Advertisement

ವ್ಯವಸ್ಥಿತ ರೀತಿಯಲ್ಲಿ ಕೋವಿಡ್ ನಿರ್ವಹಣೆ : ಅಧಿಕಾರಿಗಳೇ ಹೊಣೆ

03:30 AM Jul 15, 2021 | Team Udayavani |

ಹೊಸದಿಲ್ಲಿ : ಕೊರೊನಾ ನಿಯಮಾವಳಿ ಮೀರಿ ಪ್ರವಾಸಿ ಕ್ಷೇತ್ರಗಳಲ್ಲಿ ಜನ ಓಡಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ ಪರಿಸ್ಥಿತಿ ಕೈಮೀರಿದರೆ ಸ್ಥಳೀಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲು ಮುಂದಾಗಿದೆ.

Advertisement

ಈ ಸಂಬಂಧ ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿ ರೂಪದಲ್ಲಿ ಪತ್ರ ಬರೆದಿದ್ದು, ಗಿರಿಧಾಮ, ಮಾರುಕಟ್ಟೆಗಳಲ್ಲಿ ಕೊರೊನಾ ನಿಯಮಾವಳಿ ಮೀರುತ್ತಿರುವ ಬೆಳವಣಿಗೆ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಇಂಥ ಜಾಗಗಳಲ್ಲಿ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಭಲ್ಲಾ ಈ ಪತ್ರ ಬರೆದಿದ್ದು, ಸಾರ್ವಜನಿಕ ಸಾರಿಗೆ, ಮಾರುಕಟ್ಟೆಗಳಲ್ಲಿ ಮಾಸ್ಕ್ ಧರಿಸದೇ ಇರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವುದು ಕಂಡುಬಂದಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ಇನ್ನೂ ಹೋಗಿಲ್ಲ. ನಿಯಮಾವಳಿಗಳನ್ನು ಕೈಬಿಡುವ ಸನ್ನಿವೇಶವೂ ಉದ್ಭವವಾಗಿಲ್ಲ. ಹೀಗಾಗಿ ಪ್ರತಿಯೊಬ್ಬರು ನಿಯಂತ್ರಣ ಕ್ರಮಗಳನ್ನು ಅನುಸರಿಸಲೇಬೇಕು ಎಂದು ಸೂಚಿಸಿದ್ದಾರೆ.

ಒಂದು ವೇಳೆ ನಿಯಮಾವಳಿ ಪಾಲನೆಯಾಗದಿದ್ದರೆ ಲಾಕ್‌ ಡೌನ್‌ ನಂತ ನಿರ್ಬಂಧಗಳನ್ನು ಮತ್ತೆ ಜಾರಿ ಮಾಡಬಹುದು. ಹಾಗೆಯೇ ಕಾನೂನು ಕ್ರಮ ಜರಗಿಸಬಹುದಾಗಿದೆ ಎಂದು ಅವರು ಸೂಚನೆ ನೀಡಿದ್ದಾರೆ.

ಲಸಿಕಾ ನಿಧಾನ : ಕೇಂದ್ರ ಆತಂಕ
ಕೊರೊನಾ ಮೂರನೇ ಆತಂಕದ ನಡುವೆ ರಾಜ್ಯಗಳಲ್ಲಿ ನಿಧಾನಗತಿಯ ಲಸಿಕಾ ಪ್ರಕ್ರಿಯೆಯಾಗುತ್ತಿರುವುದಕ್ಕೆ ಕೇಂದ್ರ ಸರಕಾರ ಆತಂಕ ವ್ಯಕ್ತಪಡಿಸಿದೆ. ಬುಧವಾರ ಕೇಂದ್ರ ಆರೋಗ್ಯ ಇಲಾಖೆ, ಕರ್ನಾಟಕವೂ ಸೇರಿದಂತೆ 15 ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳ ಜತೆಗೆ ವೀಡಿಯೋ ಸಂವಾದ ನಡೆಸಿತು.

Advertisement

8 ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಕೇಸ್‌
ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ 8 ಜಿಲ್ಲೆಗಳಲ್ಲಿ ಮಾತ್ರ ನಿತ್ಯ ಸರಾಸರಿ 100ಕ್ಕಿಂತ ಅಧಿಕ ಕೊರೊನಾ ಸೋಂಕು ಹೊಸ ಪ್ರಕರಣಗಳು ವರದಿಯಾಗಿವೆ. ರಾಜ್ಯ ಕೊರೊನಾ ವಾರ್‌ರೂಂ ಮಾಹಿತಿಯಂತೆ ಬೆಂಗಳೂರು, ಬೆಳಗಾವಿ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಹಾಸನ, ತುಮಕೂರು ಮಾತ್ರ ನೂರಕ್ಕಿಂತ ಹೆಚ್ಚಿದ್ದು, ಬಾಕಿ 23 ಜಿಲ್ಲೆಗಳಲ್ಲಿ ಎರಡಂಕಿಯಷ್ಟು ವರದಿಯಾಗುತ್ತಿವೆ. ಅಲ್ಲದೆ 8 ಜಿಲ್ಲೆಗಳಲ್ಲಿ ನಿತ್ಯ ಬೆರಳೆಣಿಕೆಯಷ್ಟು ಮಾತ್ರ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಉಳಿದಂತೆ 10 ನಗರಗಳಲ್ಲಿ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳ 10 ಗ್ರಾಮಗಳಲ್ಲಿ ಕಳೆದ ವಾರಕ್ಕಿಂತ ಸೋಂಕು ಹೆಚ್ಚಳವಾಗಿದೆ.

ಹೆಚ್ಚಳವಾಗಿರುವ ಪ್ರಮುಖ 10 ನಗರ:
ಅಂಕೋಲಾ, ಯಲ್ಲಾಪುರ, ಕುರೇಕುಪ್ಪಾ, (ಬಳ್ಳಾರಿ) ಗೋಕಾಕ್‌, ಎನ್‌.ಆರ್‌ಪುರ, (ಚಿಕ್ಕಮಗಳೂರು) ತುರುವೇಕೆರೆ, ಸುಳ್ಯ, ನಿಪ್ಪಾಣಿ, ಸಕಲೇಶಪುರ, ಕಾರವಾರ.

ಸತತ 2ನೇ ದಿನ ಹೆಚ್ಚಳ
ರಾಜ್ಯದಲ್ಲಿ ಸತತ 2ನೇ ದಿವು ಸೋಂಕು ಪ್ರಕರಣ ಹೆಚ್ಚಳವಾಗಿದ್ದು 2 ಸಾವಿರ ಆಸುಪಾಸು ತಲುಪಿವೆ. ಬುಧವಾರ 1,990 ಮಂದಿಗೆ ತಗಲಿದ್ದು, 45 ಸಾವಾಗಿದೆ. ಮಂಗಳವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ವ್ಯತ್ಯಾಸವಾಗಿಲ್ಲ (1.24 ಲಕ್ಷ). ಹೊಸ ಪ್ರಕರಣಗಳು 77 ಹೆಚ್ಚಳವಾಗಿದ್ದು, ಪಾಸಿಟಿವಿಟಿ ದರ ಶೇ.1.5 ರಿಂದ 1.6ಕ್ಕೆ ಹೆಚ್ಚಿದೆ, ಮರಣ ದರ ಶೇ. 2.3ರಷ್ಟಿದೆ.

ಎಲ್ಲಿ ಸೋಂಕು ಹೆಚ್ಚು?
ಬೆಂಗಳೂರು ನಗರದಲ್ಲಿ 400, ದಕ್ಷಿಣ ಕನ್ನಡ 219, ಮೈಸೂರು 211, ಹಾಸನ 125, ಉಡುಪಿ 120, ಬೆಳಗಾವಿ 140 ಸೋಂಕು ಪ್ರಕರಣಗಳು ವರದಿಯಾಗಿವೆ. ಉಳಿದಂತೆ 18 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಎರಡಂಕಿ ಹಾಗೂ ಆರು ಜಿಲ್ಲೆಗಳಲ್ಲಿ ಒಂದಂಕಿಗೆ ಇಳಿಕೆಯಾಗಿದೆ. ಯಾದಗಿರಿಯಲ್ಲಿ ಶೂನ್ಯವಿದೆ. 13 ಜಿಲ್ಲೆಗಳಲ್ಲಿ ಸಾವಿನ ಸಂಖ್ಯೆ ಶೂನ್ಯ.

Advertisement

Udayavani is now on Telegram. Click here to join our channel and stay updated with the latest news.

Next