ಕುಂದಾಪುರ: ಕೆಎಸ್‌ಆರ್‌ಟಿಸಿ ಬಸ್ ಚಾಲಕರು – ನಿರ್ವಾಹಕರ ಗಂಟಲ ದ್ರವದ ಪರೀಕ್ಷೆಗಳನ್ನು ಮಾಡಲಾಗಿದ್ದು, ಸೋಮವಾರ ಮೂವರು ಚಾಲಕರಿಗೆ ಕೋವಿಡ್ ಸೋಂಕು ಇರುವುದು ದೃಢವಾಗಿದೆ.
ಬಸ್ರೂರಿನ 58 ವರ್ಷದ, ಬಾಗಲಕೋಟೆ ಮೂಲದ 36 ವರ್ಷದ ಹಾಗೂ 44 ವರ್ಷದ ಮೂವರು ಬಸ್ ಚಾಲಕರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಮೂವರು ಕೂಡ ಕುಂದಾಪುರದಿಂದ ಹೊರ ಜಿಲ್ಲೆಗಳಿಗೆ ಸಂಚರಿಸುವ ಬಸ್‌ಗಳ ಚಾಲಕರಾಗಿದ್ದರು.
ಗುರುವಾರ ಕುಂದಾಪುರದಲ್ಲಿರುವ ಕೆಎಸ್‌ಆರ್‌ಟಿಸಿ ಡಿಪೋದ ಸಿಬಂದಿ, ಬಸ್ ಚಾಲಕರು, ನಿರ್ವಾಹಕರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಬಂದಿದ್ದು, ಅದರಲ್ಲಿ ಮೂವರಿಗೆ ಪಾಸಿಟಿವ್ ಬಂದಿದೆ.
ಕುಂದಾಪುರ – ಬೆಂಗಳೂರು ಬಸ್ ಚಾಲಕ 44 ವರ್ಷದವರಿಗೆ ಸೋಂಕು ದೃಢವಾಗಿದ್ದು, ಅವರನ್ನು ಕುಂದಾಪುರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರ ಪೈಕಿ 58 ವರ್ಷದ ಬಸ್ರೂರು ಮೂಲದವರು ವಯೋಮಿತಿ ಆಧಾರದಲ್ಲಿ ರಜೆಯಲ್ಲಿದ್ದು, ಅವರು ಲಾಕ್‌ಡೌನ್ ಬಳಿಕ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಮತ್ತೂಬ್ಬ 36 ವರ್ಷದ ವ್ಯಕ್ತಿ ಕುಂದಾಪುರ – ಶಿವಮೊಗ್ಗ ಬಸ್ ಚಾಲಕರಾಗಿದ್ದು, ಅವರು ಕೂಡ ಸದ್ಯ ರಜೆಯಲ್ಲಿದ್ದು, ಬಾಗಲಕೋಟೆ ಊರಿಗೆ ತೆರಳಿದ್ದಾರೆ. ಸದ್ಯ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ ಡ್ರೈವರ್ ಕ್ಯಾಬಿನ್ ಪ್ರತ್ಯೇಕವಾಗಿರುವುದರಿಂದ ಪ್ರಯಾಣಿಕರು ಆತಂಕಗೊಳ್ಳಬೇಕಿಲ್ಲ. ಪ್ರಯಾಣಿಕರು ಯಾರೂ ಕೂಡ ಇವರ ಪ್ರಾಥಮಿಕ ಸಂಪರ್ಕದಲ್ಲಿಲ್ಲ ಎಂದು ತಿಳಿದು ಬಂದಿದೆ. ಈ ಮೂವರ ಪ್ರಾಥಮಿಕ ಸಂಪರ್ಕ ಇದ್ದವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.
ಜೂ.30 ರಂದು ಕುಂದಾಪುರದಿಂದ ಬೆಂಗಳೂರಿಗೆ ಹೋಗುವ ಖಾಸಗಿ ಬಸ್‌ಗಳ ಇಬ್ಬರು ಚಾಲಕರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು.