ಧಾರವಾಡ: ಲಾಕ್‌ಡೌನ್ ಘೋಷಣೆ ಬಳಿಕ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿದ್ದು, ಪಾಸಿಟಿವಿಟಿ ದರ ಶೇ.16ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 34 ಕೋವಿಡ್ ಕೇರ್ ಸೆಂಟರ್ ಗಳನ್ನು ಈಗಾಗಲೇ ಆರಂಭಿಸಲಾಗಿದೆ. 14 ನಗರ ಪ್ರದೇಶಗಳಲ್ಲಿ ಮತ್ತು 20 ಗ್ರಾಮೀಣ ಪ್ರದೇಶಗಳಲ್ಲಿ ಆರಂಭವಾಗಿದ್ದು, ಕೋವಿಡ್ ಸೋಂಕು ಹರಡುವಿಕೆ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಜಿಲ್ಲೆಯಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂದರು.
ಜಿಲ್ಲೆಯಲ್ಲಿ ಕಿಮ್ಸ್ ಆಸ್ಪತ್ರೆಯನ್ನು ಒಳಗೊಂಡಂತೆ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 2400 ಬೆಡ್‌ಗಳಿದ್ದು, 1990 ಬೆಡ್‌ಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರೆ ಇನ್ನೂ 410 ಬೆಡ್‌ಗಳು ಖಾಲಿ ಇವೆ. ಜಿಲ್ಲೆಯಲ್ಲಿ ಈಗಾಗಲೇ ಬೆಡ್ ಮತ್ತು ವೆಂಟಿಲೇಟರ್‌ಗಳ ಕುರಿತ ಒತ್ತಡ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ ಯಾವುದೇ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಲ್ಲ. ಎಂಆರ್‌ಪಿಸಿ, ಐಯುಸಿಎಲ್ ಮತ್ತು ಎಲ್ ಆ್ಯಂಡ್ ಟಿ ಸಂಸ್ಥೆಗಳಿಂದ ಜಿಲ್ಲೆಗಳಿಗೆ ಆಕ್ಸಿಜನ್ ಪ್ಲಾಂಟ್‌ಗಳನ್ನು ಕೊಡುಗೆ ನೀಡಲಾಗಿದ್ದು, ಸದ್ಯದಲ್ಲೇ ಭೂಮಿಪೂಜೆ ಮಾಡಿ ಅವುಗಳನ್ನು ಕಾರ್ಯಾರಂಭ ಮಾಡಲಾಗುವುದು ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಾತನಾಡಿ, ಆಕ್ಸಿಜನ್ ಸಮಸ್ಯೆಯನ್ನು ಸರಿಮಾಡಲು ಪ್ರಯತ್ನಿಸುತ್ತಿದ್ದೇವೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪಾಸಿಟಿವ್ ಕೇಸ್ ಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಮುಂದೆ ಆಕ್ಸಿಜನ್ ಕೊರತೆ ಕಂಡುಬರುವುದಿಲ್ಲ. ರಾಜ್ಯಕ್ಕೆ ಅಗತ್ಯವಿರುವಷ್ಟು ಆಮ್ಲಜನಕದ ಸರಬರಾಜು ಪ್ರತಿದಿನ ಆಗುತ್ತಿದೆ ಎಂದರು. ಕಿರಾಣಿ ವ್ಯಾಪಾರಸ್ಥರ ಬೇಡಿಕೆ ಆಧಾರದ ಮೇಲೆ ಮೂರು ದಿನ ಬೆಳಗ್ಗೆ 6ರಿಂದ 12 ಗಂಟೆವರೆಗೆ ವ್ಯಾಪಾರಕ್ಕಾಗಿ ಅವಕಾಶ ಮಾಡಲಾಗಿತ್ತು. ಜನಸಂದಣಿಯನ್ನು ನಿಯಂತ್ರಿಸಲು ನಿರ್ದಿಷ್ಟ ಅವ ಧಿಯನ್ನು ನೀಡಲಾಗಿದೆ. ಸರ್ಕಾರದ ಎಲ್ಲ ಮಾರ್ಗಸೂಚಿಗಳ ಹೊರತಾಗಿಯೂ ಸಾರ್ವಜನಿಕರು ಕೋವಿಡ್ ನಿಯಂತ್ರಣಕ್ಕಾಗಿ ಸ್ವಯಂ ನಿಯಂತ್ರಣ ಮಾಡಿಕೊಳ್ಳಬೇಕಾಗಿದೆ ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಗೂ ಮುನ್ನ ಭಾರತೀಯ ಜೈನ ಸಂಘಟನೆ ಸ್ಥಾಪಿಸಿರುವ ಆಕ್ಸಿಜನ್ ಬ್ಯಾಂಕ್‌ಅನ್ನು ಸಚಿವರು ಉದ್ಘಾಟಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಡಿಸಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಲಾಬೂರಾಮ, ಜಿಪಂ ಸಿಇಒ ಡಾ| ಸುಶೀಲಾ, ಎಸ್‌ಪಿ ಕೃಷ್ಣಕಾಂತ ಇದ್ದರು.