ಗುಂಡ್ಲುಪೇಟೆ: ತಾಲೂಕಿನ ಅಂಕಹಳ್ಳಿ ಗ್ರಾಮದ ಯುವಕನೋರ್ವನಿಗೆ ಪರೀಕ್ಷೆ ನಡೆಸಿದ ವೇಳೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಮರುದಿನ ಪರೀಕ್ಷೆಗೆ ಒಳಪಟ್ಟ ನಂತರ ನೆಗೆಟಿವ್ ವರದಿ ಬಂದಿದೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ವರದಿ ನೀಡುವ ಸಂದರ್ಭ ಗೋಲ್ ಮಾಲ್ ನಡೆಯುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ಅಂಕಹಳ್ಳಿ ಗ್ರಾಮದ ಯುವಕ ಸುಮಂತ್(19) ಭಾನುವಾರ ಬೆಳಗ್ಗೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದಾನೆ. ಮರುದಿನ ಸೋಮವಾರ ಕೊರೊನಾ ಪಾಸಿಟಿವ್ ಎಂದು ಮೊಬೈಲ್ಗೆ ಸಂದೇಶ ಬಂದಿದೆ. ವರದಿ ಬಂದ ನಂತರ ಸುಮಂತ್ ತಮ್ಮ ಗ್ರಾಮದ ಪಕ್ಕದಲ್ಲಿರುವ ಬೊಮ್ಮಲಾಪುರ ಸರ್ಕಾರಿ ಅಸ್ಪತ್ರೆಗೆ ತಂದೆ ವೀರಭದ್ರಪ್ಪ ಜೊತೆ ಹೋಗಿ ಇಬ್ಬರು ಕೂಡ ಟೆಸ್ಟ್ ಕೊಟ್ಟಿದ್ದಾರೆ. ನಂತರ ಪಟ್ಟಣ ಸರ್ಕಾರಿ ಆಸ್ಪತ್ರೆಗೆ ಬಂದು ಕೋವಿಡ್ ಕೇರ್ ಸೆಂಟರ್ನಲ್ಲಿ ಸುಮಂತ್ ದಾಖಲಾಗಿದ್ದಾರೆ. ವಿಪರ್ಯಾಸವೆಂದರೆ ಬೊಮ್ಮಲಾಪುರ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಟ್ಟ ವರದಿ ಸೋಮವಾರ ರಾತ್ರಿ ನೆಗೆಟಿವ್ ಬಂದಿದೆ. ಇದು ಗೊಂದಲದ ಗೂಡಾಗಿದೆ.
ತನಿಖೆ ನಡೆಸಿ:
ಎರಡು ಸರ್ಕಾರಿ ಅಸ್ಪತ್ರೆಗಳಲ್ಲಿ ಓರ್ವ ವ್ಯಕ್ತಿಯ ವರದಿ ಒಂದು ಕಡೆ ಪಾಸಿಟಿವ್ ಮತ್ತೊಂದು ಕಡೆ ನೆಗೆಟಿವ್ ಬರಲು ಹೇಗೆ ಸಾಧ್ಯ. ಇದರಲ್ಲಿ ಗೋಲ್ ಮಾಲ್ ನಡೆಯುತ್ತಿದೆ. ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ತನಿಖೆ ಜನರಿಗೆ ಸತ್ಯಾಸತ್ಯತೆ ತಿಳಿಸಬೇಕೆಂದು ಸುಮಂತ್ ತಂದೆ ವೀರಭದ್ರಪ್ಪ ಒತ್ತಾಯಿಸಿದ್ಧಾರೆ.
Related Articles
ಉದ್ಯೋಗ ಕಳೆದುಕೊಂಡ ಯುವಕ: ಡಿಪ್ಲೋಮಾ ವ್ಯಾಸಂಗ ಮಾಡಿರುವ ಸುಮಂತ್ಗೆ ಮೈಸೂರಿನ ಖಾಸಗಿ ಸಂಸ್ಥೆಯಲ್ಲಿ ಸೋಮವಾರ ಇಂಟರ್ ವ್ಯೂವ್ ಇತ್ತು. ಇದಕ್ಕೆ ನೆಗೆಟಿವ್ ವರದಿ ಕಡ್ಡಾಯವಾದ ಹಿನ್ನೆಲೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆರ್ಟಿಪಿಸಿಆರ್ (ಮೂಗು ಮತ್ತು ಗಂಟಲು ದ್ರವ) ಪರೀಕ್ಷೆ ನೀಡಿದ್ದರು. ಆದರೆ ಸಿಬ್ಬಂದಿ ಎಡವಟ್ಟಿನಿಂದ ಕೊರೊನಾ ಪಾಸಿಟಿವ್-ನೆಗೆಟಿವ್ ವರದಿ ಬಂದಿದೆ. ಈ ಕಾರಣದಿಂದ ಉದ್ಯೋಗ ವಂಚಿತವಾಗಿದೆ.
ಹೋಂ ಐಸೋಲೇಷನ್ ನೀಡಲು ಒತ್ತಾಯ:
ಕೊರೊನಾ ಸೋಂಕಿನ ಯಾವ ಲಕ್ಷಣ ಇಲ್ಲದೆ ಆರೋಗ್ಯವಾಗಿದ್ಧೇನೆ. ಹೋಂ ಐಸೋಲೇಷನ್ ನೀಡಿ ಎಂದು ಆಸ್ಪತ್ರೆಯ ವೈದ್ಯರಿಗೆ ಮನವಿ ಮಾಡುತ್ತಿದ್ದರು ಸಹ ಸತಾಯಿಸುತ್ತಿದ್ಧಾರೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಹೋಂ ಐಸೋಲೇಷನ್ ನೀಡಬೇಕು.–ಸುಮಂತ್.
ಬೊಮ್ಮಲಾಪುರ ಆಸ್ಪತ್ರೆಯಲ್ಲಿ ಸರಿಯಾದ ರೀತಿಯಲ್ಲಿ ಆಸ್ಪತ್ರೆ ಸಿಬ್ಬಂದಿ ಮೂಗು ಮತ್ತು ಗಂಟಲು ದ್ರವ ಪರೀಕ್ಷೆಯನ್ನು ತೆಗೆದುಕೊಳ್ಳದ ಹಿನ್ನೆಲೆ ಎರಡನೇ ಸಲದ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿರಬಹುದು. ಪಾಸಿಟಿವ್ ಅಥವಾ ನೆಗೆಟಿವ್ ವರದಿ ನೀಡುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಜಿಲ್ಲಾ ಆರೋಗ್ಯ ಇಲಾಖೆ ವರದಿ ಪ್ರಕಾರ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ.–ರವಿಕುಮಾರ್, ತಾಲೂಕು ಆರೋಗ್ಯಾಧಿಕಾರಿ.