Advertisement

ಎಚ್‌ಐವಿ ಸೋಂಕಿತರಿಗೆ ಕೋವಿಡ್ ಕಂಟಕ

06:17 PM Nov 10, 2020 | Suhan S |

ದಾವಣಗೆರೆ: ಔಷಧಿ ಇಲ್ಲದ ಕೋವಿಡ್ ಹಾಗೂ ಏಡ್ಸ್‌ ಎಂಬ ಎರಡೆರಡು ಮಹಾಮಾರಿಗಳ ಕಾಟದಿಂದ ಜಿಲ್ಲೆಯಲ್ಲಿ 15 ಜನರುಬಳಲುತ್ತಿದ್ದಾರೆ. ಇವರಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.

Advertisement

ಜಿಲ್ಲೆಯಲ್ಲಿ ಎಆರ್‌ಟಿ ಕೇಂದ್ರಗಳ ಮೂಲಕ ಎಚ್‌ಐವಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಒಟ್ಟು 4377 ಎಚ್‌ಐವಿ ಸೋಂಕಿತರಿದ್ದು, ಈ ಪೈಕಿ 58 ಜನರಲ್ಲಿ ಕೊರೊನಾ ಸೋಂಕಿನಲಕ್ಷಣ ಕಂಡು ಬಂದಿತ್ತು. ಇವರನ್ನೆಲ್ಲ ಕೋವಿಡ್‌-19 ತಪಾಸಣೆಗೊಳಪಡಿಸಿದಾಗ 15 ಜನರಿಗೆ ಕೋವಿಡ್ ಪಾಸಿಟಿವ್‌ ಇರುವುದು ಗೋಚರಿಸಿದ್ದು, ಇವರಲ್ಲಿ ಒಂಭತ್ತು ಪುರುಷರು,ಆರು ಮಹಿಳೆಯರು ಇದ್ದಾರೆ. ಚನ್ನಗಿರಿ ತಾಲೂಕಿನ ಕೆಂಪನಹಳ್ಳಿಯ 46 ವರ್ಷದ ಮಹಿಳೆಯನ್ನು ಎಚ್‌ಐವಿ ಹಾಗೂ ಕೊವಿಡ್‌ -19 ಮಹಾಮಾರಿಗಳು ಜಂಟಿಯಾಗಿ ಬಲಿತೆಗೆದುಕೊಂಡಿರುವುದು ಖೇದಕರ ಸಂಗತಿ.

ಜಿಲ್ಲೆಯಲ್ಲಿ ಎರಡು ಎಆರ್‌ಟಿ ಕೇಂದ್ರಗಳಿದ್ದು, ಮಹಾನಗರದಲ್ಲಿರುವ ಸಿಜಿ ಆಸ್ಪತ್ರೆಯಲ್ಲಿರುವ ಕೇಂದ್ರದಲ್ಲಿ 3961ಎಚ್‌ಐವಿ ಸೋಂಕಿತರು ಹಾಗೂ ಚನ್ನಗಿರಿ ತಾಲೂಕಾಸ್ಪತ್ರೆಯಲ್ಲಿರುವ ಕೇಂದ್ರದಲ್ಲಿ 416 ಎಚ್‌ಐವಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ಹಾವಳಿಯ ಸಂದರ್ಭದಲ್ಲಿ ಸಿಜಿ ಆಸ್ಪತ್ರೆ ಕೇಂದ್ರದ 53 ಜನರಲ್ಲಿ, ಚನ್ನಗಿರಿ ಕೇಂದ್ರದಲ್ಲಿ 5 ಜನರಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದವು. ತಪಾಸಣೆ ಮಾಡಿದಾಗ ಸಿಜಿ ಆಸ್ಪತ್ರೆ ಕೇಂದ್ರ ವ್ಯಾಪ್ತಿಯ 10ಜನರಲ್ಲಿ ಹಾಗೂ ಚನ್ನಗಿರಿ ಕೇಂದ್ರ ವ್ಯಾಪ್ತಿಯ ಐದು ಜನರಲ್ಲಿ ಕೋರೊನಾ ಸೋಂಕು ಇರುವುದು ಪತ್ತೆಯಾಗಿದೆ.

4377 ಎಚ್‌ಐವಿ ಸೋಂಕಿತರು: ಜಿಲ್ಲೆಯಲ್ಲಿ 1822ಪುರುಷ, 2315ಮಹಿಳೆಯರು, 237 ಮಕ್ಕಳು ಹಾಗೂ ಮೂವರು ಲಿಂಗತ್ವ ಅಲ್ಪಸಂಖ್ಯಾತರು ಸೇರಿ ಒಟ್ಟು 4377 ಎಚ್‌ಐವಿ ಸೋಂಕಿತರಿದ್ದು ಇವರೆಲ್ಲರೂ ಎಆರ್‌ಟಿ ಮೂಲಕ ಚಿಕಿತ್ಸೆ ಪಡೆಯುವವರಾಗಿದ್ದಾರೆ. ದಾವಣಗೆರೆ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 2081ಎಚ್‌ಐವಿ ಪೀಡಿತರಿದ್ದಾರೆ. ಹರಿಹರತಾಲೂಕಿನಲ್ಲಿ 604, ಚನ್ನಗಿರಿ ತಾಲೂಕಿನಲ್ಲಿ 457, ಜಗಳೂರು ತಾಲೂಕಿನಲ್ಲಿ 303, ಹೊನ್ನಾಳಿ ತಾಲೂಕಿನಲ್ಲಿ 275 ಹಾಗೂ ಈ ಹಿಂದೆ ಜಿಲ್ಲಾ ವ್ಯಾಪ್ತಿಯಲ್ಲಿದ್ದ ಹರಪನಹಳ್ಳಿ ತಾಲೂಕಿನಲ್ಲಿ 657 ಎಚ್‌ಐವಿ ಪೀಡಿತರಿದ್ದಾರೆ. ಎಚ್‌ಐವಿ ಪೀಡಿತರಲ್ಲಿ 237ಮಕ್ಕಳು ಕೂಡ ಇದ್ದು, ಇವರಲ್ಲಿ120ಬಾಲಕರು, 117 ಬಾಲಕಿಯರಿದ್ದಾರೆ. ಇವೆರಲ್ಲರೂ ಕೋವಿಡ್ ಸೋಂಕಿನಿಂದ ತಮ್ಮನ್ನು ರಕ್ಷಿಸಿಕೊಂಡಿರುವುದು ಸಮಾಧಾನಕರ ಸಂಗತಿ.

ಮನೆ ಮನೆಗೆ ಮಾತ್ರೆ: ಎಚ್‌ಐವಿ ಸೋಂಕಿನಿಂದ ಬಳಲುತ್ತಿದ್ದವರು ಪ್ರತಿ ತಿಂಗಳು ನಿರಂತರ ಎಆರ್‌ಟಿ ಕೇಂದ್ರಕ್ಕೆ ಬಂದು ತಪಾಸಣೆ ಮಾಡಿಸಿಕೊಂಡು,ಮಾತ್ರೆ ತೆಗೆದುಕೊಂಡು ಹೋಗುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಬಸ್‌ ವ್ಯವಸ್ಥೆ ಇಲ್ಲದೆ, ಲಾಕ್‌ ಡೌನ್‌ ಕಾರಣದಿಂದ ಹೊರಗೆ ಬರಲಾಗದೆ ಹಾಗೂ ಓಡಾಡಲು ಆಗಲಿಲ್ಲ. ಅಷ್ಟೇ ಅಲ್ಲ, ಎಆರ್‌ಟಿ ಕೇಂದ್ರಗಳಿರುವ ಕಟ್ಟಡಗಳೆಲ್ಲಕೋವಿಡ್‌-19 ಚಿಕಿತ್ಸೆಗೆ ಬಳಕೆಯಾಗಿದ್ದರಿಂದ ಎಚ್‌ಐವಿ ಸೋಂಕಿತರು ಜೀವವನ್ನು ಕೈಯಲ್ಲಿಹಿಡಿದು ಬದುಕುವ ದುಸ್ಥಿತಿ ನಿರ್ಮಾಣವಾಗಿತ್ತು. ಇಂಥ ಕಠಿಣ ಪರಿಸ್ಥಿತಿಯಲ್ಲಿರುವ ಜಿಲ್ಲೆಯ 142 ಎಚ್‌ಐವಿ ಪೀಡಿತರ ಮನೆಗಳಿಗೆ ಹೋಗಿ ಆರೋಗ್ಯ ಸಿಬ್ಬಂದಿಯೇ ಹೋಗಿ ಮೂರು ತಿಂಗಳಿಗೆ ಆಗುವಷ್ಟು ಎಚ್‌ಐವಿ ಸೋಂಕು ಚಿಕಿತ್ಸಾ ಮಾತ್ರೆಗಳನ್ನು ತಲುಪಿಸುವ ಕಾರ್ಯ ಮಾಡಿದ್ದಾರೆ.

Advertisement

ಇನ್ನು ಕೆಲ ಎಚ್‌ಐವಿ ಸೋಂಕಿತರಿಗೆ ಅವರು ವಾಸಿಸುವ ಮನೆಯ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾತ್ರೆಗಳನ್ನು ತಲುಪಿಸಿ ಅಲ್ಲಿಂದ ಎಚ್‌ಐವಿ ಪೀಡಿತರು ಮಾತ್ರೆಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಬಹುತೇಕ ಎಚ್‌ಐವಿಪೀಡಿತರು ಮನೆಯಲ್ಲಿಯೇ ಇದ್ದು ಕೋವಿಡ್ ದಿಂದ ರಕ್ಷಿಸಿಕೊಳ್ಳುವ ಜತೆಗೆ ಎಚ್‌ಐವಿ ಸೋಂಕಿಗೆ ಚಿಕಿತ್ಸೆ

ಪಡೆದುಕೊಂಡಿದ್ದಾರೆ. ಮತ್ತೆ ಕೆಲವರಿಗೆ ಎಚ್‌ಐವಿ ಪೀಡಿತರ ಕುಟುಂಬದವರೇ ಆರೋಗ್ಯ ಕೇಂದ್ರಗಳಿಗೆ ಹೋಗಿ ಮಾತ್ರೆ ಒಯ್ಯುವ ಮೂಲಕ ಎಚ್‌ಐವಿ ಪೀಡಿತರ ಆರೋಗ್ಯ ರಕ್ಷಣೆ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಒಟ್ಟಾರೆ ಕೋವಿಡ್ ಆರ್ಭಟ ಕಾಲದಲ್ಲಿ ಎಚ್‌ ಐವಿ ಸೋಂಕಿತರನ್ನು ಉಳಿಸಿಕೊಳ್ಳುವಲ್ಲಿ ಅನೇಕ ರೀತಿಯ ಪ್ರಯತ್ನಗಳು ನಡೆದಿವೆ. ಔಷಧಿ ಇಲ್ಲದ ಎರಡೂ ಸೋಂಕುಗಳಿಗೆ ತುತ್ತಾಗಿರುವವರ ಆರೋಗ್ಯ ರಕ್ಷಣೆಗೆ ಜಿಲ್ಲಾ ಆರೋಗ್ಯ ಇಲಾಖೆ ವಿಶೇಷ ಕಾಳಜಿ ವಹಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಲಾಕ್‌ಡೌನ್‌ನಿಂದಾಗಿ ಮನೆಯಿಂದ ಹೊರಬರಲಾಗದ, ಬಸ್‌ ವ್ಯವಸ್ಥೆ ಇಲ್ಲದ ಕಡೆ ಇರುವ ಎಚ್‌ಐವಿ ಸೋಂಕಿತರಿಗೆ ಆಸ್ಪತ್ರೆಯ ವಾಹನದಲ್ಲಿಯೇ ಅವರ ಮನೆ ಬಾಗಿಲಿಗೆ ಮಾತ್ರೆಗಳನ್ನುಒಯ್ದು ಕೊಡಲಾಗಿದೆ. ಇನ್ನು ಕೆಲವರಿಗೆ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರ, ತಾಲೂಕಾಸ್ಪತ್ರೆಗಳಿಗೆ ರವಾನಿಸಿ ಮಾತ್ರೆ ಮುಟ್ಟಿಸುವ ಕೆಲಸ ಮಾಡಲಾಗಿದೆ. ಎಚ್‌ ಐವಿ ಸೋಂಕಿತರಿಗೆ ಕೋವಿಡ್‌ ಸುರಕ್ಷತಾಕ್ರಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯ ಮಾಡಲಾಗಿದ್ದು, ಹೆಚ್ಚಿನ ಜನರ ಆರೋಗ್ಯ ಕಾಪಾಡಲು ಸಾಧ್ಯವಾಗಿದೆ.ಡಾ| ಗಂಗಾಧರ ಕೆ.ಎಚ್‌., ಜಿಲ್ಲಾ ಕಾರ್ಯಕ್ರಮ ಅಧಿಕಾರಿ, ಜಿಲ್ಲಾ ಏಡ್ಸ್‌ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ದಾವಣಗೆರೆ

 

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next