Advertisement

ದ.ಕ.: ಕೋವಿಡ್ ಸೋಂಕಿತ 7 ಪ್ರದೇಶಗಳು ಸೀಲ್‌ಡೌನ್‌

12:31 PM Apr 19, 2020 | sudhir |

ಮಂಗಳೂರು: ಕೋವಿಡ್ ಸೋಂಕಿನ ಹೆಡೆಮುರಿ ಕಟ್ಟಲು ಮುಂದಾಗಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತವು ತೊಕ್ಕೊಟ್ಟು, ಉಪ್ಪಿನಂಗಡಿ, ತುಂಬೆ, ಸುಳ್ಯದ ಅಜ್ಜಾವರ, ಸಂಪ್ಯ, ಬೆಳ್ತಂಗಡಿಯ ಕರಾಯ ಹಾಗೂ ಬಂಟ್ವಾಳದ ಸಜಿಪನಡುವಿನ ಸೀಮಿತ ಪ್ರದೇಶವನ್ನು “ಕಂಟೋನ್ಮೆಂಟ್‌ ವಲಯ’ ವನ್ನಾಗಿ ಘೋಷಿಸುವ ಮೂಲಕ ಶನಿವಾರ ಸಂಜೆ ಸೀಲ್‌ಡೌನ್‌ಗೆ ಆದೇಶಿಸಿದೆ.

Advertisement

ಈ ಪ್ರದೇಶಗಳಲ್ಲಿ ದಿನಸಿ, ಹಾಲು, ಮಾಂಸ, ಔಷಧ ಸೇರಿದಂತೆ ಎಲ್ಲ ಅಂಗಡಿ ಗಳನ್ನು ಮುಚ್ಚಲಾಗಿರುತ್ತದೆ; ಯಾವುದೇ ಮೂಲ ಅಗತ್ಯಗಳಿಗೂ ಜನರು ಮನೆಯಿಂದ ಹೊರಗೆ ಬರುವಂತಿಲ್ಲ. ಈ ಹಿನ್ನೆಲೆ ಯಲ್ಲಿ ಸೀಲ್‌ಡೌನ್‌ ಪ್ರದೇಶದ ಘಟಕ ನಿಯಂತ್ರಕರ ಮೂಲಕ ನಿಯಂತ್ರಿತ ವಲಯದೊಳಗೆ ಅಗತ್ಯ ವಸ್ತು ಮತ್ತು ಸೇವೆ ಗಳನ್ನು ಒದಗಿಸುವ ತಂಡವನ್ನು ರಚಿಸಿ ನ್ಯಾಯಬೆಲೆ ಅಂಗಡಿಗಳಿಂದ ನೀಡ ಲಾಗುವ ಪಡಿತರವೂ ಒಳಗೊಂಡಂತೆ ಅವಶ್ಯ ವಸ್ತುಗಳನ್ನು ಒದಗಿಸಲಾಗುತ್ತದೆ.

ನಿಯಂತ್ರಣ ಕೇಂದ್ರ
ಘಟಕ ನಿಯಂತ್ರಕರು, ನಿಯಂತ್ರಿತ ವಲಯದ ಕಣ್ಣಳತೆ ದೂರದಲ್ಲಿ ಘಟನಾ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಬೇಕು ಹಾಗೂ ಈ ಕೇಂದ್ರದಿಂದಲೇ ಕಾರ್ಯ ನಿರ್ವಹಿಸಬೇಕು. ಘಟನಾ ನಿಯಂತ್ರಕರು ಒಂದು ಕೇಂದ್ರೀಕೃತ ನಿಯಂತ್ರಣ ಕೊಠಡಿ ಯನ್ನು ಹೊಂದಿರಬೇಕು. ಈ ಕೊಠಡಿಗೆ ಪೊಲೀಸ್‌, ಗ್ರಾ.ಪಂ. ಹಾಗೂ ಆರೋಗ್ಯ ಇಲಾಖೆ ಪ್ರತಿನಿಧಿಯನ್ನು ನಿಯೋ ಜಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ನಿಯಂತ್ರಿತ ವಲಯದಲ್ಲಿ ನಿಯಂತ್ರಣ ನಿಯಮ ಜಾರಿಗೆ ತರಲು ಸಂಚಾರಿ ತಂಡ ಗಳನ್ನು ನಿಯೋಜಿಸಿ ಲಾಕ್‌ಡೌನ್‌ ನಿಯಮ ಗಳನ್ನು ಅನುಸರಿಸಿಕೊಂಡು ವಲಯ ದಲ್ಲಿ ವಾಸಿಸುವ ಜನರ ವಿಶೇಷ ಆವಶ್ಯಕತೆಗಳನ್ನು ಸ್ಥಳೀಯ ಸಂಘ- ಸಂಸ್ಥೆ ಗಳ ಸಹಕಾರದೊಂದಿಗೆ ಪೂರೈಸಬೇಕು. ಜನ-ವಾಹನ ಸಂಚಾರ ತಡೆಯಲು ಪೊಲೀಸರು ಖಾಯಂ ಬ್ಯಾರಿಕೇಡ್‌ಗಳಿಂದ ಇಡೀ ವಲಯವನ್ನು ಸೀಲ್‌ಡೌನ್‌ ಮಾಡಬೇಕು.

ಎಮರ್ಜೆನ್ಸಿ ಪಾಸ್‌
ಅಗತ್ಯ ಸೇವೆಗಳು ಮತ್ತು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಎಮರ್ಜೆನ್ಸಿ ಪಾಸ್‌  ಗಳನ್ನು ವಿತರಿಸುವ ಜವಾಬ್ದಾರಿ ಪೊಲೀಸ್‌ ಇಲಾಖೆಯದ್ದು. ಸೀಲ್‌ಡೌನ್‌ ಸಮರ್ಪಕವಾಗಿ ಅನುಷ್ಠಾನಕ್ಕೆ ತಂತ್ರ  ಜ್ಞಾನ ಬಳಸಿಕೊಳ್ಳಬೇಕು. ತಾಲೂಕು ಆರೋಗ್ಯ ಅಧಿಕಾರಿಗಳು ವಲಯದಲ್ಲಿನ ಆರೋಗ್ಯ ಇಲಾಖೆ ಪಾಲಿಸಬೇಕಾದ ಎಲ್ಲ ಕ್ರಮಗಳ ಉಸ್ತುವಾರಿ ನೋಡಿಕೊಳ್ಳಬೇಕು. ವಲಯ ದಲ್ಲಿ ಒಂದು ಆರೋಗ್ಯ ಹೊರ ಠಾಣೆ ಸ್ಥಾಪಿಸಿ ಸಂಪರ್ಕಿತರನ್ನು ಪತ್ತೆ ಮಾಡಿ ಹೆಚ್ಚಿನ ಅಪಾಯದಲ್ಲಿರುವ (ಹೈರಿಸ್ಕ್ ಪ್ರೈಮರಿ) ಸಂಪರ್ಕಿತರನ್ನು ಸಾಂಸ್ಥಿಕ ದಿಗ್ಬಂಧನಕ್ಕೆ ಒಳಪಡಿಸಬೇಕು ಹಾಗೂ ಕಡಿಮೆ ಅಪಾಯ ದಲ್ಲಿರುವ (ದ್ವಿತೀಯ ಹಂತದ ಲೋ ರಿಸ್ಕ್ ಸೆಕೆಂಡರಿ) ಸಂಪರ್ಕಿತರನ್ನು ಗೃಹ ದಿಗ್ಬಂಧನಕ್ಕೆ ಒಳಪಡಿಸಬೇಕು. ನಿಗದಿತ ಶಿಷ್ಟಾಚಾರದ ಪ್ರಕಾರ ವೈದ್ಯಕೀಯ ಪರೀಕ್ಷೆಗಳನ್ನು ಒಳಪಡಿಸಿ ಸಮುದಾಯದ ಮಟ್ಟದಲ್ಲಿ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜನರ ಆರೋಗ್ಯ ವಿವರ ಪಟ್ಟಿ ತಯಾರಿಸಿ ಪ್ರತಿದಿನ 50 ಮನೆಗಳ ತಪಾಸಣೆ ನಡೆಸಬೇಕು. ಎಲ್ಲ ಮನೆಗಳ ಆರೋಗ್ಯ ಸ್ಥಿತಿ-ಗತಿ ಮಾಹಿತಿ ಪಡೆದು ಅಗತ್ಯವಿದ್ದರೆ ಸೂಕ್ತ ಚಿಕಿತ್ಸೆ ನೀಡಲು ಕ್ರಮ ತೆಗೆದುಕೊಳ್ಳಬೇಕು.

ನಿಯಂತ್ರಿತ ವಲಯಗಳಲ್ಲಿ ಅಗತ್ಯ ವಸ್ತುಗಳ ಪೂರೈಕೆ, ಘನತ್ಯಾಜ್ಯ ನಿರ್ವಹಣೆ, ಸಮಗ್ರ ಸ್ವತ್ಛತೆ, ನೀರಿನ ಪೂರೈಕೆ ಇತ್ಯಾದಿ ಮೂಲಸೌಕರ್ಯಗಳನ್ನು ಒದಗಿಸುವುದು ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದ ಕರ್ತವ್ಯವಾಗಿರುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next