Advertisement

ದಂಡೆತ್ತಿ ಬಂದ 2ನೇ ಅಲೆ! 1ನೇ ಅಲೆಗೂ, 2ನೇ ಅಲೆಗೂ…ಎನಿತು ಅಂತರ?

11:11 PM Apr 18, 2021 | Team Udayavani |

ಗಾಯದ ಮೇಲೆ ಬರೆ ಎಂಬಂತೆ ದೇಶಕ್ಕೆ ಕೊರೊನಾದ 2ನೇ ಅಲೆ ಧುತ್ತನೆ ಬಂದು ಅಪ್ಪಳಿಸಿದೆ. ಮೊದಲ ಅಲೆ ಆರ್ಭಟ ಇನ್ನೇನು ತಗ್ಗಿತು ಎನ್ನುವಾಗಲೇ ನಿರೀಕ್ಷೆಗೂ ಮೀರಿದ ಆಘಾತಕ್ಕೆ ಎದೆಗೊಟ್ಟಂತಾಗಿದೆ. ಅಷ್ಟಕ್ಕೂ ಮೊದಲ ಅಲೆಗೂ, 2ನೇ ಅಲೆಗೂ ಇರುವ ವ್ಯತ್ಯಾಸಗಳೇನು? 2ನೇ ಅಲೆಯ ಈ ಪರಿಯ ಆರ್ಭಟಕ್ಕೆ ಕಾರಣಗಳೇನು?- ಈ ಬಗ್ಗೆ ಕಿರುನೋಟ…

Advertisement

ನಮ್ಮದೇ ನೆಲದ ರೂಪಾಂತರಿ!
ಮೊದಲ ಅಲೆಯಲ್ಲಿ ಕೊರೊನಾದ ವಿದೇಶಿ ರೂಪಾಂತರಿ ಪಾರಮ್ಯ ಮೆರೆದಿತ್ತೇ ಹೊರತು, ಸ್ಥಳೀಯ ರೂಪಾಂತರಿಗಳು ಅಷ್ಟಾಗಿ ಆರ್ಭಟಿಸಿರಲಿಲ್ಲ. ಆದರೆ ತಜ್ಞರ ಪ್ರಕಾರ 2ನೇ ಅಲೆಯಲ್ಲಿ ಪ್ರಾದೇಶಿಕ ತಳಿಗಳೇ ಮೇಲುಗೈ ಸಾಧಿಸುತ್ತಿವೆ. ಮಹಾರಾಷ್ಟ್ರದಲ್ಲಿನ ಸೋಂಕಿತರ ಜಿನೋಮ್‌ಗಳನ್ನು ಅನುಕ್ರಮವಾಗಿ ಅಧ್ಯಯನಿಸಿದಾಗ, ಶೇ.61ರಷ್ಟು ಭಾರತೀಯ ರೂಪಾಂತರಿ ತಳಿಗಳೇ ಅಧಿಕ ಕಂಡುಬಂದಿವೆ.

ಸಣ್ಣ ವಯಸ್ಸಿನವರೇ ಟಾರ್ಗೆಟ್‌
2020ರ ಮೊದಲ ಅಲೆಗೆ ಹೋಲಿಸಿದ್ದಲ್ಲಿ, 2ನೇ ಅಲೆಯಲ್ಲಿ ಸಣ್ಣ ವಯಸ್ಸಿನವರೇ ಹೆಚ್ಚಾಗಿ ಕೊರೊನಾಕ್ಕೆ ತುತ್ತಾಗುತ್ತಿದ್ದಾರೆ. 2021ರಲ್ಲಿ ದಿಲ್ಲಿಯಲ್ಲಿ ಶೇ.65 ಸೋಂಕಿತರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಆಗಿದ್ದಾರೆ. ಮಹಾರಾಷ್ಟ್ರ, ಕರ್ನಾಟಕದಲ್ಲೂ ಶೇ.47 ಮಂದಿ 15- 45 ವರ್ಷದೊಳಗಿನವರೇ ಸೋಂಕಿಗೆ ಒಳಗಾಗುತ್ತಿದ್ದಾರೆ. 45 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಬಹುತೇಕರಿಗೆ ಲಸಿಕೆ ಲಭಿಸಿದೆ. ಇನ್ನೂ ಲಸಿಕೆ ಸಿಗದ 45ಕ್ಕಿಂತ ಕಡಿಮೆ ವಯಸ್ಸಿನವರು ಸೋಂಕಿಗೆ ಸುಲಭವಾಗಿ ಟಾರ್ಗೆಟ್‌ ಆಗುತ್ತಿದ್ದಾರೆ.

ಹೊಸ ಲಕ್ಷಣ ಹೊತ್ತು ತಂದ 2ನೇ ಅಲೆ
ಮೊದಲ ಅಲೆಯಲ್ಲಿ ಕೆಮ್ಮು, ಜ್ವರ, ಶೀತ, ತಲೆನೋವು, ಗಂಟಲು ಕೆರೆತ, ರುಚಿ-ವಾಸನೆ ಕಳೆದುಕೊಳ್ಳುವುದು, ಉಸಿರಾಟ ತೊಂದರೆ- ಇವು ಕೊರೊನಾ ಸೋಂಕಿತರಲ್ಲಿ ಸಾಮಾನ್ಯವಾಗಿದ್ದವು. 2ನೇ ಅಲೆಯ ಸೋಂಕಿತರಲ್ಲೂ ಈ ಲಕ್ಷಣಗಳೊಂದಿಗೆ ಮೈಕೈ ನೋವು, ಗುಲಾಬಿ ಕಣ್ಣುಗಳು, ಅತಿಸಾರ, ಕಿವಿ ಕೇಳಿಸದೆ ಇರುವ ಸ್ಥಿತಿ ಹೆಚ್ಚೆಚ್ಚು ವರದಿಯಾಗುತ್ತಿದೆ. ಅದರಲ್ಲೂ ಶ್ವಾಸಕೋಶಕ್ಕೆ ಅಗತ್ಯ ಆಮ್ಲಜನಕದ ಕೊರತೆ ಭಾರೀ ಆತಂಕ ಮೂಡಿಸಿದೆ.

ಫ್ಯಾಮಿಲಿ ಪ್ಯಾಕೇಜ್‌!
ಮೊದಲ ಅಲೆಯಲ್ಲಿ ಮನೆಯಲ್ಲಿ ಹೆಚ್ಚಾಗಿ ಹಿರಿಯ ಸದಸ್ಯರಿಗಷ್ಟೇ ಕೊರೊನಾ ಅಪಾಯದ ಸ್ಥಿತಿ ತಂದೊಡ್ಡಿತ್ತು. ಆದರೆ 2ನೇ ಅಲೆ ನಡುವಯಸ್ಸಲ್ಲದೆ, ಮಕ್ಕಳಿಗೂ ಸೋಂಕು ಬಾಧಿಸುತ್ತಿರುವುದಲ್ಲದೆ, ಜ್ವರದಿಂದ ಹೆಚ್ಚು ದಣಿಯುವಂತೆ ಮಾಡುತ್ತಿದೆ. ಮನೆಯ ಎಲ್ಲ ಸದಸ್ಯರಿಗೂ ಕೊರೊನಾ ತಗಲಿದ ಪ್ರಕರಣಗಳು ಹೆಚ್ಚಾಗುತ್ತಿವೆ.

Advertisement

ಶರವೇಗದ ಅಲೆ
“ಮೊದಲ ಅಲೆಯಲ್ಲಿ ಒಬ್ಬ ಸೋಂಕಿತ ತನ್ನ ಸಂಪರ್ಕದಲ್ಲಿದ್ದ ಶೇ.30-40 ಮಂದಿಗೆ ಸೋಂಕು ಹಬ್ಬಿಸುವ ಸಾಧ್ಯತೆ ಇತ್ತು. ಆದರೆ ಈ ಬಾರಿ ಒಬ್ಬನಿಂದಾಗಿ ಶೇ.80- 90 ಮಂದಿಯಲ್ಲೂ ಪಾಸಿಟಿವ್‌ ಕಂಡುಬರಬಹುದು’ ಎನ್ನುತ್ತಾರೆ, ಏಮ್ಸ್‌ ನಿರ್ದೇಶಕ ಡಾ| ರಣದೀಪ್‌ ಗುಲೇರಿಯಾ. ಹೀಗಾಗಿ, ಮೊದಲ ಅಲೆಯಲ್ಲಿ ಸೆಪ್ಟಂಬರ್‌ ವೇಳೆಗೆ 10 ಲಕ್ಷ ಸಕ್ರಿಯ ಪ್ರಕರಣ ದಾಖಲೆ ನಿರ್ಮಿಸಿತ್ತು. ಪ್ರಸ್ತುತ ದೇಶದಲ್ಲಿ 14 ಲಕ್ಷಕ್ಕೂ ಅಧಿಕ ಸಕ್ರಿಯ ಕೇಸ್ ಗಳಿವೆ.

ಮಕ್ಕಳನ್ನೂ ಬಿಡುತ್ತಿಲ್ಲ!
ಮೊದಲ ಅಲೆಯ ಕೊರೊನಾ ವೈರಾಣು, ಮಕ್ಕಳತ್ತ ಅಷ್ಟಾಗಿ ವಕ್ರದೃಷ್ಟಿ ಬೀರಿರಲಿಲ್ಲ. ಕೆಲವೇ ಕೆಲವು ಪುಟಾಣಿಗಳಿಗೆ ಬಾಧಿಸಿದ್ದರೂ, ಸೌಮ್ಯ ಲಕ್ಷಣಗಳಿದ್ದವು. ಆದರೆ 2ನೇ ಅಲೆಯಲ್ಲಿ ಇದಕ್ಕೆ ತದ್ವಿರುದ್ಧ ದೃಶ್ಯ ವ್ಯಕ್ತವಾಗಿದೆ. ಮಹಾರಾಷ್ಟ್ರ, ಛತ್ತೀಸ್‌ಗಢ, ಉತ್ತರ ಪ್ರದೇಶ, ಕರ್ನಾಟಕ ಮತ್ತು ದೆಹಲಿಗಳಲ್ಲಿ ಮಾ.1-ಎ.4ರ ನಡುವೆ ಸುಮಾರು 80 ಸಾವಿರ ಮಕ್ಕಳಿಗೆ ಸೋಂಕು ತಗಲಿದೆ.

1ನೇ ಅಲೆ
– ವಿದೇಶಿ ತಳಿಯ ಆಕ್ರಮಣ.
– ವಯಸ್ಸಾದವರಿಗಷ್ಟೇ ಪ್ರಾಣಾಪಾಯ ಆತಂಕ.
– 10ರಲ್ಲಿ 2 ಪ್ರಕರಣಗಳಿಗಷ್ಟೇ ಉಸಿರಾಟದ ತೊಂದರೆ.
– ಮಾಮೂಲಿ ಜ್ವರ, ಆಯಾಸ ಕಡಿಮೆ.
– ಒಬ್ಬ ಸೋಂಕಿತ ಶೇ.30 ಮಂದಿಗೆ ವೈರಾಣು ಹಬ್ಬಿಸುತ್ತಿದ್ದ.

2ನೇ ಅಲೆ
– ಪ್ರಾದೇಶಿಕ ತಳಿಯ ಅಟ್ಟಹಾಸ.
– ಮಕ್ಕಳು, ನಡು ವಯಸ್ಸಿನವರೂ ಟಾರ್ಗೆಟ್‌.
– ಶೇ.4 ಪ್ರಕರಣಗಳಲ್ಲಿ ಶ್ವಾಸಕೋಶಗಳಿಗೆ ಆಮ್ಲಜನಕ ಕೊರತೆ.
– ತಲೆನೋವು- ಜ್ವರ ತೀವ್ರ, ಮೈಕೈ ನೋವು- ಆಯಾಸ ಅಧಿಕ.
– ಒಬ್ಬ ಸೋಂಕಿತನಿಂದ ಶೇ.80-90 ಮಂದಿಗೂ ಸೋಂಕು ಪ್ರಸರಣ ಸಾಧ್ಯತೆ.

Advertisement

Udayavani is now on Telegram. Click here to join our channel and stay updated with the latest news.

Next