ಆನೇಕಲ್: ತಾಲೂಕಿನ ಮರಸೂರು ಗೇಟ್ ಬಳಿ ಇರುವ ಸ್ಫೂರ್ತಿ ನರ್ಸಿಂಗ್ ಕಾಲೇಜಿನ 12 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಫೂರ್ತಿ ಕಾಲೇಜು ಹಾಸ್ಟೆಲ್‌ಗೆ ಭೇಟಿ ನೀಡಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಪರಿಶೀಲನೆ ನಡೆಸಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಹಾಗೂ ಕಾಲೇಜು ಆಡಳಿತ ಮಂಡಳಿಗೆ ಸೂಚನೆ ನೀಡಿದರು.
ತಾಲೂಕಿನ ಮರುಸೂರು ಗೇಟ್ ಬಳಿ ಇರುವ ಸ್ಫೂರ್ತಿ ನರ್ಸಿಂಗ್ ಕಾಲೇಜಿನ 12 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಹಾಸ್ಟೆಲ್‌ಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಬಳಿಕ ಅವರು ಮಾತನಾಡಿದರು. ಹೊಸ ರೂಪಾಂತರಿಯೋ?: ದೃಢಪಟ್ಟ 12 ಸೋಂಕಿತರಿಗೆ ಹರಡಿರುವುದು ಹಳೆ ಸೋಂಕು ಆಗಿದೆಯೋ ಅಥವಾ ಒಮಿಕ್ರಾನ್ ರೂಪಾಂತರಿಯೋ ಎಂಬ ಬಗ್ಗೆ ಖಚಿತತೆ ಇಲ್ಲ. ಸ್ಫೂರ್ತಿ ನರ್ಸಿಂಗ್ ಕಾಲೇಜು ಹಾಸ್ಟೆಲ್‌ನಲ್ಲಿ 168 ವಿದ್ಯಾ ರ್ಥಿಗಳಿದ್ದು, ಮೊದಲು ಮೂವರಿಗೆ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಅವರಿಗೆ ಪ್ರಥಮ ಸಂಪರ್ಕ ಹೊಂದಿ ರುವ ವಿದ್ಯಾರ್ಥಿಗಳನ್ನು ತಪಾಸಣೆ ಮಾಡಲು ವೈದ್ಯರ ತಂಡಕ್ಕೆ ಸೂಚನೆ ನೀಡಲಾಗಿದೆ. ಪಾಸಿಟಿವ್ ಆಗಿರುವ ಇಬ್ಬರ ಸ್ವ್ಯಾಬ್ ಮಾದರಿಯನ್ನು ಕೇರಳ ಮತ್ತು ಮುಂಬೈಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಸ್ಯಾನಿಟೈಸ್: ಇದೇ ಕಾಲೇಜಿನಲ್ಲಿ ಬಿ.ಎಸ್ಸಿ ಪರೀಕ್ಷೆ ನಡೆ ಯುತ್ತಿದ್ದು, ಇಲ್ಲಿಗೆ ಬರುವ ವಿದ್ಯಾರ್ಥಿಗಳ ತಪಾಸಣೆ, ಸಾಮಾಜಿಕ ಅಂತರ, ಸ್ಯಾನಿಟೈಸ್ ಮಾಡುವುದು, ಮಾಸ್ಕ್ ಧರಿಸುವುದು ಸೇರಿದಂತೆ ಸುರಕ್ಷತೆ ಕಾಪಾಡಿಕೊಂಡು ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ ಎಂದರು. 50 ಜನರ ಸ್ಯಾಂಪಲ್: ಕೇರಳದಿಂದ ನರ್ಸಿಂಗ್ ಕಾಲೇಜಿಗೆ ಬಂದ ವಿದ್ಯಾರ್ಥಿಗಳಲ್ಲಿನ 9 ಮಂದಿಗೆ ಸೋಂಕು ಕಂಡಿರುವ ಹಿನ್ನೆಲೆಯಲ್ಲಿ ಉಳಿದ ಎಲ್ಲಾ ವಿದ್ಯಾರ್ಥಿಗಳಿಗೂ ತಪಾಸಣೆ ಮಾಡಿ ಅದರಲ್ಲಿ 50 ಜನರ ಸ್ಯಾಂಪಲ್ ಕಳುಹಿಸಿ ವರದಿ ಬಂದ ಬಳಿಕ ಯಾವ ವೈರಸ್ ಎಂಬುದರ ಬಗ್ಗೆ ಮಾಹಿತಿ ತಿಳಿಯಲಿದೆ ಎಂದರು.
ಇದೇ ಸಂದರ್ಭದಲ್ಲಿ ಡಿಎಚ್‌ಒ ಶ್ರೀನಿವಾಸ್, ತಹಶೀಲ್ದಾರ್ ಪಿ.ದಿನೇಶ್, ತಾಲೂಕು ವೈದ್ಯಾಧಿಕಾರಿ ಡಾ. ವಿನಯ್, ಕಾಲೇಜು ಆಡಳಿತ ಮಂಡಳಿ ಗೋಪಾಲರೆಡ್ಡಿ, ವಿನಯ್ ಹಾಗೂ ಕಂದಾಯ ನಿರೀಕ್ಷಕರಾದ ನಾಗೇಂದ್ರ, ಪಂಚಾಯಿತಿ ಕಾರ್ಯದರ್ಶಿ ಯೋಗೇಶ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲೆಯ ಬೋರ್ಡಿಂಗ್ ಶಾಲೆ, ಹಾಸ್ಟೆಲ್‌ಗಳಲ್ಲಿ ಹೆಲ್ತ್ ಚೆಕಪ್ : ದಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಸಹ 497 ವಿದ್ಯಾರ್ಥಿಗಳಿಗೆ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 34 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಹಾಗಾಗಿ ಸ್ಕೂಲ್ ಮುಚ್ಚಲಾಗಿದೆ. ಆತಂಕಪಡುವ ಅಗತ್ಯ ಇಲ್ಲ. ವೈದ್ಯರ ತಂಡ ನಿಗಾ ವಹಿಸುತ್ತಿದೆ. ಆನೇಕಲ್ ತಾಲೂಕು ಸುತ್ತಮುತ್ತಲಿನಲ್ಲಿ ಬೋರ್ಡಿಂಗ್ ಶಾಲೆಗಳು ಬಹಳಷ್ಟಿದ್ದು, ಜಿಲ್ಲೆಯಾದ್ಯಂತ ಇರುವ ಎಲ್ಲ ಬೋರ್ಡಿಂಗ್ ಶಾಲೆಗಳು, ಹಾಸ್ಟೆಲ್‌ಗಳಲ್ಲಿ ಹೆಲ್ತ್ ಚೆಕಪ್ ಮಾಡುವಂತೆ ವೈದ್ಯರ ತಂಡಕ್ಕೆ ತಿಳಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು. ಎಲ್ಲೆಡೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿಗಾ ವಹಿಸಲಾಗಿದೆ. ಅನ್ಯ ರಾಜ್ಯಗಳಿಂದ ಬರುವವರ ಮೇಲೆ ನಿಗಾ ಇಟ್ಟು ಕೋವಿಡ್ ಪರೀಕ್ಷೆ ನಡೆಲಾಗಿದೆ. ಎರಡನೇ ಡೋಸ್ ಲಸಿಕೆಯನ್ನು ಎಲ್ಲರಿಗೂ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸ್ಫೂರ್ತಿ ಕಾಲೇಜಿನಲ್ಲಿ ಬಿ.ಎಸ್ಸಿ ಪ್ಯಾರಾ ಮೆಡಿಕಲ್ 1ರಿಂದ 4ನೇ ವರ್ಷದ ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್ ತಪಾಸಣೆ ನಡೆಸಲಾಗುವುದು. ಪಾಸಿಟಿವ್ ಕಂಡು ಬಂದರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು.
● ಜೆ.ಮಂಜುನಾಥ್, ಬೆಂ.ನಗರ ಜಿಲ್ಲಾಧಿಕಾರಿ
ಕಾಲೇಜಿನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರ ತಂಡ ನರ್ಸಿಂಗ್ ಹಾಸ್ಟೆಲ್‌ನ ಎಲ್ಲಾ ವಿದ್ಯಾರ್ಥಿಗಳ ಸ್ವಾéಬ್ ಟೆಸ್ಟ್ ಮಾಡಲಾ ಗುತ್ತಿದೆ ಹಾಗೂ ಕಾಲೇಜು ಆವರಣದಲ್ಲಿ ಸ್ಯಾನಿಟೈಸ್ ಮಾಡಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.
● ಶ್ರೀನಿವಾಸ್, ಜಿಲ್ಲಾ ವೈದ್ಯಾಧಿಕಾರಿ