Advertisement
ಈ ಹಿಂದೆ ಬರಗಾಲ ಎದುರಾದಾಗ ಉತ್ಪಾದನೆ, ಆದಾಯ ಕುಸಿತ, ಉದ್ಯೋಗ ನಷ್ಟವಾಗಿ ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದವು. ಇದೀಗ ಕೋವಿಡ್ 19 ಲಾಕ್ ಡೌನ್ ಆದಾಯ-ಉದ್ಯೋಗಕ್ಕೆ ಕುತ್ತು ತಂದಿದ್ದು ಇದು ಅಪರಾಧ ಕೃತ್ಯಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
Related Articles
Advertisement
1980ರ ದಶಕ ಹಾಗೂ 1996ರ ವೇಳೆಗೆ ಬರದಿಂದಾಗಿ ಗ್ರಾಮಗಳಲ್ಲಿ ಕಳ್ಳತನ ಮಿತಿಮೀರಿತ್ತು. ಹತ್ತಿ ಸೇರಿದಂತೆ ವಿವಿಧ ಧಾನ್ಯಗಳನ್ನು ಕಳ್ಳತನ ಮಾಡಲಾಗುತ್ತಿತ್ತು. ಮಹಿಳೆಯರು ಹೊರ ಹೋಗಲು ಹೆದರುತ್ತಿದ್ದರು ಎಂಬುದನ್ನು ನವಲಗುಂದ ಗ್ರಾಮದ ಹೆಬ್ಟಾಳ ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ. 2006-07ರ ವೇಳೆಗೆ ಮಹಾರಾಷ್ಟ್ರದಿಂದ ಕಬ್ಬು ಕಡಿಯಲೆಂದು ಬಂದ ಗ್ಯಾಂಗ್‌ನ ಕೆಲವರು ಸ್ಥಳೀಯರೊಂದಿಗೆ ಸೇರಿಕೊಂಡು ಗ್ರಾಮದಲ್ಲಿ ಕಳ್ಳತನ ಹೆಚ್ಚಿಸಿದ್ದರು. ಕಳ್ಳರ ಕಾಟ ತಾಳಲಾರದೆ ಸರದಿ ಮೇಲೆ ಮಹಿಳೆಯರೇ ರಾತ್ರಿಯಿಡೀ ಕೈಯಲ್ಲಿ ಒನಕೆ, ಆಯುಧ ಹಿಡಿದು ಕಾವಲು ಕಾಯುತ್ತಿದ್ದೆವು ಎಂಬುದನ್ನು ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿಯ ಪಾರ್ವತೆಮ್ಮ ಹೊಂಗಲ್ ನೆನಪಿಸಿಕೊಳ್ಳುತ್ತಾರೆ.
ಮದ್ಯದಂಗಡಿ ಕಳ್ಳತನ: ಕೋವಿಡ್ 19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯದ ಅಂಗಡಿಗಳು ಬಂದ್ ಆಗಿವೆ. ಹುಬ್ಬಳ್ಳಿ, ಧಾರವಾಡ, ಗದಗ ಸೇರಿದಂತೆ ಕೆಲವೆಡೆ ಮದ್ಯದ ಅಂಗಡಿಗಳು ಕಳ್ಳತನ ಆಗಿರುವುದು ಸ್ಯಾಂಪಲ್ ಮಾತ್ರ. ಮುಂದಿನ ದಿನಗಳಲ್ಲಿ ಆರ್ಥಿಕ ಅಪರಾಧಕ್ಕೆ ಇದು ಮುನ್ನುಡಿ ಎಂದರೂ ತಪ್ಪಾಗಲಾರದು ಎಂಬುದು ಹಲವರ ಅಭಿಪ್ರಾಯ. ಕೋವಿಡ್ 19 ಕಾರಣ ನಗರಗಳಲ್ಲಿ ವಿವಿಧ ಉದ್ಯಮ, ಉತ್ಪಾದನೆ, ಉದ್ಯೋಗ ಸ್ಥಗಿತಗೊಂಡಿದೆ. ಮುಂದೆ ಪುನರಾಂಭಗೊಂಡರೂ ಉದ್ಯೋಗಗಳು
ಮರಳಿ ದೊರೆಯುವ ಖಾತರಿ ಇಲ್ಲವಾಗಿದೆ. ಇದ್ದ ಉದ್ಯೋಗಗಳಲ್ಲಿ ಕಡಿತದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ವ್ಯಾಪಾರ-ವಹಿವಾಟು ಸೇರಿದಂತೆ ವಿವಿಧ ಕ್ಷೇತ್ರಗಳ ಪುನಃಶ್ಚೇತನ ಮಂದಗತಿಯಲ್ಲಿ ಸಾಗುವ ಸಾಧ್ಯತೆಗಳಿವೆ. ಇನ್ನೊಂದು ಕಡೆ ಕೃಷಿ ಅವಲಂಬಿತರಿಗೂ ಹಲವು ಸಮಸ್ಯೆಗಳು ಎದುರಾಗಲಿವೆ. ಈ ಎಲ್ಲ ಕಾರಣಗಳಿಂದಲೂ ಅಪರಾಧ ಕೃತ್ಯಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ.
ನಿರುದ್ಯೋಗದ ಹೆಚ್ಚಳ ಹಾಗೂ ಕನಿಷ್ಠ ಆದಾಯ ಇಲ್ಲದಿರುವ ಸ್ಥಿತಿ ಸಹಜವಾಗಿಯೇ ಅಪರಾಧ ಮನೋಭಾವನೆಗೆ ಪ್ರಚೋದನೆ ನೀಡುವ ಸಾಧ್ಯತೆ ಇದೆ. ನಗರ, ಹಳ್ಳಿಗಳೆನ್ನದೆ ಅನೇಕ ಕಡೆ ಕಳ್ಳತನ-ದರೋಡೆ ಪ್ರಮಾಣಗಳು ಹೆಚ್ಚುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಈ ಬಗ್ಗೆ ಸರಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಉದ್ಯೋಗ ಸೃಷ್ಟಿ, ಕನಿಷ್ಠ ಆದಾಯಕ್ಕೆ ಅವಕಾಶ ಯತ್ನಗಳನ್ನು ತೆರೆದಿಡಬೇಕಾಗಿದೆ.
ಸರಕಾರ ಎಚ್ಚತ್ತುಕೊಳ್ಳಬೇಕಿದೆ : ಕೋವಿಡ್ 19 ಹೊಡೆತ ಖಂಡಿತವಾಗಿಯೂ ಹಲವು ಕ್ಷೇತ್ರಗಳ ಮೇಲೆ ಪರಿಣಾಮಬೀರುತ್ತದೆ. ನಿರುದ್ಯೋಗ ಸಮಸ್ಯೆ ಇನ್ನಷ್ಟು ಹೆಚ್ಚಲಿದೆ. ಅಪರಾಧ ಕೃತ್ಯಗಳು ಹೆಚ್ಚಾಗುವ ಸಾಧ್ಯತೆ ಇಲ್ಲದಿಲ್ಲ. ಸರಕಾರ ಈಗಲೇ ಎಚ್ಚೆತ್ತು ಅಗತ್ಯ ಪರಿಹಾರ ಕಾರ್ಯಗಳಿಗೆ ಮುಂದಾಗಬೇಕಿದೆ. ಘೋಷಣೆಗಳು ಗ್ರಾಮೀಣ ಪ್ರದೇಶದಲ್ಲಿ ಅನುಷ್ಠಾನ ರೂಪಕ್ಕೆ ಬರಬೇಕಾಗಿದೆ. – ಶಂಕರ ಅಂಬಲಿ, ರಾಜ್ಯಾಧ್ಯಕ್ಷ, ಕರ್ನಾಟಕ ರೈತ ಸೇನೆ
-ಅಮರೇಗೌಡ ಗೋನವಾರ