Advertisement

ಕೋವಿಡ್ : ಮುಂಜಾಗ್ರತೆಯೇ ಬಲುದೊಡ್ಡ ಲಸಿಕೆ

03:28 AM Mar 19, 2021 | Team Udayavani |

ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಎರಡನೇ ಅಲೆ ಕಾಣಿಸಿ­ಕೊಂಡಿದ್ದು ಜನರನ್ನು ತಲ್ಲಣಗೊಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ದೇಶಾದ್ಯಂತ ಕೊರೊನಾ ಸೋಂಕು ವ್ಯಾಪಿಸಲಾರಂಭಿಸಿದ ಪರಿಣಾಮ ಕೇಂದ್ರ ಸರಕಾರ ಲಾಕ್‌ಡೌನ್‌ ಜಾರಿಗೊಳಿಸಿ ಹಲವಾರು ಕಟ್ಟುನಿಟ್ಟಿನ ಮುಂಜಾಗ್ರತ ಕ್ರಮಗಳನ್ನು ಪಾಲಿಸುವಂತೆ ಜನತೆಗೆ ಸೂಚಿಸಿತ್ತು. ಈ ಸಂದರ್ಭದಲ್ಲಿ ದೇಶದ ಒಟ್ಟಾರೆ ವ್ಯವಸ್ಥೆಯಲ್ಲಾದ ಅಲ್ಲೋಲಕಲ್ಲೋಲದ ಪರಿಸ್ಥಿತಿ ಇನ್ನೂ ಜನಮಾನಸದಿಂದ ಮಾಸಿಲ್ಲ.

Advertisement

ಈಗ ಮತ್ತೆ ದೇಶದ ಕೆಲವೊಂದು ಅದರಲ್ಲೂ ಮಹಾರಾಷ್ಟ್ರ, ಪಂಜಾಬ್‌, ಮಧ್ಯಪ್ರದೇಶ, ಕರ್ನಾಟಕ, ಗುಜರಾತ್‌, ತಮಿಳುನಾಡು, ಪಶ್ಚಿಮ ಬಂಗಾಲ ರಾಜ್ಯಗಳಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚುತ್ತಲಿವೆ. ಒಂದೆಡೆಯಿಂದ ಸರಕಾರ ಹಂತಹಂತವಾಗಿ ಕೊರೊನಾ ಲಸಿಕೆ ನೀಡಿಕೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರೆ ಮತ್ತೂಂದೆಡೆಯಿಂದ ಸೋಂಕು ಕೂಡ ಮತ್ತೆ ಸಕ್ರಿಯವಾಗಿದೆ. ಸಹಜವಾಗಿಯೇ ಈ ಬೆಳವಣಿಗೆ ಸರಕಾರ ಮತ್ತು ಜನರನ್ನು ವಿಚಲಿತರನ್ನಾಗಿಸಿದೆ.

ಮಹಾರಾಷ್ಟ್ರದಲ್ಲಿ ಈಗಾಗಲೇ ಕೊರೊನಾ ಎರಡನೇ ಅಲೆ ವ್ಯಾಪಿಸಿರು­ವುದನ್ನು ಕೇಂದ್ರ ಆರೋಗ್ಯ ಸಚಿವಾಲಯ ದೃಢಪಡಿಸಿದೆ. ಬೇರೆ ರಾಜ್ಯ ಗ ಳಲ್ಲೂ ಇದೇ ಭೀತಿ ಇದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಉಳಿದ ರಾಜ್ಯಗಳಲ್ಲೂ ಎರಡನೇ ಅಲೆ ಹರಡುತ್ತಿರುವ ಬಗೆಗೆ ಸರಕಾರದಿಂದ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ­ವಾದರೂ ಇಂತಹ ಒಂದು ಮುನ್ಸೂಚನೆಯಂತೂ ಲಭಿಸಿದೆ. ಕಳೆದ ವರ್ಷದಂತೆ ಈ ಬಾರಿಯೂ ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಲ್ಲಿ ಲಾಕ್‌ಡೌನ್‌, ರಾತ್ರಿ ಕರ್ಫ್ಯೂನಂತಹ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಧ್ಯಪ್ರದೇಶ, ಗುಜರಾತ್‌, ಪಂಜಾಬ್‌ ಮತ್ತು ಉತ್ತರಾಖಂಡ್‌ನ‌ ಕೆಲವೊಂದು ನಗರಗಳಲ್ಲೂ ರಾತ್ರಿ ಕರ್ಫ್ಯೂವನ್ನು ಜಾರಿಗೊಳಿಸಲಾಗಿದೆ. ಕೆಲವೊಂದು ರಾಜ್ಯಗಳಂತೂ ಹೊರ ರಾಜ್ಯಗಳಿಂದ ಬರುವವರಿಗೆ ಆರ್‌ಟಿ-­ಪಿಸಿಆರ್‌ ಪರೀಕ್ಷೆ ಕಡ್ಡಾಯಗೊಳಿಸಿವೆ ಮಾತ್ರವಲ್ಲದೆ ಕೋವಿಡ್‌ ಪ್ರಕರಣ­ಗಳು ಹೆಚ್ಚಿರುವ ರಾಜ್ಯಗಳಿಂದ ಬಂದವರಿಗೆ ಏಳು ದಿನಗಳ ಕ್ವಾರಂಟೈನ್‌ ಅನ್ನು ಕಡ್ಡಾಯಗೊಳಿಸಿದೆ. ಆರ್ಥಿಕವಾಗಿ ತೀವ್ರ ಹಿನ್ನಡೆಗೆ ಕಾರಣ­ವಾಗುವಂತಹ ಇಂತಹ ಕ್ರಮಗಳಿಂದ ಸೋಂಕು ಪಸರಣವನ್ನು ತಡೆಗಟ್ಟಬಹುದು ಎಂಬ ವಾದ ಬಾಲಿಶವಾದೀತು. ಈ ಎಲ್ಲ ಕ್ರಮಗಳು ತಾತ್ಕಾಲಿಕ ಉಪಶಮನ­ಗಳಾದೀತೇ ವಿನಾ ಕೊರೊನಾ ನಿವಾರಣೆಗೆ ಪೂರಕವಾ­ಗದು ಎಂಬುದನ್ನು ಜನಸಾಮಾನ್ಯರು ಮಾತ್ರವಲ್ಲದೆ ಸರಕಾರ ಕೂಡ ಮನಗಾಣಬೇಕಿದೆ.

ಕೊರೊನಾ ಸೋಂಕಿನಿಂದ ಪಾರಾಗಲು ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸ್ವತ್ಛತೆಯಂಥ ಕಟ್ಟುನಿಟ್ಟಿನ ಕ್ರಮಗಳ ಪಾಲನೆ ಅನಿವಾರ್ಯ. ಕೊರೊನಾ ಸೋಂಕನ್ನು ನಿಗ್ರಹಿಸಬಲ್ಲ ಪ್ರತಿರೋಧಕವನ್ನು ನಮ್ಮ ದೇಹದಲ್ಲಿ ಸೃಷ್ಟಿಸುವಂಥ ಲಸಿಕೆಯನ್ನು ಸಂಶೋಧಿಸಲಾಗಿದ್ದು ಇದರ ನೀಡಿಕೆ ಪ್ರಕ್ರಿಯೆ ಈಗ ದೇಶಾದ್ಯಂತ ನಡೆಯುತ್ತಿದೆ. ಸದ್ಯ ದೇಶದಲ್ಲಿ ಉತ್ಪಾದನೆಯಾಗುತ್ತಿ­ರುವ ಲಸಿಕೆಯ ಪ್ರಮಾಣಕ್ಕನುಗುಣವಾಗಿ ಹಂತ ಹಂತದಲ್ಲಿ ಲಸಿಕೆಯನ್ನು ವಿತರಿಸಲಾಗುತ್ತಿದೆ. ಇತರ ದೇಶಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಲಸಿಕೆ ನೀಡಿಕೆ ಭರದಿಂದ ಸಾಗಿದ್ದು ಅಲ್ಪಾವಧಿಯಲ್ಲಿ 3.72 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. ಆದರೆ ಇದು ದೇಶದ ಒಟ್ಟಾರೆ ಜನಸಂಖ್ಯೆಯ ಶೇ. 2ರಷ್ಟು ಮಾತ್ರ ಎಂಬುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಸರಕಾರ ಕೋವಿಡ್‌ ಪರೀಕ್ಷೆ ಮತ್ತು ಲಸಿಕೆ ವಿತರಣೆ ಪ್ರಕ್ರಿಯೆಗೆ ಇನ್ನಷ್ಟು ವೇಗ ನೀಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next