Advertisement

ಬೆಳಗಾವಿ ಜಿಲ್ಲೆಯ 57 ಪೊಲೀಸ್ ಪೇದೆಗಳಿಗೆ ಪಾಸಿಟಿವ್

11:58 AM Jan 19, 2022 | Team Udayavani |

ಬೆಳಗಾವಿ: ದಿನದಿಂದ ದಿನಕ್ಕೆ ಬೆಳಗಾವಿಯಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದ್ದು, ಮಹಾನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಇನ್ಸಪೆಕ್ಟರ್ ಸೇರಿ 35, ಜಿಲ್ಲೆಯ 8 ಹಾಗೂ ಕೆಎಸ್‌ಆರ್‌ಪಿ ತುಕಡಿಯ 14 ಪೊಲೀಸ್ ಪೇದೆಗಳು ಸೇರಿ ಒಟ್ಟು 57 ಮಂದಿಗೆ ಕೋವಿಡ್ ಸೋಂಕು ವಕ್ಕರಿಸಿದೆ. ಈ ಪೈಕಿ ಇಬ್ಬರು ಗುಣಮುಖರಾಗಿದ್ದಾರೆ.

Advertisement

ಬೆಂಗಳೂರಿನಲ್ಲಿ ಅತಿ ಹೆಚ್ಚು ಪೊಲೀಸರಿಗೆ ಸೋಂಕು ತಗುಲಿದ್ದರಿಂದ ಬೆಳಗಾವಿಯಲ್ಲಿಯೂ ಮುಂಜಾಗ್ರತ ಕ್ರಮವಾಗಿ ಕೋವಿಡ್ ತಪಾಸಣೆ ನಡೆಸಲಾಗಿತ್ತು. ಈ ವೇಳೆ ನಗರದ ಎಪಿಎಂಸಿ ಇನ್ಸಪೆಕ್ಟರ್, ಇಬ್ಬರು ಪಿಎಸ್‌ಐ ಸೇರಿ 35 ಪೇದೆಗಳಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಇದರಲ್ಲಿ ಮಂಗಳವಾರ ಒಂದೇ ದಿನ 16 ಮಂದಿಗೆ ಸೋಂಕು ತಗುಲಿದ್ದು, ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಬೆಳಗಾವಿ ಜಿಲ್ಲೆಯ 8 ಹಾಗೂ ಕೆಎಸ್‌ಆರ್‌ಪಿ ಪಡೆಯ 14 ಪೇದೆಗಳಿಗೆ ಸೋಂಕು ತಗುಲಿದೆ. ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.

ಎಪಿಎಂಸಿ ಪೊಲೀಸ್ ಠಾಣೆಯಲ್ಲಿ 11 ಮಂದಿಗೆ ಸೋಂಕು ತಗುಲಿದೆ. ಮಂಗಳವಾರ ಇಡೀ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಸೋಂಕು ತಗುಲಿದ ಎಲ್ಲರೂ ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದುಕೊಂಡಿದ್ದಾರೆ. ಕೆಲವರಿಗೆ ರೋಗ ಲಕ್ಷಣಗಳು ಇದ್ದು, ಆದರೆ ಯಾರಿಗೂ ಗಂಭೀರ ಸಮಸ್ಯೆ ಇಲ್ಲ. ಆತಂಕ ಪಡುವ ಅಗತ್ಯವೂ ಇಲ್ಲ ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ತಿಳಿಸಿದರು.

ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬಾರದು. ವಾರಾಂತ್ಯ ಕರ್ಪ್ಯೂ ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸಬೇಕು. ದಿನಸಿ ವಸ್ತುಗಳನ್ನು ಹೆಚ್ಚು ದಿನಗಳಿಗೆ ಆಗುವಷ್ಟು ಖರೀದಿಸಬೇಕು. ಸಮೀಪದ ಮಾರುಕಟ್ಟೆಯಲ್ಲಿ ಖರೀದಿಸಬೇಕು. ಯಾವುದೇ ಕಾರಣಕ್ಕೂ ಕುಂಟು ನೆಪ ಹೇಳಿ ಜನರು ಓಡಾಡಬಾರದು. ಕೋವಿಡ್ ನಿಯಂತ್ರಣಕ್ಕೆ ಪೊಲೀಸರೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಡಿಸಿಪಿ ಗಡಾದಿ ಮನವಿ ಮಾಡಿದ್ದಾರೆ.

418 ಮಂದಿಗೆ ಪಾಸಿಟಿವ್: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಏರಿಕೆ ಆಗಿದ್ದು, ಮಂಗಳವಾರ ಒಟ್ಟು 418 ಜನರಿಗೆ ಸೋಂಕು ತಗುಲಿದೆ. ಬೆಳಗಾವಿ ನಗರ ಮತ್ತು ತಾಲೂಕಿನಲ್ಲಿ 270, ಅಥಣಿ 33, ಬೈಲಹೊಂಗಲ 8, ಚಿಕ್ಕೋಡಿ 29, ಗೋಕಾಕ 12, ಹುಕ್ಕೇರಿ 10, ಖಾನಾಪುರ 4, ರಾಮದುರ್ಗ 10, ರಾಯಬಾಗ 9, ಸವದತ್ತಿ 3 ಸೇರಿ ಒಟ್ಟು 418 ಪಾಸಿಟಿವ್ ವರದಿ ಆಗಿವೆ. 2679 ಸಕ್ರಿಯ ಪ್ರಕರಣಗಳಿವೆ. ಇನ್ನೂ 3581 ಜನರ ವರದಿ ಬರುವುದು ಬಾಕಿ ಇದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next