Advertisement

ಕೋವಿಡ್ ನಿಯಮ: ಗೊಂದಲಗಳು ನಿವಾರಣೆಯಾಗಲಿ

11:32 PM Mar 26, 2021 | Team Udayavani |

ಕಳೆದೊಂದು ತಿಂಗಳಿಂದೀಚೆಗೆ ದೇಶದ ಹಲವಾರು ರಾಜ್ಯಗಳಲ್ಲಿ ಕೊರೊನಾ ಸೋಂಕು ಮತ್ತೆ ವ್ಯಾಪಕವಾಗಿ ಹರಡಲಾರಂಭಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕೆಲವೊಂದು ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ, ಲಾಕ್‌ಡೌನ್‌ ಅನ್ನು ಜಾರಿಗೊಳಿಸಲಾಗಿದೆ. ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಕೇರಳಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರನೆ ಏರಿಕೆಯಾಗಿದ್ದರಿಂದ ಕರ್ನಾಟಕದಲ್ಲೂ ಕಳೆದ ಕೆಲವು ದಿನಗಳಿಂದ ಸೋಂಕುಪೀಡಿತರ ಸಂಖ್ಯೆ ಏರುಗತಿಯಲ್ಲಿದೆ.

Advertisement

ಕಳೆದ ವರ್ಷಾಂತ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್ಲ ವಲಯಗಳಲ್ಲೂ ದೈನಂದಿನ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಿದ್ದವು. ಇದೀಗ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೆಲವೊಂದು ಬಿಗಿ ಕ್ರಮಗಳನ್ನು ಕೈಗೊಂಡಿದೆ.

ಇದರ ಮಧ್ಯೆಯೇ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಸರದಿಯಂತೆ ಬರಲಿರುವ ವಿವಿಧ ಧರ್ಮಗಳ ಹೋಳಿ, ಯುಗಾದಿ, ಶಬ್‌-ಎ-ಬರಾತ್‌, ಗುಡ್‌ಫ್ರೈಡೇ ಆದಿಯಾಗಿ ಎಲ್ಲ ಹಬ್ಬಗಳನ್ನೂ ಸಾರ್ವಜನಿಕವಾಗಿ ಆಚರಿಸದೇ ಮನೆಯಲ್ಲಿಯೇ ಸರಳವಾಗಿ ಆಚರಿಸುವಂತೆ ಜನತೆಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕ ಸ್ಥಳ, ಮಾರುಕಟ್ಟೆ, ಧಾರ್ಮಿಕ ಕೇಂದ್ರಗಳಲ್ಲಿ ಹಬ್ಬಗಳನ್ನು ಆಚರಿಸದಂತೆ ಮತ್ತು ಸಭೆ, ಸಮಾರಂಭಗಳನ್ನು ನಡೆಸದಂತೆ ಎಚ್ಚರಿಕೆ ನೀಡಲಾಗಿದೆ. ಕೊರೊನಾ ನಿಯಂತ್ರಣ ಮತ್ತು ಜನರ ಆರೋಗ್ಯದ ದೃಷ್ಟಿಯಿಂದ ಸರಕಾರ ಈ ಆದೇಶ ಹೊರಡಿಸಿದೆಯಾದರೂ ಇದು ಜನರ ಅಸಮಾಧಾನಕ್ಕೆ ಕಾರಣವಾಗಿರುವುದಂತೂ ಸುಳ್ಳಲ್ಲ. ಕಳೆದ ವರ್ಷದುದ್ದಕ್ಕೂ ಯಾವುದೇ ಹಬ್ಬ, ಹರಿದಿನಗಳನ್ನು ಸಡಗರ, ಸಂಭ್ರಮದಿಂದ ಆಚರಿಸದೇ ತೀವ್ರ ನಿರಾಸೆ ಅನುಭವಿಸಿದ್ದ ಜನರಿಗೆ ಸರಕಾರದ ಈ ಆದೇಶ ಅತ್ತ ನುಂಗಲೂ ಆಗದ, ಇತ್ತ ಉಗುಳಲೂ ಆಗದ ನಾಲಗೆ ಮೇಲಣ ಬಿಸಿ ತುಪ್ಪದಂತಾಗಿದೆ.

ಅಷ್ಟು ಮಾತ್ರವಲ್ಲದೆ ರಾಜ್ಯ ಸರಕಾರ ಕೇವಲ ಜನಸಾಮಾನ್ಯರ ಮೇಲೆ ಮಾತ್ರವೇ ಕೊರೊನಾ ನಿಯಮಾವಳಿಗಳನ್ನು ಹೇರುತ್ತಿದೆ ಎಂಬ ಆಕ್ರೋಶವೂ ಇತ್ತೀಚೆಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚುತ್ತಿದೆ. ಕೊರೊನಾ ನಿಯಮಾವಳಿಗಳ ವಿಚಾರದಲ್ಲಿ ಸರಕಾರ ತಾರತಮ್ಯದ ಧೋರಣೆಯನ್ನು ಅನುಸರಿಸುತ್ತಿದೆ. ರಾಜಕೀಯ ಸಭೆ, ಸಮಾವೇಶಗಳಿಗೆ ಮತ್ತು ನಾಯಕರಿಗೆ ಯಾವುದೇ ನಿರ್ಬಂಧ, ನಿಯಮಗಳನ್ನು ಯಾಕಾಗಿ ಅನ್ವಯಿಸಲಾಗುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಇನ್ನು ಧಾರ್ಮಿಕ ಮತ್ತು ಕೌಟುಂಬಿಕ ಕಾರ್ಯಕ್ರಮಗಳಿಗೂ ಕೊರೊನಾ ನೆಪದಲ್ಲಿ ವಿನಾಕಾರಣ ಅಡ್ಡಿ ಉಂಟುಮಾಡಲಾಗುತ್ತಿರುವ ಬಗೆಗೂ ಜನರು ಆಕ್ರೋಶ ಹೊರಹಾಕತೊಡಗಿದ್ದಾರೆ.

ನೆರೆಯ ರಾಜ್ಯಗಳಿಂದ ಬರುವವರ ಕೋವಿಡ್‌ ಪರೀಕ್ಷಾ ವರದಿ, ಹೋಂ ಐಸೋಲೇಶನ್‌, ಮೈಕ್ರೋ ಕಂಟೈನ್‌ಮೆಂಟ್‌ ಝೋನ್‌ ಈ ಎಲ್ಲ ವಿಚಾರಗಳಲ್ಲಿಯೂ ಕೂಡ ಸರಕಾರ ಮತ್ತು ಆಡಳಿತ ವಲಯದಲ್ಲಿ ಗೊಂದಲಗಳು ಮುಂದುವರಿದಿರುವುದು ತುಸು ಆತಂಕಕಾರಿ ವಿಷಯವೇ. ರಾಜ್ಯದ ಹಿತದೃಷ್ಟಿಯಿಂದ ಈ ವಿಷಯಗಳತ್ತ ಸರಕಾರ ತತ್‌ಕ್ಷಣ ಗಮನಹರಿಸಿ ಈ ಎಲ್ಲ ಗೊಂದಲಗಳನ್ನು ನಿವಾರಿಸಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next