ಬಂಕಾಪುರ: ಏಪ್ರಿಲ್ 29ರಂದು ಹಸೆಮಣೆ ಏರಬೇಕಿದ್ದ ಪಟ್ಟಣದ ವಧುವಿಗೆ ಕೋವಿಡ್ ಪಾಸಿಟಿವ್ ಬಂದು ಶಿಗ್ಗಾವಿ ಕೋವಿಡ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಮದುವೆ ಮುಂದೂಡಿದ ಘಟನೆ ನಡೆದಿದೆ.
ವಧು-ವರರು ಒಪ್ಪಿ ಕಂಕಣ ಭಾಗ್ಯ ಕೂಡಿ ಬಂದಿದ್ದರಿಂದ ಗುರು-ಹಿರಿಯರ ಸಮ್ಮುಖದಲ್ಲಿ ಏ.29ರಂದು ಗುರುವಾರ ವಿವಾಹ ಮಹೋತ್ಸವ ನಡೆಸಲು ನಿರ್ಧರಿಸಲಾಗಿತ್ತು. ಆದರೆ ವಧುವಿಗೆ ಅರಿಯದೇ ಬಂದ ಕೊರೊನಾ ಪಾಸಿಟಿವ್‌ನಿಂದ ಮದುವೆಗೆ ತಡೆ ಬಿದ್ದಿದೆ. ಇದು ಎರಡೂ ಕಡೆಯ ಸಂಬಂಧಿಗಳಲ್ಲಿ ಬೇಸರ ತರಿಸಿದೆ.
ಏ.24ರಂದು ಮೈಯಲ್ಲಿ ಹುಷಾರಿಲ್ಲದ ಕಾರಣ ವಧು ಪಟ್ಟಣದ ಸರಕಾರಿ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆ ಸಿಬ್ಬಂದಿ ಆರ್ ಟಿಪಿಸಿಆರ್ ಕೋವಿಡ್ ಪರೀಕ್ಷೆಗೊಳಪಡಿಸಿದಾಗ ಕೋವಿಡ್ ದೃಢಪಟ್ಟಿದೆ. ಇದರಿಂದ ಧೃತಿಗೆಡದ ವಧು ಶಿಗ್ಗಾವಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ವರನನ್ನು ವರಿಸಬೇಕಿದ್ದ ವಧು ಇನ್ನೂ ಒಂದು ವಾರ ಕಾಲ ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಬಂದೊದಗಿದೆ.
ತಿಳಿ ಹೇಳಿದ ವೈದ್ಯಾಧಿಕಾರಿ: ಪ್ರಸ್ತುತ ಪರಿಸ್ಥಿತಿ ಅರಿತ ಶಿಗ್ಗಾವಿ ವೈದ್ಯಾಧಿಕಾರಿ ಡಾ|ಹನುಮಂತಪ್ಪ ಆಸ್ಪತ್ರೆಗೆ ವಧು-ವರನ ಸಂಬಂಧಿಕರನ್ನು ಕರೆಯಿಸಿ ತಿಳಿ ಹೇಳಿದ್ದಾರೆ. ಇದಕ್ಕೆ ಸಮ್ಮತಿಸಿದ ವಧು-ವರರು ಹಾಗೂ ಸಂಬಂಧಿಕರು ಕೋವಿಡ್ ನಿಯಮ ಪೂರ್ಣಗೊಂಡ ನಂತರ ಮತ್ತೂಂದು ಮುಹೂರ್ತ ಫಿಕ್ಸ್ ಮಾಡಿ ಮದುವೆ ಮಾಡಲು ತೀರ್ಮಾನಿಸಿದ್ದಾರೆಂದು ತಿಳಿದು ಬಂದಿದೆ.