ಚಿಕ್ಕಮಗಳೂರು: ಜಿಲ್ಲೆಯ ಕಡೂರಿನ ಬಾಲಕನೋರ್ವನಿಗೆ ಕೋವಿಡ್ -19 ಪಾಸಿಟಿವ್ ಕಂಡು ಬಂದ ನಂತರ ಮತ್ತೆ ಮೂರು ಬಾರಿ ಟೆಸ್ಟ್ ಮಾಡಿದಾಗಲೂ ನೆಗೆಟಿವ್ ವರದಿ ಬಂದಿದ್ದು, ಸದ್ಯ ಜಿಲ್ಲೆಯ ಜನರು ಲ್ಯಾಬ್ ಮೇಲೆ ಅನುಮಾನ ಪಡುವಂತಾಗಿದೆ.
ಕಡೂರಿನ ಬಾಲಕನಿಗೆ ಕೋವಿಡ್-19 ಪಾಸಿಟಿವ್ ವರದಿ ಬಂದಿತ್ತು. ಐಸೊಲೇಶನ್ ವಾರ್ಡ್ ನಲ್ಲಿ ದಾಖಲಾದ ಬಳಿಕ ಮೂರು ಬಾರಿ ಪರೀಕ್ಷೆ ನಡೆಸಿದಾಗಲೂ ಬಾಲಕನ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಲಭ್ಯವಾಗಿದೆ.
ಬಾಲಕನಿಗೆ ಕೋವಿಡ್ ಸೋಂಕು ದೃಢವಾಗಿದ್ದರೂ ಆತನಿಗೆ ಯಾವುದೇ ಸೋಂಕು ಲಕ್ಷಣಗಳಿಲ್ಲ. ಆಸ್ಪತ್ರೆಯಲ್ಲಿ ಆತನಿಗೆ ಯಾವುದೇ ಚಿಕಿತ್ಸೆ ನೀಡಲಾಗುತ್ತಿಲ್ಲ.
ಜಿಲ್ಲೆಯಲ್ಲಿ ಈ ಮೊದಲೂ ಫಾಲ್ಸ್ ರಿಪೋರ್ಟ್ ಗಳು ಬಂದಿತ್ತು. ಈ ಮೊದಲು ವೈದ್ಯ, ಗರ್ಭಿಣಿ ಪ್ರಕರಣದಲ್ಲೂ ಹೀಗೆ ಎಡವಟ್ಟಾಗಿತ್ತು. ಮೊದಲು ಪಾಸಿಟಿವ್ ವರದಿ ಬಂದ ನಂತರ ನೆಗೆಟಿವ್ ಎಂದು ವರದಿ ಬಂದಿತ್ತು. ಈಗ ಕಡೂರಿನ ವಿದ್ಯಾರ್ಥಿಯ ವರದಿ ಕೂಡಾ ಹೀಗೆ ಆಗಿದ್ದು, ಜಿಲ್ಲೆಯ ಜನರಲ್ಲಿ ಲ್ಯಾಬ್ ಮೇಲೆಯೇ ಅನುಮಾನ ಮೂಡುವಂತೆ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಸ್ತುವಾರಿ ಸಚಿವ ಸಿ ಟಿ ರವಿ, ಬಾಲಕನ ಸಂಪರ್ಕಕ್ಕೆ ಬಂದ 60 ಜನರನ್ನು ಪರೀಕ್ಷೆ ಮಾಡಿದ್ದು, ಅವರೆಲ್ಲರ ವರದಿಯೂ ನೆಗೆಟಿವ್ ಬಂದಿದೆ. ತಾಂತ್ರಿಕವಾಗಿ ತಪ್ಪಾಗಿರಬಹುದು. ಹಾಗಾಗಿ ಮೊದಲು ಟೆಸ್ಟ್ ಮಾಡಿದ ಸ್ಯಾಂಪಲ್ ಅನ್ನೇ ಮತ್ತೆ ಪರೀಕ್ಷಿಸಲು ಸೂಚಿಸಲಾಗಿದೆ. ಎರಡು ದಿನದಲ್ಲಿ ವರದಿ ಬರಲಿದೆ ಎಂದರು.