ವರದಿ: ದತ್ತು ಕಮ್ಮಾರ
ಕೊಪ್ಪಳ: ನೂರಾರು ಸಾಮಾಜಿಕ ಕಾರ್ಯಗಳಿಗೆ ಹೆಸರುವಾಸಿಯಾದ ಇಲ್ಲಿಯ ಗವಿಮಠವು ಕೊರೊನಾ ಸಂಕಷ್ಟ ಈ ಸಮಯದಲ್ಲಿ 100 ಆಕ್ಸಿಜನ್ ಬೆಡ್‌ಗಳ ಕೋವಿಡ್ ಆಸ್ಪತ್ರೆ ಆರಂಭಿಸಿ ಇಲ್ಲಿ ದಾಖಲಾಗುವ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಅಧ್ಯಾತ್ಮ, ಸಂಗೀತ, ಶ್ರೀಗಳ ಹಿತವಚನಗಳ ಆಡಿಯೋ ಸಿಡಿ ಪ್ರಸಾರ ಮಾಡಿ ಆರೈಕೆ ಮಾಡಲು ಮುಂದಾಗಿದೆ.
ಹೌದು. ಅನ್ನ, ಅಕ್ಷರ, ಅಧ್ಯಾತ್ಮಕ್ಕೆ ನಾಡಿಗೆ ಹೆಸರಾದ, ಪ್ರತಿ ಜಾತ್ರೆಯಲ್ಲೂ ಜನಜಾಗೃತಿ ಕಾರ್ಯಕ್ರಮಗಳ ಮೂಲಕ ನಾಡಿನ ಭಕ್ತರ ಗಮನ ಸೆಳೆದ ಶ್ರೀಗವಿಮಠವು ಪ್ರಸ್ತುತ ಕೋವಿಡ್ ಮಹಾಮಾರಿ ಜಗತ್ತನ್ನೇ ತಲ್ಲಣಗೊಳಿಸಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ವ ಇಚ್ಛೆಯಿಂದಲೇ ಸೋಂಕಿತರ ಆರೈಕೆಗೆ ಸಜ್ಜಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ನಿತ್ಯ ಏಳೆಂಟು ಜನರು ಬಲಿಯಾಗುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲೂ ಬೆಡ್‌ಗಳು ಖಾಲಿಯಿಲ್ಲ. ನಿತ್ಯವೂ ಆಸ್ಪತ್ರೆಗೆ ದಾಖಲಾಗುವ ಸೋಂಕಿತರಿಗೆ ಬೆಡ್ ವ್ಯವಸ್ಥೆಯೇ ಇಲ್ಲದಂತಾಗಿವೆ.
ಸಾವು-ನೋವು ಕಣ್ಣಾರೆ ನೋಡುತ್ತಿರುವ ಜನರು ನಿತ್ಯವೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಜೀವನ ನಡೆಸುವಂತಹ ಪರಿಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗವಿಮಠ ಆರಂಭಿಸಿರುವ ಆಸ್ಪತ್ರೆಯಲ್ಲಿ ದಾಖಲಾಗುವ ಸೋಂಕಿತರಿಗೆ ಔಷಧಿ, ಚಿಕಿತ್ಸೆ ಮೂಲಕ ಆರೈಕೆ ಮಾಡುವ ಜತೆಗೆ ಸೋಂಕಿತರ ಮಾನಸಿಕ ಒತ್ತಡ ದೂರ ಮಾಡಲು “ಅಧ್ಯಾತ್ಮ ಪರಂಪರೆ’ಯ ಚಿಕಿತ್ಸೆಯ ಮೂಲಕ ಸಂಜೀವಿನಿಯಾಗಿ ಕೆಲಸ ನಿರ್ವಹಿಸಲು ಸಿದ್ಧಗೊಂಡಿದೆ. ಮೊದಲೇ ಜನರಿಗೆ ಕೊರೊನಾ ಪಾಸಿಟಿವ್ ಎಂದಾಕ್ಷಣ ಅರ್ಧ ಜೀವವೇ ಹೋದಂತಾಗುತ್ತಿದೆ. ಈ ವೇಳೆ ಅವರಿಗೆ ಆತ್ಮಸ್ಥೈರ್ಯ ತುಂಬಿ ಮಾನಸಿಕವಾಗಿ ಸದೃಢರನ್ನಾಗಿ ಮಾಡಲು ಅವರ ಮಾನಸಿಕ ಒತ್ತಡ ನಿವಾರಿಸಲು ಗವಿಮಠದ ಆಸ್ಪತ್ರೆಯಲ್ಲಿ ಅಧ್ಯಾತ್ಮದ ಸಂದೇಶ, ಶ್ರೀಗಳ ಹಿತವಚನ, ಶರಣರ ಪ್ರವಚನ ಸಂದೇಶ, ಸಂಗೀತದ ಧ್ವನಿ ಸುರುಳಿ ಪ್ರಚುರ ಪಡಿಸುವ ಮೂಲಕ ಸೋಂಕಿತರ ಮಾನಸಿಕ ಒತ್ತಡ ದೂರ ಮಾಡಲು ಮುಂದಾಗಿದೆ. ಈಗಾಗಲೇ ಮಠದ ಕೋವಿಡ್ ಆಸ್ಪತ್ರೆಯ ಆಕ್ಸಿಜನ್ ಕೊಠಡಿಗಳ ಹೊರ ಭಾಗದಲ್ಲಿ ಧ್ವನಿವರ್ಧಕ ಅಳವಡಿಸಿದೆ.
ನಿತ್ಯ ಬೆಳಗಿನ ವೇಳೆ, ಸಂಜೆ ವೇಳೆ ಸಂಗೀತ ಗಾಯನದ ಆಡಿಯೋ, ಅಧ್ಯಾತ್ಮದ ಜತೆಗೆ ಯೋಗ ಹೇಳಿಕೊಡಲು ಸಜ್ಜಾಗಿದೆ. ಆಸ್ಪತ್ರೆಯ ಆವರಣದ ಮಧ್ಯವಿರುವ ಭಾಗವನ್ನು ಗಿಡಗಳಿಂದ ಅಲಂಕಾರ ಗೊಳಿಸಿದ್ದು, ಸೋಂಕಿತರಿಗೆ ನಾವು ಯಾವುದೋ ಅಧ್ಯಾತ್ಮ ಕೇಂದ್ರದಲ್ಲಿದ್ದೇವೆ ಎಂಬ ಭಾವನೆ ಮೂಡಿಸಲಾಗುತ್ತಿದೆ. ಹಾಗೆಯೇ ಇಡೀ ವಾತಾವರಣವನ್ನು ಮುದಗೊಳಿಸಲಾಗಿದೆ.