ಇದು ರಾಜ್ಯದ ಮಟ್ಟಿಗೆ ಕೊರೊನಾ ಸೋಂಕಿನ ಪುನರಾವರ್ತನೆಯ ಸೂಚನೆಯ ಸಮಯ. ಈಗಾಗಲೇ ಕೊರೊನಾ ಸೋಂಕಿನ ಚಕ್ರ ಒಂದು ಸುತ್ತು ಹಾಕಿ ಬಂದಿದೆ. ಸದ್ಯ ನೆರೆಯ ರಾಜ್ಯಗಳಲ್ಲಿ ಕಾಣಿಸಿಕೊಂಡಿರುವ ಎರಡನೇ ಅಲೆಯ ಹಾವಳಿಯು ರಾಜ್ಯದ ಪಾಲಿಗೆ ಎಚ್ಚರಿಕೆ ಗಂಟೆೆಯಾಗಿದೆ. ಸರಕಾರ ಮತ್ತು ಸಾರ್ವಜನಿಕರು ಎರಡನೇ ಅಲೆಯ ಸಾಧ್ಯತೆಯನ್ನು ಉದಾಸೀನ ಮಾಡಿದರೆ ಸೋಂಕಿನ ಪುನರಾವರ್ತನೆ ಕಟ್ಟಿಟ್ಟ ಬುತ್ತಿ.
ಹೆಚ್ಚು ಕಡಿಮೆ ಕಳೆದ ವರ್ಷ (2020) ಇದೇ ವೇಳೆ ರಾಜ್ಯಕ್ಕೆ ಕೊರೊನಾ ಸೋಂಕು ಕಾಲಿಟ್ಟಿತ್ತು. ಆನಂತರದ ಎರಡು ತಿಂಗಳು ನೆರೆಯ ರಾಜ್ಯಗಳಲ್ಲೆಲ್ಲಾ ಸೋಂಕು ವಿಪರೀತವಾಗಿತ್ತು. ಆದರೆ ಕರ್ನಾಟಕ ಮಾತ್ರ ಕಡಿಮೆ ಪ್ರಕರಣ, ಉತ್ತಮ ನಿರ್ವಹಣೆಯಿಂದ ಬೀಗಿತ್ತು. ಇದಕ್ಕಾಗಿ ಪ್ರಧಾನಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ತದನಂತರದಲ್ಲಿ ಸಾರ್ವಜನಿಕರ ಮತ್ತು ಆಡಳಿತ ಯಂತ್ರದ ಉದಾಸೀನತೆಯಿಂದ ರಾಜ್ಯದೆಲ್ಲೆಡೆ ಸೋಂಕು ವ್ಯಾಪಿಸಿತು. ಜುಲೈನಿಂದ ಅಕ್ಟೋಬರ್‌ವರೆಗೂ ಸಾಕಷ್ಟು ಕಾಡಿತ್ತು. ಅಂದರೆ ತಡವಾಗಿ ಬಂದು, ತಡವಾಗಿ ಹೆಚ್ಚಳವಾಗಿ, ತಡವಾಗಿ ಇಳಿಕೆಯಾಗಿತ್ತು. ಈಗ ಎದುರು ರಾಗಿರುವ ಕೊರೊನಾ ಎರಡನೇ ಅಲೆಯ ವಿಚಾರದಲ್ಲೂ ಹಿಂದಿನ ವರ್ಷದ ವಾತಾವರಣವೇ ಇದೆ. ಪ್ರಸ್ತುತ ನೆರೆಯ ಮಹಾರಾಷ್ಟ್ರವನ್ನು ಕಾಡುತ್ತಿದ್ದು, ಅನಂತರದಲ್ಲಿ ರಾಜ್ಯಕ್ಕೆ ಆಗಮಿಸುವುದನ್ನು ತಜ್ಞರು ಅಂದಾಜಿಸಿದ್ದಾರೆ.
ಕಳೆದ ವರ್ಷ ರಾಜ್ಯದಲ್ಲಿ ಸೋಂಕು ಹೆಚ್ಚಳಕ್ಕೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಮರುವಲಸೆ ಬಂದವರ ಕೊಡುಗೆ ಹೆಚ್ಚಿದೆ. ಈಗ ಮತ್ತೆ ಕಳೆದ ಒಂದು ವಾರದಿಂದ ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ಹಾವಳಿ ಹೆಚ್ಚಿದ್ದು, 24 ಗಂಟೆಗಲ್ಲಿ 13 ಸಾವಿರ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಸದ್ಯ ಮಹಾರಾಷ್ಟ್ರ ಕೆಲ ಜಿಲ್ಲೆಗಳಲ್ಲಿ ಲಾಕ್‌ಡೌನ್, ರಾತ್ರಿ ಕರ್ಫ್ಯೂ ಜಾರಿಯಾ ಗಿದೆ. ಕಳೆದ ವರ್ಷದಂತೆ ಈ ಬಾರಿಯೂ ಮತ್ತೆ ಕಾರ್ಮಿಕರ ಮರು ವಲಸೆ ಆರಂಭವಾಗಬಹುದು. ಜತೆಗೆ ಜಾತ್ರೆಗಳು, ಮದುವೆ ಋತು ಆರಂಭವಾ ಗಿದೆ. ಇವೆಲ್ಲವುಗಳ ಪರಿಣಾಮ ರಾಜ್ಯದಲ್ಲಿಯೂ ಹಿಂದಿನ ವರ್ಷದಂತೆ ತಡ ವಾಗಿ ಸೋಂಕು ಹೆಚ್ಚಳವಾಗಿ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.
ಇವೆಲ್ಲದರ ನಡುವೆ ಸರ್ಕಾರದ ಕಟ್ಟುನಿಟ್ಟಿನ ಆದೇಶದ ಹೊರತಾಗಿಯೂ ರಾಜ್ಯದ ಕೆಲವೊಂದು ಖಾಸಗಿ ಮತ್ತು ಬೆರಳೆಣಿಕೆಯಷ್ಟು ಸರಕಾರಿ ಶಾಲೆಗಳಲ್ಲಿ ಒಂದರಿಂದ ಐದನೇ ತರಗತಿಯ ವರೆಗಿನ ಮಕ್ಕಳಿಗೆ ತರಗತಿಗಳನ್ನು ಆರಂ ಭಿಸಿರುವುದು ಒಂದಿಷ್ಟು ಆತಂಕ ಸೃಷ್ಟಿಸಿದೆ. ಪ್ರೌಢ ಶಾಲೆ ಮತ್ತು ಕಾಲೇಜು ವಿದ್ಯಾ ರ್ಥಿ ಗ ಳಂತೂ ಈ ಹಿಂದಿನಂತೆಯೇ ಶಾಲಾಕಾಲೇಜುಗಳಿಗೆ ತೆರಳುತ್ತಿರು ವುದು, ಗುಂಪುಗೂಡುವ ದೃಶ್ಯಗಳಂತೂ ಸರ್ವೇಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಒಂದರಿಂದ 5ನೇ ತರಗತಿ ವರೆಗಿನ ಮಕ್ಕಳಿಗೆ ಶಾಲೆಗಳಲ್ಲಿ ತರಗತಿ ನಡೆಸುವಂಥ ಜರೂರತ್ತಾದರೂ ಏನು?. ಈಗಾಗಲೇ ವಿವಿಧ ಮಾಧ್ಯಮಗಳ ಮೂಲಕ ಮಕ್ಕಳಿಗೆ ಪಾಠಪ್ರವಚನಗಳನ್ನು ನಡೆಸಿರುವಾಗ ಮತ್ತು ಈ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸುವುದು ಕಡ್ಡಾಯ ವಾಗಿರುವಾಗ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ತರಗತಿಗಳನ್ನು ನಡೆಸುವಂಥ ಅನಿ ವಾರ್ಯ ಏನು? ಎಂಬುದು ಅರ್ಥವಾಗುತ್ತಿಲ್ಲ. ಇವೆ ಲ್ಲ ದರ ಜತೆಗೆ ಸೋಂಕಿಗೆ ಶೀಘ್ರ ತುತ್ತಾಗುವ ಹಿರಿಯ ನಾಗರಿಕರು ಸದ್ಯ ಲಭ್ಯವಿರುವ ಕೊರೊನಾ ಲಸಿಕೆಯನ್ನು ತ್ವರಿತವಾಗಿ ಪಡೆದುಕೊಳ್ಳಬೇಕಿದೆ. ಒಂದು ವೇಳೆ ಸೋಂಕು ಪುನಾರಾವರ್ತನೆಯಾದರೇ ಮುಂದೆ ದೊಡ್ಡ ಹೋರಾಟಕ್ಕೆ ಆರೋಗ್ಯ ಮತ್ತು ಮುಂಚೂಣಿ ವಲಯ ಸಜ್ಜಾಗಬೇಕಿದೆ. ಈ ನಿಟ್ಟಿನಲ್ಲಿ ಕಾರಣಾಂತರಗಳಿಂದ ಲಸಿಕೆಯಿಂದ ದೂರ ಉಳಿದಿರುವ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಕೂಡಾ ಲಸಿಕೆ ಪಡೆಯಬೇಕಿದೆ.