ಬೆಳಗಾವಿ: ಕೋವಿಡ್ ಪಾಸಿಟಿವ್ ರೋಗಿಗೆ ಸರಿಯಾದ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಮೃತನ ಉದ್ರಿಕ್ತರು ಜಿಲ್ಲಾಸ್ಪತ್ರೆ ಮೇಲೆ ಕಲ್ಲು ತೂರಾಟ ನಡೆಸಿ ಅಂಬ್ಯುಲೆನ್ಸ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯ ಘೀ ಗಲ್ಲಿಯಿಂದ 59 ವರ್ಷದ ವ್ಯಕ್ತಿಯನ್ನು ಜುಲೈ 19ರಂದು ಆಸ್ಪತ್ರೆಗೆ ಕರೆ ತರಲಾಗಿತ್ತು. ಕೋವಿಡ್ ಪಾಸಿಟಿವ್ ಆಗಿತ್ತು.ಸೂಕ್ತ ಚಿಕಿತ್ಸೆ ಸಿಗದೇ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾನೆ. ಸೋಂಕಿತ ವ್ಯಕ್ತಿ ಮೃತಪಡುತ್ತಿದ್ದಂತೆ ಏಕಾಏಕಿ ಆಸ್ಪತ್ರೆಗೆ ಬಂದ ಗುಂಪು ಆಸ್ಪತ್ರೆ ಮುಂಭಾಗದಲ್ಲಿ ನಿಂತಿದ್ದ ಆ್ಯಂಬುಲೆನ್ಸ್ ಗೆ ಬೆಂಕಿ ಹಚ್ಚಿದ್ದಾರೆ.
ಆಸ್ಪತ್ರೆಯ ಮುಂದೆ ನಿಂತಿದ್ದ ವೈದ್ಯರ ಕಾರು ಮತ್ತು ಖಾಸಗಿ ಕಾರು ಸೇರಿದಂತೆ ಐದು ಕಾರುಗಳ ಮೇಲೆ ರೊಚ್ಚಿಗೆದ್ದು ಕಲ್ಲು ತೂರಾಟ ನಡೆಸಿದ್ದಾರೆ. ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಎಸ್.ಪಿ ಲಕ್ಷಣ ನಿಂಬರಗಿ, ನಗರ ಪೊಲೀಸ್ ಆಯುಕ್ತ ಡಾ.ಕೆ. ತ್ಯಾಗರಾಜನ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.
ಕೆಎಲ್ ಇ ಮಾರ್ಗದ ಜಿಲ್ಲಾಸ್ಪತ್ರೆ ಗೇಟ್ ಎದುರು ಈ ಗಲಾಟೆ ನಡೆದಿದ್ದು, ಕಲ್ಲು ತೂರಾಟ ನಡೆಸಿ ಅಂಬ್ಯುಲೆನ್ಸ್ ಗೆ ಬೆಂಕಿ ಹಚ್ಚಲಾಗಿದೆ. ಅಂಬ್ಯುಲೆನ್ಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಐಸಿಯು ವಾರ್ಡ್ ಗೆ ನುಗ್ಗಿ ಸಿಬ್ಬಂದಿಗಳ ಮೇಲೂ ಹಲ್ಲೆಗೆ ಯತ್ನಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.