Advertisement
ಕೊರೊನಾ ಹೆಚ್ಚಿರುವ ನಗರಗಳಲ್ಲಿ ಸದ್ಯ ಒಬ್ಬ ಸೋಂಕುಪೀಡಿತನಿಗೆ ಮೂವರು ಸಂಪರ್ಕಿತರು ಸಿಗುತ್ತಿದ್ದಾರೆ. ಆದರೆ ಆಪ್ತತೆ ಹೆಚ್ಚಿರುವ, ಕೊರೊನಾ ಅರಿವಿನ ಕೊರತೆ ಕಡಿಮೆ ಇರುವ ಹಳ್ಳಿಗಳಲ್ಲಿ ಸಂಪರ್ಕಿತರು ನಾಲ್ಕು ಪಟ್ಟು ಹೆಚ್ಚಿದ್ದಾರೆ. ಕಳೆದ ಒಂದು ವಾರದಲ್ಲಿ ರಾಜ್ಯದ 17 ಜಿಲ್ಲೆಗಳಲ್ಲಿ ತಲಾ ಒಬ್ಬ ಸೋಂಕು ಪೀಡಿತನಿಗೆ 10ಕ್ಕೂ ಅಧಿಕ ಸಂಪರ್ಕಿತರು ಪತ್ತೆಯಾಗಿದ್ದಾರೆ. ಮಂಡ್ಯ, ದಾವಣಗೆರೆ ಜಿಲ್ಲೆಗಳಲ್ಲಿ ಈ ಪ್ರಮಾಣ ಶೇ. 20ರಷ್ಟಿದೆ.
ಈ ಸಂಪರ್ಕಿತರು 14 ದಿನ ಕ್ವಾರಂಟೈನ್‌ನಲ್ಲಿರಬೇಕು. ಆದರೆ ಗ್ರಾಮೀಣ ಭಾಗದಲ್ಲಿ ಸೋಂಕು ಪೀಡಿತರಿಗೆ ಆರೈಕೆ, ಚಿಕಿತ್ಸೆ, ಸಂಪರ್ಕಿತರಿಗೆ ಕಡ್ಡಾಯ ಕ್ವಾರಂಟೈನ್ ಕಷ್ಟವಾಗುತ್ತಿದೆ. ಮನೆಗಳೇ ಇಲ್ಲದ ಅನೇಕರಿದ್ದು, ನಿಗಾ ಕಷ್ಟವಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Related Articles
ಸಂಪರ್ಕಿತರ ಕಡ್ಡಾಯ ಪರೀಕ್ಷೆ ನಡೆಯಬೇಕು ಎಂದು ಕೇಂದ್ರ ಸರಕಾರ ತಿಳಿಸಿದೆ. ಪ್ರಯೋಗಾಲಯ ಮತ್ತು ರ್ಯಾಪಿಡ್ ಕಿಟ್ ಕೊರತೆಯಿಂದ ಬಹುತೇಕ ಜಿಲ್ಲೆಗಳಲ್ಲಿ ಇದಾಗುತ್ತಿಲ್ಲ. ಸಂಪರ್ಕಿತರ ಕ್ವಾರಂಟೈನ್ ಮತ್ತು ಪರೀಕ್ಷೆ ಸಾಧ್ಯವಾಗದಿದ್ದರೆ ಸೋಂಕು ಹೆಚ್ಚಳವಾಗುತ್ತದೆ. ಶೀಘ್ರವೇ ಈ ಬಗ್ಗೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
Advertisement