Advertisement

ಗೋವಾದಿಂದ ಬಂದ ಮಹಿಳೆಗೆ ಸೋಂಕು

10:06 AM Jul 15, 2020 | Suhan S |

ಗಜೇಂದ್ರಗಡ: ಗೋವಾದಿಂದ ಪಟ್ಟಣಕ್ಕೆ ಆಗಮಿಸಿದ್ದ ಸ್ಥಳೀಯ 65 ವರ್ಷದ ಮಹಿಳೆಗೆ ಕೋವಿಡ್ -19 ದೃಢಪಟ್ಟಿದೆ. ಆದರೆ ಸೋಂಕಿತ ಮಹಿಳೆ ಅಫಜಲಪುರ ತಾಲೂಕಿನ ಗಾಣಗಾಪುರಕ್ಕೆ ತೆರಳಿದ್ದು ಎರಡೂ ಕಡೆ ಆತಂಕವನ್ನುಂಟು ಮಾಡಿದೆ.

Advertisement

ಸ್ಥಳೀಯ ಗೌಳಿ ಗಲ್ಲಿಯ 65 ವರ್ಷದ ಮಹಿಳೆ ಜು. 11ರಂದು ಗೋವಾದಿಂದ ಗಜೇಂದ್ರಗಡಕ್ಕೆ ಆಗಮಿಸಿದ್ದರು. ಇದನ್ನರಿತ ಪಟ್ಟಣದ ಆರೋಗ್ಯ ಇಲಾಖೆ ಅಧಿಕಾರಿಗಳು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ಗಂಟಲು ದ್ರವ ಪರೀಕ್ಷೆ ನಡೆಸಿ ವರದಿ ಬರುವವರೆಗೂ ಹೋಂ ಕ್ವಾರಂಟೈನ್‌ಗೆ ಸೂಚಿಸಿದ್ದರು. ಆದರೆ ಮಹಿಳೆ ತನ್ನ ಮೊಮ್ಮಗಳೊಂದಿಗೆ ಜು. 12ರಂದು ಅಫಜಲಪುರ ತಾಲೂಕಿನ ಗಾಣಗಾಪುರಕ್ಕೆ ಸಂಬಂಧಿ ಕರ ಊರಿಗೆ ತೆರಳಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ.

ಮಂಗಳವಾರ ಮಹಿಳೆಗೆ ಕೋವಿಡ್ ಸೊಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಗೌಳಿ ಗಲ್ಲಿಗೆ ತೆರಳಿದಾಗ ಬಡಾವಣೆ ನಿವಾಸಿಗಳು ಮಹಿಳೆ ಊರಿಗೆ ಹೋಗಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸ್‌ ಇಲಾಖೆ ಮತ್ತು ತಹಶೀಲ್ದಾರ್‌ ಸಭೆ ನಡೆಸಿ ಸೋಂಕಿತೆ ಇರುವ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಾಡಳಿತ ಮತ್ತು ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿ ಮಹಿಳೆಯನ್ನು ಕೋವಿಡ್‌ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯಲು ಸೂಚಿಸಿದ್ದಾರೆ.

ಪಟ್ಟಣದ ಗೌಳಿಗಲ್ಲಿನ ಸೋಂಕಿತೆ ನಿವಾಸ ಸೇರಿ ಸುತ್ತಲಿನ ಪ್ರದೇಶಕ್ಕೆ ಸ್ಯಾನಿಟೈಸರ್‌ ಸಿಂಪಡಿಸಿ ಬಡಾವಣೆ ಸೀಲ್‌ಡೌನ್‌ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next