Advertisement

ಕೋವಿಡ್‌ ಆತಂಕ: ಎಲ್ಲ ಆರೋಗ್ಯ ಕೇಂದ್ರಗಳನ್ನು ಸನ್ನದ್ಧವಾಗಿಡಿ: ಸಚಿವ ಅಂಗಾರ ಸೂಚನೆ

01:08 AM Jan 13, 2022 | Team Udayavani |

ಮಂಗಳೂರು: ಕೊರೊನಾ ಮತ್ತು ರೂಪಾಂತರಿ ಸೋಂಕಿನ ಚಿಕಿತ್ಸೆಗೆ ಜಿಲ್ಲೆಯ ತಾಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ಸನ್ನದ್ಧವಾಗಿಟ್ಟುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ

Advertisement

ಅವರು ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬುಧವಾರ ಕೊರೊನಾ ಸೋಂಕು ಹಾಗೂ ಇತರ ವಿಷಯಗಳ ಕುರಿತಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿವಧೆಡೆಗಳ ರೋಗಿಗಳು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ಬರುತ್ತಿರುವುದರಿಂದ ಇಲ್ಲಿ ಒತ್ತಡ ಬೀಳುತ್ತದೆ. ಆದ್ದರಿಂದ ತಾಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು, ಬೆಡ್‌, ವೆಂಟಿಲೇಟರ್‌ಗಳು, ಆಕ್ಸಿಜನ್‌, ಲಿಕ್ವಿಡ್‌ ಆಕ್ಸಿಜನ್‌ ಸೇರಿದಂತೆ ಚಿಕಿತ್ಸೆಗೆ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಂಡರೆ ಸಹಾಯವಾಗಲಿದೆ ಎಂದರು.

ಮಾರ್ಗಸೂಚಿ ಪಾಲಿಸಿ
ಮಾಸ್ಕ್ ಧರಿಸಲು ವಿರೋಧ ವ್ಯಕ್ತಪಡಿಸುವ ನಾಗರಿಕರಲ್ಲಿ ಅರಿವು ಮೂಡಿಸ ಬೇಕು, ಲಸಿಕೆ ಪಡೆಯದವರನ್ನು ಗುರುತಿಸಿ ತಿಳುವಳಿಕೆ ನೀಡಿ ಲಸಿಕೆ ನೀಡಬೇಕು. ಅದಕ್ಕಾಗಿ ಪರಿಣತರ ತಂಡವನ್ನು ಸಜ್ಜುಗೊಳಿಸುವಂತೆ ಸಚಿವರು ತಿಳಿಸಿದರು.

ಜಿಲ್ಲಾಡಳಿತ ಸನ್ನದ್ಧ
ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮಾತನಾಡಿ, 16 ಆಕ್ಸಿಜನ್‌ ಘಟಕಗಳ ಪೈಕಿ 15 ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಖಾಸಗಿ ಆಸ್ಪತ್ರೆಗಳೂ ಚಿಕಿತ್ಸೆಗೆ ಸಿದ್ಧಗೊಂಡಿವೆ ಎಂದರು.

Advertisement

ಬೂಸ್ಟರ್‌ ಡೋಸ್‌ ನೀಡಿಕೆಯಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಬೇಕು, ತಹಶೀಲ್ದಾರರು ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು ತಾಲೂಕು ಮಟ್ಟದಲ್ಲಿ ಹೆಚ್ಚಿನ ನೋಂದಣಿ ಆಗುವಂತೆ ಅಗತ್ಯ ಗಮನಹರಿಸ ಬೇಕು, ಅರ್ಹರ ಪಟ್ಟಿ ಸಿದ್ಧಪಡಿಸಿ, ಫಲಾನುಭವಿಗಳು ಇರುವ ಸ್ಥಳಕ್ಕೆ ಹೋಗಿ ಲಸಿಕೆ ನೀಡುವ ಕ್ರಮ ಕೈಗೊಳ್ಳಬೇಕೆಂದರು.

ಇದನ್ನೂ ಓದಿ:ಪಾದಯಾತ್ರೆ: ಹೈಕೋರ್ಟ್‌ ಆದೇಶದಂತೆ ನಡೆದುಕೊಳ್ಳುತ್ತೇವೆ: ಸಿದ್ದರಾಮಯ್ಯ

ಡಿಸಿ ಮನ್ನಾ ಜಾಗದ ವರದಿ ಕೊಡಿ
ಜಿಲ್ಲೆಯ ಗ್ರಾಮಗಳಲ್ಲಿ ಡಿಸಿ ಮನ್ನಾ ಸ್ಥಳ ಲಭ್ಯವಿರುವ ವರದಿ ನೀಡಬೇಕು ಹಾಗೂ ಆಯಾ ಗ್ರಾಮದಲ್ಲಿರುವ ಅರ್ಹ ಫಲಾನುಭವಿಗಳ ಮಾಹಿತಿಯನ್ನು ಸಿದ್ಧಪಡಿಸಿ ಎಂದು ಸಚಿವ ಅಂಗಾರ ತಿಳಿಸಿದರು.

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜಿಲ್ಲೆಯಲ್ಲಿ ಡಿಸಿ ಮನ್ನಾ ಸ್ಥಳಕ್ಕೆ ಅರ್ಹರಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳನ್ನು ಗುರುತಿಸಬೇಕು, ಅವರಿಗೆ ಅಗತ್ಯವಿರುವ ಭೂಮಿಯನ್ನು ಮಂಜೂರು ಮಾಡಲು ಸಂಬಂಧಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದರು.ಶಾಸಕ ಯು.ಟಿ. ಖಾದರ್‌ ಅವರು ಮಾತನಾಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ್‌ ಭಗವಾನ್‌ ಸೋನಾವಣೆ, ಮನಪಾ ಆಯುಕ್ತ ಅಕ್ಷಯ್‌ ಶ್ರೀಧರ್‌, ಜಿ.ಪಂ. ಕಾರ್ಯದರ್ಶಿ ಆನಂದ ಕುಮಾರ್‌ ವೇದಿಕೆಯಲ್ಲಿದ್ದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಕಿಶೋರ್‌ ಕುಮಾರ್‌ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಹಾಯಕ ಆಯುಕ್ತರು, ತಹಶೀಲ್ದಾರರು, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next