Advertisement

ಕೋವಿಡ್ ವೀರರು: ಹಂಗ್ರಿ ಯಂಗ್ ಮೆನ್

12:19 PM May 12, 2020 | mahesh |

ಶ್ರೀರಂಗಪಟ್ಟಣ ಪ್ರವಾಸಿ ತಾಣ. ಜೊತೆಗೆ, ಕೃಷಿ ಮತ್ತು ಕೈಗಾರಿಕ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದೆ. ಇಲ್ಲಿ ದುಡಿಯುವ ಕೈಗಳಿಗೆ, ಲಾಕ್‌ಡೌನ್‌ನ ಸೈಡ್‌ ಎಫೆಕ್ಟ್ ತುಂಬಾ ಆಯ್ತು. ಅದರಲ್ಲಿ, ಅನ್ನದ ಸಮಸ್ಯೆಯೂ ಒಂದು. ಹಸಿವಿನಿಂದ ಬಳಲುತ್ತಿದ್ದ ಜನರಿಗೆ, ಹೊಟ್ಟೆ ತುಂಬ ಊಟ ಹಾಕುವ ಬಗ್ಗೆ ಇಲ್ಲಿನ ಅಭಿನವ್‌ ಭಾರತ್‌ ಸಂಸ್ಥೆ ಚಿಂತಿಸಿತು. ಹೀಗಾಗಿ, ಇಷ್ಟು ವರ್ಷ ನಡೆಸಿಕೊಂಡು ಬಂದ ಯೋಜನೆಗಳಿಗೆ ತಾತ್ಕಾಲಿಕವಾಗಿ ಇತಿಶ್ರೀ ಹಾಡಿ, ಬಡವರು ಹಾಗೂ ನಿರ್ಗತಿಕರಿಗೆ ಆಹಾರ ಪೂರೈಸಲು ತಮ್ಮೆಲ್ಲ ಸಮಯವನ್ನೂ ಮೀಸಲಿಟ್ಟಿದ್ದಾರೆ. ಈ ಸಂಸ್ಥೆಯಲ್ಲಿ ಹನ್ನೆರೆಡು
ಜನ ಸ್ವಯಂ ಸೇವಕರಿದ್ದು, ಇವರೆಲ್ಲ ವಿವಿಧ ಉದ್ಯೋಗದಲ್ಲಿದ್ದಾರೆ. ಲಾಕ್‌ಡೌನ್  ಆದ ದಿನದಿಂದ, ಇವರಿಗೆ ಈ ಸೇವೆಯೇ ಉದ್ಯೋಗವಾಗಿಬಿಟ್ಟಿದೆ.

Advertisement

ಸಂಸ್ಥೆಯ ವತಿಯಿಂದ ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಕೊಡುತ್ತಾರೆ. ಪ್ರಾರಂಭದಲ್ಲಿ, ಸಂಸ್ಥೆಯ ಸದಸ್ಯರು ತಾವೇ ಹಣ ಹಾಕಿ, ಈ ಸೇವೆಗೆ ಚಾಲನೆ ಕೊಟ್ಟರು. ಇವರ ಸದುದ್ದೇಶ, ಸಮರ್ಪಣಾ ಭಾವ ನೋಡಿ, ಅನೇಕ ದಾನಿಗಳು ಮುಂದೆ ಬಂದರು. ರೇಷನ್‌, ಹಣ್ಣು- ಹಂಪಲು, ತರಕಾರಿ ಕೊಡಿಸಿದರು. ಹಣವನ್ನೂ ಕೊಟ್ಟರು. ಇದನ್ನೆಲ್ಲ ಒಟ್ಟುಗೂಡಿಸಿ, ಈಗ ನಿತ್ಯ ಅನ್ನ ಸೇವೆ ಮಾಡುತ್ತಿದ್ದಾರೆ. ಶ್ರೀರಂಗಪಟ್ಟಣದ ಕುಷ್ಠರೋಗ ಕಾಲೊನಿಯ, ಸುಮಾರು 80 ಕುಟುಂಬಗಳಿಗೆ, ಮೂರು ಹೊತ್ತು ಊಟ ಕೊಡುತ್ತಿದ್ದಾರೆ.  ಆಸ್ಪತ್ರೆ, ಪೊಲೀಸ್‌ ಠಾಣೆ, ಪೌರ ಕಾರ್ಮಿಕರು, ಚೆಕ್‌ಪೋಸ್ಟ್ ಸಿಬ್ಬಂದಿ, ರೋಗಿ ಗಳಿಗೂ ಆಹಾರ ಪೂರೈಸುತ್ತಿದ್ದಾರೆ. ಶ್ರೀರಂಗ ಪಟ್ಟಣದ ರಂಗನಾಥ ಸ್ವಾಮಿ ದೇಗುಲ, ಮಸೀದಿ ಬಳಿಯಲ್ಲಿ ಭಿಕ್ಷೆ ಬೇಡಿಕೊಂಡು ಬದುಕುತ್ತಿದ್ದ ನೂರಕ್ಕೂ ಹೆಚ್ಚು ಮಂದಿಗೆ; ಪಟ್ಟಣದ ರಂಗನಾಥ ಚೌಲ್ಟ್ರಿಯಲ್ಲಿ ಆಶ್ರಯ ಪಡೆದಿರುವ ನಿರ್ಗತಿಕರಿಗೂ ಟಿಫಿನ್‌, ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಸ್ಥಳೀಯ ಆಡಳಿತ, ಇವರ ಸೇವಾ ಕಾರ್ಯವನ್ನು ಮೆಚ್ಚಿ, ರೇಷನ್‌ ಸಹ ಕೊಟ್ಟಿದೆ!

content-img

ದಿನಾಲೂ ಬೆಳಗ್ಗೆ 300 ಜನಕ್ಕೆ ಟಿಫಿನ್‌, ಮಧ್ಯಾಹ್ನ 500, ರಾತ್ರಿ 200 ಜನಕ್ಕೆ ಊಟ- ಹೀಗೆ, ದಿನವೊಂದಕ್ಕೆ 1000 ಜನಕ್ಕೆ ಆಹಾರ ವ್ಯವಸ್ಥೆ ಮಾಡುತ್ತೇವೆ. ಇದಕ್ಕಾಗಿ ಸುಮಾರು 50-60 ಕೆ.ಜಿ ಅಕ್ಕಿ, 8-10 ಕೆ.ಜಿ ಬೇಳೆ, 10 ಕೆ. ಜಿ ಅವಲಕ್ಕಿ, 15 ಕೆ.ಜಿ ಎಣ್ಣೆ, 10-15 ಕೆ.ಜಿ. ಕಾಯಿಪಲ್ಲೆ ಬೇಕಾಗುತ್ತೆ. ಒಟ್ಟಾರೆಯಾಗಿ, ದಿನವೊಂದಕ್ಕೆ 15-18 ಸಾವಿರ ಖರ್ಚು ಬರುತ್ತೆ…’ ಎನ್ನುತ್ತಾರೆ ಸಂಸ್ಥೆಯ ಅಭಿಷೇಕ್‌, ಶಿವು ಮತ್ತು ನವೀನ್‌. ಸ್ಥಳೀಯ ರೈತರು ಬೆಳೆದ ಪಪ್ಪಾಯಿ, ಬಾಳೆಹಣ್ಣುಗಳನ್ನು ಕೊಳ್ಳುವ ಮೂಲಕ, ಪರೋಕ್ಷವಾಗಿ, ಸಂಕಷ್ಟದಲ್ಲಿರುವ ರೈತರಿಗೂ ನೆರವಾಗುತ್ತಿದ್ದಾರೆ. “ಒಮ್ಮೊಮ್ಮೆ ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದ ತರಕಾರಿ ಸಂಗ್ರಹವಾಗುವು ದುಂಟು. ಅದನ್ನು ಅವಶ್ಯಕತೆ ಇರುವವರಿಗೆ ಹಂಚಿಬಿಡುತ್ತೇವೆ’ ಎನ್ನುತ್ತಾರೆ, ಈ ಸಂಸ್ಥೆಗೆ ಸಹಾಯ ಮಾಡಿದವರಲ್ಲಿ ಒಬ್ಬರಾದ ಭಾನು ಪ್ರಕಾಶ್‌ ಶರ್ಮ.

– ಸ್ವರೂಪಾನಂದ ಕೊಟ್ಟೂರು

Advertisement

Udayavani is now on Telegram. Click here to join our channel and stay updated with the latest news.