ವರದಿ : ಕೆ.ನಿಂಗಜ್ಜ
ಗಂಗಾವತಿ: ಕೊರೊನಾ ಎರಡನೇ ಅಲೆ ಜೋರಾಗಿದ್ದು, ತಾಲೂಕಿನ ಪ್ರವಾಸಿ ಕೇಂದ್ರಗಳಾದ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ಪಂಪಾಸರೋವರ ಆನೆಗೊಂದಿಗೆ ನಿತ್ಯವೂ ಸಾವಿರಾರು ಜನ ಪ್ರವಾಸಿಗರು ಹನುಮಮಾಲಾಧಾರಿಗಳು ಕೋವಿಡ್ ಮುನ್ನೆಚ್ಚರಿಕೆಯ ಮಾರ್ಗಸೂಚಿ ಪಾಲನೆ ಮಾಡದೇ ಆಗಮಿಸುತ್ತಿದ್ದಾರೆ.
ಎಲ್ಲ ಪ್ರವಾಸಿ ಕೇಂದ್ರಗಳಲ್ಲಿ ಸ್ಥಳೀಯ ಆಡಳಿತವು ಕೊರೊನಾ ಮಾರ್ಗಸೂಚಿ ಪಾಲನೆ ಮತ್ತು ಸಾಮಾಜಿಕ ಅಂತರ ಕಾಪಾಡುವಂತೆ ಪ್ಲೇಕ್ಸ್ ಸೂಚನೆ ಹಾಕಿದ್ದರೂ ಇಲ್ಲಿಗೆ ಬರುವವರು ಇವುಗಳನ್ನು ಪಾಲನೆ ಮಾಡುವಲ್ಲಿ ಅಸಡ್ಡೆ ತೋರುತ್ತಿದ್ದಾರೆ.
ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ದೂರ ಊರುಗಳಿಂದ ಶನಿವಾರ ಮತ್ತು ಮಂಗಳವಾರ ಸಾವಿರಾರು ಜನ ಹನುಮಭಕ್ತರು ಹಾಗೂ ಹನುಮಮಾಲಾಧಾರಿಗಳು ಆಗಮಿಸುತ್ತಿದ್ದಾರೆ. ಬೆಟ್ಟದ ಕೆಳಗೆ ವಾಹನ ಹಾಗೂ ಹಣ್ಣು ಹೂವು ತೆಂಗಿನಕಾಯಿ ಮಾರಾಟ ಮಾಡುವವರು ಅಧಿ ಕ ಸಂಖ್ಯೆಯಲ್ಲಿರುತ್ತಾರೆ. ಇಲ್ಲಿ ಯಾರೊಬ್ಬರೂ ಮಾಸ್ಕ್ ಧರಿಸುವುದಿಲ್ಲ. ಸ್ಯಾನಿಟೈಸರ್ ಸೇರಿ ಅಗತ್ಯ ಸುರಕ್ಷ ಕ್ರಮ ಇಲ್ಲದೇ ವ್ಯವಹಾರ ಮಾಡುತ್ತಾರೆ. ಇದರಿಂದ ಕೊರೊನಾ ರೋಗ ಹರಡುವ ಭಯ ಹೆಚ್ಚಾಗಿದೆ. ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ಸುಮಾರು 6 ತಿಂಗಳ ಕಾಲ ಅಂಜನಾದ್ರಿ ಬೆಟ್ಟ ಸೇರಿ ಇಲ್ಲಿಯ ಎಲ್ಲ ಪುಣ್ಯ ಕ್ಷೇತ್ರಗಳಿಗೆ ಜನರ ಪ್ರವೇಶ ನಿಷೇಧ ಮಾಡಲಾಗಿತ್ತು.
ಕಳೆದ ಭಾರಿ ಹನುಮ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಣೆ ಮಾಡಲಾಗಿತ್ತು. ಹನುಮಮಾಲಾಧಾರಿಗಳು ಅಂಜನಾದ್ರಿಗೆ ಆಗಮಿಸದೇ ತಮ್ಮ ತಮ್ಮ ಊರುಗಳಲ್ಲಿ ಮಾಲಾ ವಿಸರ್ಜನೆ ಮಾಡುವಂತೆ ಜಿಲ್ಲಾಡಳಿತ ಮನವಿ ಮಾಡಿತ್ತು. ಪುನಃ ಎರಡನೇ ಅಲೆ ಜೋರಾಗಿದ್ದು ಈಗಲೂ ಸಾವಿರಾರು ಯುವಕರು ಹನುಮಮಾಲೆ ಧರಿಸಿದ್ದು ಏ.27 ರಂದು ಹನುಮಜಯಂತಿ ಜರುಗಲಿದೆ. ಸಾವಿರಾರು ಹನುಮಮಾಲಾಧಾರಿಗಳು ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ಹನುಮ ಭಕ್ತರು ಕಳೆದ ಭಾರಿ ಹನುಮಮಾಲಾಧರಿಗಳಿಗೆ ಅಂಜನಾದ್ರಿಯಲ್ಲಿ ಮಾಲೆ ವಿಸರ್ಜನೆಗೆ ಅವಕಾಶ ನೀಡಿರಲಿಲ್ಲ. ಈ ಬಾರಿ ಕೊರೊನಾ ಮಾರ್ಗಸೂಚಿ ಅನ್ವಯ ಅವಕಾಶ ಕಲ್ಪಿಸುವಂತೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಸಬ್‌ರಿಜಿಸ್ಟರ್, ನಗರಸಭೆಯಲ್ಲಿ ಜನಜಂಗುಳಿ: ಕೋವಿಡ್ ಎರಡನೇ ಅಲೆಯ ಮಧ್ಯೆದಲ್ಲೂ ಸಾರ್ವಜನಿಕರು ತಮ್ಮ ಸರಕಾರದ ಕೆಲಸ ಕಾರ್ಯಗಳಿಗೆ ಸಬ್‌ರಿಜಿಸ್ಟರ್, ತಹಶೀಲ್ ಕಚೇರಿ ಮತ್ತು ನಗರಸಭೆಗೆ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಕೊರೊನಾ ಮಾರ್ಗಸೂಚಿ ಅನುಸರಿಸುತ್ತಿಲ್ಲ. ಇದರಿಂದ ಕೊರೊನಾ ರೋಗ ಹರಡುವ ಸಂಭವವಿದ್ದು, ಕೊರೊನಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲನೆಗೆ ಕ್ರಮ ಅಗತ್ಯವಾಗಿದೆ.
ನರೇಗಾ ಕೂಲಿಕಾರರಲ್ಲಿ ಜಾಗೃತಿ: ತಾಲೂಕಿನ ಹಲವು ಗ್ರಾ.ಪಂಗಳ ವ್ಯಾಪ್ತಿಯ ಜನರಿಗೆ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿ ಕೆಲಸವನ್ನು ಗ್ರಾ.ಪಂಗಳು ನೀಡುತ್ತಿವೆ. ಕೂಲಿಕಾರರು ತಮ್ಮ ಗ್ರಾಮಗಳಿಂದ ಕೆರೆ ಹೂಳೆತ್ತಲು ಬೇರೆ ಕಡೆ ಟ್ರಾÂಕ್ಟರ್‌ಗಳಲ್ಲಿ ಗುಂಪಾಗಿ ಕೊರೊನಾ ಮಾರ್ಗಸೂಚಿ ಇಲ್ಲದೇ ಮಾಸ್ಕ್ ಧರಿಸದೇ ಹೋಗುತ್ತಿರುವುದು ಕಂಡು ಬರುತ್ತಿದೆ. ಇಂತಹ ಪ್ರಕರಣಗಳು ಜರುಗದಂತೆ ಗ್ರಾ.ಪಂ ಪಿಡಿಒಗಳು ಸಂಬಂಧಪಟ್ಟವರು ಕೂಲಿಕಾರರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ.