಪ್ರತೀ ದಿನ 3 ಲಕ್ಷ ಪರೀಕ್ಷೆಯ ಗುರಿ, 30,738 ಆಮ್ಲಜನಕ ಸಹಿತ ಹಾಸಿಗೆಗಳ ಸಜ್ಜು, 2,907 ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳ ಸಜ್ಜು, ಖಾಸಗಿ ಆಸ್ಪತ್ರೆಗಳಲ್ಲೂ ಶೇ.50 ಹಾಸಿಗೆ ಮೀಸಲು, ಸರಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಮೀಸಲು ಹಾಸಿಗೆ ಸಂಖ್ಯೆ ಹೆಚ್ಚಳ ಮೊದಲಾದ ಕ್ರಮಗಳು ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭ್ಯವಾಗಲು ಅನುಕೂಲವಾಗಿದೆ.
ಆದರೆ ಸಾರ್ವಜನಿಕರು ಕೋವಿಡ್ ಸುರಕ್ಷತ ಕ್ರಮಗಳನ್ನು ಪಾಲಿಸದೇ ಇರುವುದು ಸರಕಾರದ ಮುಂದಿರುವ ದೊಡ್ಡ ಸವಾಲು. ಕೋವಿಡ್ ನಿಯಂತ್ರಣಕ್ಕೆ ಸರಕಾರ ತನ್ನ ಮಟ್ಟದಲ್ಲಿ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಈಗ ಜನರು ಕೂಡ ಸ್ವಯಂ ಕಡಿವಾಣದ ಮೂಲಕ ಕೊರೊನಾ ನಿಯಂತ್ರಣದ ಆಂದೋಲನದಲ್ಲಿ ಭಾಗಿಯಾಗಬೇಕು. ಸಂಜೀವಿನಿಯಾದ ಲಸಿಕೆಯನ್ನು ಪಡೆದು ನಿಯಂತ್ರಣ ಕಾರ್ಯದಲ್ಲಿ ಕೈ ಜೋಡಿಸಬೇಕು. ಸರಕಾರ-ಜನರ ಸಹಭಾಗಿತ್ವವೇ ಕೊರೊನಾ ಹೊಡೆದೋಡಿಸುವ ಅತೀ ದೊಡ್ಡ ಶಕ್ತಿ.
– ಡಾ|ಕೆ.ಸುಧಾಕರ್,
ಶಾಸಕ, ಚಿಕ್ಕಬಳ್ಳಾಪುರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು