ಅಥಣಿ: ತಾಲೂಕಿನಾದ್ಯಂತ ಕೋವಿಡ್ ರಕ್ಷಾ ಬಂಧನದ ಖುಷಿ ಕಸಿದಿದೆ. ಸಂಪ್ರದಾಯದ ಪ್ರಕಾರವಾಗಿ ಶ್ರಾವಣ ಮಾಸವೆಂದರೆ ಎಲ್ಲಾ ಮಹಿಳೆಯರಿಗೆ ಎಲ್ಲಿಲ್ಲದ ಖುಷಿ. ಅದರಲ್ಲೂ ನೂಲು ಹುಣ್ಣಿಮೆಯಂದು ಭ್ರಾತೃತ್ವದ ಸಂಕೇತವಾದ ರಾಖೀಯನ್ನು ಸಹೋದರರ ಕೈಗೆ ಕಟ್ಟಿ ಉಡುಗೊರೆ ಪಡೆಯುವ ಸಂಭ್ರಮವಂತೂ ಹೇಳಲೇ ತೀರದು. ನಗರ ಸೇರಿದಂತೆ ತಾಲೂಕಿನ ನಾನಾ ಪ್ರದೇಶಗಳ ಮಾರುಕಟ್ಟೆಯಲ್ಲಿ ಕಳೆದ ಕೆಲ ದಿನಗಳಿಂದ ಆರಂಭಿಸಿದ ರಾಖೀ ಅಂಗಡಿಗಳು ಕೊಳ್ಳುವವರಿಲ್ಲದೆ ಬಿಕೋ ಎನ್ನುತ್ತಿವೆ.
ಮಾರಾಟಗಾರರು ಓಂ, ಗಣೇಶ, ಕೃಷ್ಣಾ, ಬಾಹುಬಲಿ, ಛೋಟಾ ಭೀಮ, ಸೇರಿದಂತೆ ನಾನಾ ಟ್ರೆಂಡಿಂಗ್ ರಾಖೀಗಳನ್ನು ತಂದು ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿದ್ದರೂ ಕೊಳ್ಳುವವರಿಲ್ಲದಂತಾಗಿದೆ. ಜನ, ವಿಶೇಷವಾಗಿ ಮಹಿಳೆಯರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ಅಥಣಿ ನಗರದ ಬಸವೇಶ್ವರ ಸರ್ಕಲ್, ಹಳ್ಯಾಳ ಸರ್ಕಲ್, ಅಂಬೇಡ್ಕರ ಸರ್ಕಲ್, ವಿಜಯಪುರ ರಸ್ತೆ, ಮಾರುಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳ ಬದಿಯಲ್ಲಿ ಮತ್ತು ಸರ್ಕಲ್‌ಗಳಲ್ಲಿ ಸಾಕಷ್ಟು ರಾಖೀ ಸ್ಟಾಲ್ ಗಳು ತಲೆ ಎತ್ತಿವೆ. ಫಳ ಫಳ ಹೊಳೆಯುವ ಮುತ್ತು, ಗಾಜಿನಿಂದ ಕೂಡಿದ ಲೇಟೆಸ್ಟ್ ಟ್ರೆಂಡ್‌ನ ರಾಖೀಗಳು, ನವಿರಾದ ರೇಷ್ಮೆ, ನೂಲಿನಿಂದ ತಯಾರಿಸಿದ ರಾಖೀಗಳು, ಸ್ಪಂಜ್, ದಾರ ಸೇರಿದಂತೆ ನಾನಾ ವಿನ್ಯಾಸದ ಬಣ್ಣ ಬಣ್ಣದ ರಾಖೀಗಳನ್ನು ಆಕರ್ಷಕವಾಗಿ ಜೋಡಿಸಿಡಲಾಗಿದೆ. ರಾಖೀಗಳ ಗಾತ್ರ ಮತ್ತು ವಿನ್ಯಾಸಕ್ಕೆ ತಕ್ಕಂತೆ 5 ರೂ.ಗಳಿಂದ ನೂರಾರು ರೂ.ಗಳ ದರವಿದೆ. ಜತಗೆ ಸಾವಿರಾರು ರೂ.ಗಳ ದರದ ಚಿನ್ನ ಹಾಗೂ ಬೆಳ್ಳಿ ಲೇಪಿತ ರಾಖೀಗಳು ಲಭ್ಯ ಇವೆ. ಅಲ್ಲಲ್ಲಿ ಕೆಲ ಜನರು ತಮ್ಮ ಬೇಡಿಕೆ ತಕ್ಕಂತೆ ವಿಚಾರಿಸಿ ಖರೀದಿಸುತ್ತಿದ್ದಾರೆ.
ಕೋವಿಡ್ ದಿಂದಾಗಿ ಅನೇಕರು ಮನೆ ಬಿಟ್ಟು ಹೊರಬರುತ್ತಿಲ್ಲ. ಹಾಗಾಗಿ ಈ ಸಲ ನಾವು ತಂದ ರಾಖೀಗಳಲ್ಲಿ ಅರ್ಧದಷ್ಟು ಮಾರಾಟವಾಗದೇ ಉಳಿದಿವೆ. ಈ ಬಾರಿ ಕೋವಿಡ್ ನಿಂದಾಗಿ ಹಬ್ಬದ ವ್ಯಾಪಾರದಲ್ಲಿ ಮಂಕು ಕವಿದಿದೆ. –
ರಾಹುಲ ಲಗಳಿ,ಕಿರಾಣಿ ವ್ಯಾಪಾರಿ.