ಕಲಬುರಗಿ: ಆಳಂದ ತಾಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಐಸಿಎಂಆರ್ ಮತ್ತುನಿಮ್ಹಾನ್ಸ್ ಅನುಮೋದನೆಯೊಂದಿಗೆ ಕೋವಿಡ್-19 ಸೋಂಕು ಪರೀಕ್ಷಾ ಪ್ರಯೋಗಾಲಯ ಆರಂಭವಾಗಿದ್ದು, ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಜಶೇಖರ ಮಾಲಿ ಉದ್ಘಾಟಿಸಿದರು.
ರಾಜ್ಯ ಸರ್ಕಾರದ 84 ಲಕ್ಷ ರೂ. ಸಹಾಯ ಧನದೊಂದಿಗೆ ಕೋವಿಡ್ ಪತ್ತೆ ಲ್ಯಾಬ್ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಪತ್ತೆ ಸಾಮರ್ಥ್ಯ ಬಲಪಡಿಸಲು ಮತ್ತು ಹೆಚ್ಚಿನ ಜನರಿಗೆ ಸೇವೆ ಸಲ್ಲಿಸಲು ನೂತನ ಲ್ಯಾಬ್ ತುಂಬಾ ಸಹಕಾರಿಯಾಗಲಿದೆ ಎಂದು ಡಿಎಚ್‌ಒ ಡಾ| ಮಾಲಿ ಹೇಳಿದರು.
ಕುಲಪತಿ ಪ್ರೊ| ಎಚ್.ಎಂ. ಮಹೇಶ್ವರಯ್ಯ ಮಾತನಾಡಿ, ಕೋವಿಡ್ ಸಾಂಕ್ರಾಮಿಕ ಸಂಕಷ್ಟದ ಸಂದರ್ಭದಲ್ಲಿ ವಿಶ್ವವಿದ್ಯಾಲಯವು ಲ್ಯಾಬ್ ತೆರೆಯುವ ಮೂಲಕ ತನ್ನ ಸೇವೆ ಕಲ್ಪಿಸಲಿದೆ. ಈ ಲ್ಯಾಬ್ ಭವಿಷ್ಯದಲ್ಲಿ ಸುಧಾರಿತ ರೋಗ ನಿರ್ಣಯ ಮತ್ತು ಸಂಶೋಧನಾ ಪ್ರಯೋಗಾಲಯವಾಗಿ ರೂಪುಗೊಂಡು ಸುಸ್ಥಿರ ಮಾನವ ಆರೋಗ್ಯಕ್ಕೆ ಸಹಕಾರಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಲ್ಯಾಬ್‌ನಲ್ಲಿ ಐಸಿಎಂಆರ್ ಅನುಮೋದಿತ ಸಾಧನಗಳಾದ ಆರ್‌ಟಿ-ಪಿಸಿಆರ್, ಟ್ರೂನಾಟ್, ಆರ್‌ಎನ್‌ಎ ಐಸೊಲೇಷನ್ ಮೆಷಿನ್, ಬಯೋಸೆಫ್ರಿ ಕ್ಯಾಬಿನೆಟ್ ಗಳನ್ನು ಅಳವಡಿಸಲಾಗಿದೆ. ಆರಂಭದಲ್ಲಿ ದಿನಕ್ಕೆ 200 ಮಾದರಿ ಪರೀಕ್ಷಿಸುವ ಸಾಮರ್ಥ್ಯವಿದ್ದು, ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಕಾರ್ಯನಿರ್ವಹಿಸಲಿದೆ. ವಿಶ್ವವಿದ್ಯಾಲಯದ ಮೂರು ಸಂಶೋಧನಾ ಸಹಾಯಕರು ಮತ್ತು ಮೂರು ಸಹಾಯಕ ಪ್ರಾಧ್ಯಾಪಕರು ಲ್ಯಾಬ್‌ಗಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪ್ರಸ್ತುತ ವಿಶ್ವವಿದ್ಯಾನಿಲಯವು ತನ್ನ ಆವರಣದಲ್ಲಿ ಯಾವುದೇ ಕೋವಿಡ್-19 ಮಾದರಿ ಸಂಗ್ರಹಿಸುವುದಿಲ್ಲ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಕಳುಹಿಸಲಾದ ಮಾದರಿ ಮಾತ್ರ ಇಲ್ಲಿ ಪರೀಕ್ಷಿಸಿ ಫಲಿತಾಂಶವನ್ನು ಮರಳಿ ಆಸ್ಪತ್ರೆಗೆ ನೀಡಲಾಗುತ್ತದೆ. ಸಮಕುಲಪತಿ ಪ್ರೊ| ಜಿ.ಆರ್. ನಾಯಕ, ಕೋವಿಡ್ ಟೆಸ್ಟಿಂಗ್ ಲ್ಯಾಬ್‌ನ ಅಧಿಕಾರಿ ಡಾ| ರಾಕೇಶಕುಮಾರ, ಡಾ| ರಾಸ್ಮಿತಾ ಸಮಲ್, ಡಾ| ಕವಿಶಂಕರ ಇದ್ದರು.