ಮುಂಬಯಿ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 3,25,695ಕ್ಕೆ ತಲುಪಿದೆ. ರಾಜ್ಯವು ಸಮುದಾಯ ಪ್ರಸರಣ ಹಂತಕ್ಕೆ ಪ್ರವೇಶಿಸಿರಬಹುದೆಂದು ಕೆಲವು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದು, ಈ ಹೇಳಿಕೆಯನ್ನು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಅವರು ನಿರಾಕರಿಸಿದ್ದಾರೆ. ನಾವು ಇಲ್ಲಿಯವರೆಗೆ ಎಲ್ಲ ಸಂಪರ್ಕಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ. ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಈಗ ಅದರ ಬಗ್ಗೆ ಏನನ್ನೂ ಹೇಳಿಲ್ಲ. ಅವರು ಹೇಳಿದ ಬಳಿಕ ನಾವು ಅದನ್ನು ಪರಿಶೀಲಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಸಮುದಾಯ ಹರಡುವಿಕೆ ಪ್ರಾರಂಭವಾಗಿದೆ ಎಂದು ರಾಜ್ಯದ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ನಿಯಂತ್ರಣ ಮತ್ತು ತಾಂತ್ರಿಕ ಸಮಿತಿಯ ಮುಖ್ಯಸ್ಥರಾಗಿರುವ ಸಾರ್ವಜನಿಕ ಆರೋಗ್ಯ ತಜ್ಞ ಡಾ| ಸುಭಾಷ್ ಸಲುಂಖೆ ಅಭಿಪ್ರಾಯಪಟ್ಟಿದ್ದಾರೆ.
ಸಮುದಾಯ ಪ್ರಸರಣ ಹಂತಕ್ಕೆ ತಲುಪಿದೆ: ಐಎಂಎ ಕೋವಿಡ್ ಪ್ರಕರಣ ವೇಗವಾಗಿ ಹರಡುತ್ತಿದ್ದು, ದೇಶವು ಸಮುದಾಯ ಪ್ರಸರಣ ಹಂತವನ್ನು ತಲುಪಿದೆ ಎಂದು ಭಾರತೀಯ
ವೈದ್ಯಕೀಯ ಸಂಘ (ಐಎಂಎ) ಶನಿವಾರ ಹೇಳಿದ್ದು, ರಾಜ್ಯದಲ್ಲಿ ದಿನಕ್ಕೆ 9,000ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿದೆ. ಜುಲೈ 18ರಂದು 3 ಲಕ್ಷ ಪ್ರಕರಣಗಳ ಮೈಲಿಗಲ್ಲನ್ನು
ರಾಜ್ಯ ದಾಟಿದೆ. ರಾಜ್ಯ ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಸಾವಿನ ಸಂಖ್ಯೆ 12 ಸಾವಿರ ದಾಟಿದೆ. ಸಂಪರ್ಕಗಳಿಲ್ಲದ ಪ್ರಕರಣಗಳು ಪತ್ತೆ ಮುಂಬಯಿ ಮತ್ತು ಪುಣೆಯಂತಹ ನಗರಗಳಲ್ಲಿ ಸಮುದಾಯ ಪ್ರಸರಣ ಪ್ರಾರಂಭವಾಗಿದೆ. ಈ ಮೊದಲು ಸೋಂಕಿಗೆ ಸಂಪರ್ಕವನ್ನು ಪತ್ತೆಹಚ್ಚುತ್ತಿದ್ದೆವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸೋಂಕಿತ ಜನರಿಗೆ ಅಂತಹ ಸಂಪರ್ಕಗಳಿಲ್ಲ. ಇದರಿಂದ ಸಮುದಾಯದಲ್ಲಿ ಹರಡಿದೆ ಎಂದು ನಾವು ಒಪ್ಪಿಕೊಳ್ಳಬೇಕಾಗಿದೆ ಎಂದು ಡಾ| ಸಲೂಂಖೆ ಹೇಳಿದರು.
ಆರೋಗ್ಯ ಮೂಲ ಸೌಕರ್ಯ ಹೆಚ್ಚಿಸುವ ಅಗತ್ಯವಿದೆ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜ್ಯ ಎದುರಿಸುತ್ತಿರುವ ಒಂದು ಪ್ರಮುಖ ಸಮಸ್ಯೆ ಆರೋಗ್ಯ ಸಿಬಂದಿ ಕೊರತೆ, ಇದರಲ್ಲಿ ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬಂದಿಗಳು ಸೇರಿದ್ದಾರೆ. ರಾಜ್ಯದ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕರೆದ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ. ವೈದ್ಯರು ಸೇರಿದಂತೆ ಆರೋಗ್ಯ ಸಿಬಂದಿ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಣ್ಣ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳೊಂದಿಗೆ, ಅಲ್ಲಿನ ಆರೋಗ್ಯ ಮೂಲ ಸೌಕರ್ಯಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿಗೆ ತಿಳಿಸಲಾಯಿತು. ಆದರೆ ನಿಜವಾದ ಸಮಸ್ಯೆ ಆರೋಗ್ಯ ಸಿಬಂದಿಗಳ ಲಭ್ಯತೆಯಾಗಿದೆ. ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬಹುದು ಆದರೆ ವೈದ್ಯರನ್ನು ಒಳಗೊಂಡಂತೆ ಆರೋಗ್ಯ ಸಿಬಂದಿಯನ್ನು ನಾವು ಎಲ್ಲಿಂದ ಪಡೆಯುತ್ತೇವೆ ಎಂಬುದು ಒಂದು ದೊಡ್ಡ ಸಮಸ್ಯೆಯಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಅದಿಕಾರಿಯೊಬ್ಬರು ಹೇಳಿದರು.
ಉಪನಗರಗಳಲ್ಲಿ ಕ್ಷೇತ್ರ ಆಸ್ಪತ್ರೆಗಳ ನಿರ್ಮಾಣ ಸೋಂಕನ್ನು ಎದುರಿಸಲು ಪ್ರತಿಯೊಂದು ಜಿಲ್ಲೆಯಲ್ಲೂ ಆರೋಗ್ಯ ಮೂಲಸೌಕರ್ಯ ಹೆಚ್ಚಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಇದು ಮುಂಬಯಿಯಲ್ಲಿ ಕ್ಷೇತ್ರ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ಎಂಎಂಆರ್‌ನ ಇತರ 8 ಉಪ ನಗರಗಳಾದ ಥಾಣೆ, ನವಿಮುಂಬಯಿ, ಕಲ್ಯಾಣ್-ಡೊಂಬಿವಲಿ,
ಮೀರಾ-ಭಾಯಂದರ್, ಉಲ್ಲಾಸ್‌ನಗರ, ಪನ್ವೆಲ್, ವಸಾಯಿ-ವಿರಾರ್ ಮತ್ತು ಭಿವಂಡಿ-ನಿಜಾಂಪುರಗಳಲ್ಲಿ ಇದೇ ರೀತಿಯ ಕ್ಷೇತ್ರ ಆಸ್ಪತ್ರೆಗಳನ್ನು ನಿಯೋಜಿಸಲು ಸರಕಾರ
ಮುಂದಾಗಿದೆ.