ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೋವಿಡ್ ಪ್ರಮಾಣ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ, ಪತ್ತೆಹಚ್ಚುವಿಕೆ, ಟ್ರೇಸಿಂಗ್, ಚಿಕಿತ್ಸೆ, ಲಸಿಕೆ ಎಂಬ 5 ವಿಧಾನಗಳನ್ನು ಅನುಸರಿಸಲು ಸರ್ಕಾರ ಸುತ್ತೋಲೆ ಹೊರಡಿಸಿದೆ.
ಕೋವಿಡ್ ನಿಯಂತ್ರಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ನಿಗದಿತ ಮಾದರಿಗಳಿಗೆ ಜೀನೋಮಿಕ್ ಸೀಕ್ವೆನ್ಸಿಂಗ್, ಸೆಂಟಿನೆಲ್ ಸೈಟ್‌ಗಳಿಂದ ಮಾದರಿಗಳ ಸಂಗ್ರಹ, ಎಲ್ಲ ಅರ್ಹ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ ನೀಡಿಕೆ ಹೆಚ್ಚಿಸಲು ಪ್ರಚಾರ ಹಾಗೂ ಕೋವಿಡ್ ನಿಮಯ ಅನುಸರಿಸುವಂತೆ ಸೂಚಿಸಲಾಗಿದೆ.
ಸೋಂಕಿನ ಹರಡುವಿಕೆಯ ತಕ್ಷಣಕ್ಕೆ ಪತ್ತೆಹಚ್ಚುವ ಉದ್ದೇಶದಿಂದ ನಿಯಮಿತವಾಗಿ ಇನ್‌ಫುಯೆನ್ನ ತರಹದ ಅನಾರೋಗ್ಯ (ಐಎಲ್‌ಐ) ಹಾಗೂ ಸಾರಿ ಪ್ರಕರಣಗಳ ಮೇಲ್ವಿಚಾರಣೆ ಮಾಡಬೇಕು. ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಸ್ಯಾನಿಟೈಜ್ ಮಾಡುವ ನಿಮಯ ಅನುಸರಿಸಬೇಕು. ಕೋವಿಡ್ ಪರಿಣಾಮಕಾರಿಯಾಗಿ ನಿಯಂತ್ರಿಸುವ ಉದ್ದೇಶದಿಂದ ಹೊಸ ಕೋವಿಡ್ ಕೇಸ್ ಕಂಡು ಬಂದಲ್ಲಿ ಕ್ಲಸ್ಟರ್ ಮಾಡಿ ಮೇಲ್ವಿಚಾರಣೆ ಮಾಡಬೇಕು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಕೆಲ ಜಿಲ್ಲೆಗಳಲ್ಲಿ ಕೋವಿಡ್ ಅತ್ಯಧಿಕ:
ರಾಜ್ಯದಲ್ಲಿ ಕೋವಿಡ್ ಧನಾತ್ಮಕ ದರ ಶೇ.2.77 ಇದ್ದು, ಇದು ದೇಶದ ಧನಾತ್ಮಕ ಪ್ರಕರಣಗಳಿಗಿಂತ (ಶೇ 0.61) ಹೆಚ್ಚಾಗಿದೆ. ಶಿವಮೊಗ್ಗ, ಕಲಬುರಗಿ, ಮೈಸೂರು ಹಾಗೂ ಉತ್ತರ ಕನ್ನಡದಲ್ಲಿ ಸೋಂಕಿನ ಪ್ರಕರಣಗಳು ಅತ್ಯಧಿಕವಾದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ರಾಜ್ಯದಲ್ಲಿ ಮಾ.8ರಂದು ದಾಖಲಾಗಿದ್ದ 493 ಪ್ರಕರಣಗಳ ಪ್ರಮಾಣ ಮಾ.15ಕ್ಕೆ 604ಕ್ಕೆ ಏರಿಕೆಯಾಗಿರುವುದು ಮತ್ತೆ ಆತಂಕ ಹುಟ್ಟಿಸಿದೆ.
Related Articles
121 ಕೋವಿಡ್ ಕೇಸ್
ರಾಜ್ಯದಲ್ಲಿ ಶನಿವಾರ 121 ಹೊಸ ಕೋವಿಡ್ ಸೋಂಕು ವರದಿಯಾಗಿದೆ. ಬೆಂಗಳೂರು ನಗರದಲ್ಲಿ 69, ಶಿವಮೊಗ್ಗ 20, ಕೋಲಾರ ಮತ್ತು ಕಲಬುರಗಿಯಲ್ಲಿ ತಲಾ 6, ಬಳ್ಳಾರಿಯಲ್ಲಿ 5, ಬೆಂಗಳೂರು ಗ್ರಾಮಾಂತರದಲ್ಲಿ 4, ಹಾಸನ ಮತ್ತು ಹಾವೇರಿಯಲ್ಲಿ ತಲಾ ಇಬ್ಬರು ಹಾಗೂ ಬೆಳಗಾವಿ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಧಾರವಾಡ, ರಾಯಚೂರು, ರಾಮನಗರ ಮತ್ತು ಉತ್ತರ ಕನ್ನಡದಲ್ಲಿ ತಲಾ ಒಬ್ಬರಂತೆ ರಾಜ್ಯದಲ್ಲಿ ಒಟ್ಟು 121 ಕೋವಿಡ್ ಪ್ರಕರಣ ದಾಖಲಾಗಿದೆ. ದಿನದ ಸೋಂಕಿನ ಪ್ರಮಾಣ ದರ ಶೇ.3.13ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 577ಕ್ಕೆ ಹೆಚ್ಚಿದೆ.