Advertisement

ಕೋವಿಡ್ ಸೋಂಕಿಗೆ ಯುವ-ಮಧ್ಯಮ ವಯಸ್ಕರೇ ಟಾರ್ಗೆಟ್‌!

11:14 AM May 10, 2021 | Team Udayavani |

ವರದಿ: ವೀರೇಂದ್ರ ನಾಗಲದಿನ್ನಿ

Advertisement

ಗದಗ: ಇತ್ತೀಚಿನ ದಿನಗಳಲ್ಲಿ ಕೊರೊನಾ ಆರ್ಭಟಿಸುತ್ತಿದೆ. ವಯಸ್ಸಿನ ಮಿತಿಯಿಲ್ಲದೇ ಸೋಂಕು ತಗುಲುತ್ತಿದ್ದು, ಈ ಪೈಕಿ 21ರಿಂದ 40 ವರ್ಷದೊಳಗಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದರಿಂದ ಕುಟುಂಬದ ಆರ್ಥಿಕ ಹಾಗೂ ಭಾವನಾತ್ಮಕ ಸಂಬಂಧಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಕೆಲವರು ಮಾನಸಿಕ ಒತ್ತಡದಿಂದ ಆತ್ಮಹತ್ಯೆಯಂತಹ ಹೆಜ್ಜೆಗಳನ್ನಿಡುತ್ತಿದ್ದು, ಕುಟುಂಬಗಳ ಆಧಾರ ಸ್ತಂಭವೇ ಅಲುಗಾಡುತ್ತಿವೆ. ರಾಜ್ಯದಲ್ಲಿ ಕಂಡುಬಂದಿರುವ ಸೋಂಕಿನ ಪ್ರಕರಣಗಳಲ್ಲಿ ಶೇ.50ಕ್ಕಿಂತ ಹೆಚ್ಚು ಯುವ ಮತ್ತು ಮಧ್ಯಮ ವಯಸ್ಸಿನವರಿದ್ದಾರೆ. ಗದಗ ಜಿಲ್ಲೆಯೊಂದರಲ್ಲೇ ಕಳೆದೊಂದು ವರ್ಷದಲ್ಲಿ (6-4-2020ರಿಂದ 6-5-2021) ಒಟ್ಟು 13,787 ಸೋಂಕು ದೃಢಪಟ್ಟಿತ್ತು.

ಕೋವಿಡ್‌ ಮೊದಲ ಅಲೆಯಲ್ಲಿ 21ರಿಂದ 30 ವರ್ಷದವರಲ್ಲಿ 2,884 ಜನ ಹಾಗೂ 31ರಿಂದ 40 ವರ್ಷದ 2,710 ಜನರು ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ. 41ರಿಂದ 50 ವಯಸ್ಸಿನ 2310 ಹಾಗೂ 51ರಿಂದ 60 ವರ್ಷದ 2057 ಜನ ಕೋವಿಡ್‌ಗೆ ಒಳಗಾಗಿದ್ದಾರೆ. ಇನ್ನುಳಿದ ವಯೋಮಾನದವರಲ್ಲಿ 100, 500 ಜನರಿಗೆ ಸೋಂಕು ಹರಡಿದೆ. 2ನೇ ಅಲೆಯಲ್ಲೂ ಇವರೇ ಹೆಚ್ಚು!: ಕೋವಿಡ್‌-2ನೇ ಅಲೆಯಲ್ಲೂ 21ರಿಂದ 50 ವರ್ಷದೊಳಗಿನವರೇ ಗರಿಷ್ಠ ಸಂಖ್ಯೆಯಲ್ಲಿ ಸೋಂಕಿಗೆ ಒಳಗಾಗಿದ್ದಾರೆ. ಕಳೆದೊಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಸೋಂಕು ತೀವ್ರವಾಗಿ ಹಬ್ಬುತ್ತಿದೆ. ಜ.1ರಿಂದ ಮೇ 6ರವರೆಗೆ ಒಟ್ಟು 2880 ಜನರಿಗೆ ಸೋಂಕು ತಗುಲಿದೆ. ಅವರಲ್ಲಿ 21ರಿಂದ 30 ವಯೋಮಾನದ 737, 31ರಿಂದ 40 ವರ್ಷದ 573 ಹಾಗೂ 41ರಿಂದ 50 ವರ್ಷದ 445 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕಾರಣವೇನು?: ಯುವ ಹಾಗೂ ಮಧ್ಯಮ ವಯೋಮಾನದವರಿಗೆ ಸೋಂಕು ಹರಡಲು ಅನಿವಾರ್ಯತೆ, ಅತಿಯಾದ ಆತ್ಮವಿಶ್ವಾಸ ಹಾಗೂ ಉಡಾಫೆಯೂ ಪ್ರಮುಖ ಕಾರಣ. ಸಾಮಾನ್ಯವಾಗಿ 25 ವರ್ಷ ದಾಟುತ್ತಿದ್ದಂತೆ ಅನೇಕರಿಗೆ ಕುಟುಂಬದ ಜವಾಬ್ದಾರಿ ಹೆಗಲೇರಿರುತ್ತದೆ. ಅದಕ್ಕಾಗಿ ನಿತ್ಯ ದುಡಿಮೆ ಅನಿವಾರ್ಯ. ಆದರೆ, ಈ ವೇಳೆ ತಾವು ಆರೋಗ್ಯವಂತರಾಗಿದ್ದೇವೆ. ತಮಗೆ ಸೋಂಕು ಹರಡಿದರೂ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಆರೋಗ್ಯಕ್ಕೆ ಸಮಸ್ಯೆ ಆಗದು ಎಂಬ ಅತಿಯಾದ ಆತ್ಮವಿಶ್ವಾಸ ಮತ್ತು ಉಡಾಫೆಯ ವರ್ತನೆಗಳೇ ಅವರನ್ನು ಸೋಂಕಿನ ಬಲೆಗೆ ಸಿಕ್ಕಿಸುವ ಸಾಧ್ಯತೆಗಳೇ ಹೆಚ್ಚು. ಜತೆಗೆ ಕೋವಿಡ್‌ ಕುರಿತ ಮಿತ್ಯಗಳಿಂದಾಗಿ ಸೋಂಕಿತರಲ್ಲಿ ಆತಂಕ, ಖನ್ನತೆ ಹೆಚ್ಚುತ್ತಿದೆ.

Advertisement

ಯಾವುದೇ ಲಕ್ಷಣಗಳಿಲ್ಲದ್ದರೂ, ಆಸ್ಪತ್ರೆಗಳಲ್ಲಿ ಬೆಡ್‌ಗಾಗಿ ಹುಡುಕಾಡುವುದು, ಸಿಗದಿದ್ದಾಗ ಗಾಬರಿಯಾಗುವುದು, ಕೊರೊನಾ ನನಗ್ಯಾಕೆ ಬಂತು? ನಾನಿನ್ನು ಬದುಕಿರಬಾರದು ಎಂಬುದು ಸೇರಿದಂತೆ ನಾನಾ ಚಿತ್ತ ವಿಕಲತೆ ಕಂಡು ಬಂದಿದ್ದು, ರಾಜ್ಯ ವಿವಿಧ ಆಸ್ಪತ್ರೆಗಳಲ್ಲಿ ಕಟ್ಟಡದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಜಿಮ್ಸ್‌ ಮನಶಾಸ್ತ್ರಜ್ಞ ವಿಭಾಗದ ಮುಖ್ಯಸ್ಥ ಡಾ|ಸೋಮಶೇಖರ್‌ ಬಿಜ್ಜಳ.

ಅಭದ್ರತೆಯಲ್ಲಿ ಕುಟುಂಬಗಳು: ಯುವ ಹಾಗೂ ಮಧ್ಯಮ ವಯಸ್ಸಿನಲ್ಲಿ ಸೋಂಕಿಗೆ ಒಳಗಾದವವರಲ್ಲಿ ಅನೇಕರು ಕೊರೊನಾ ಜಯಸಿದ್ದರೂ, ಕೆಲವರು ಸೋಂಕಿಗೆ ಸೋತು ಶರಣಾಗಿದ್ದಾರೆ. ಕೆಲ ಕುಟುಂಬಗಳು ಆಧಾರ ಸ್ತಂಭವನ್ನೇ ಕಳೆದುಕೊಂಡು, ಅಭದ್ರತೆಗೆ ಸಿಲುಕಿವೆ. ಬಡ ಮತ್ತು ಮಧ್ಯಮ ವರ್ಗದವರ ಸ್ಥಿತಿ ಹೇಳತೀರದು. ಕೊರೊನಾ ಚಿಕಿತ್ಸೆಗೆ ಮಾಡಿದ ಸಾಲ ಮೈಮೇಲೆ ಬಂದಿದ್ದರೆ, ಮನೆ ನಿರ್ವಹಣೆ ಜವಾಬ್ದಾರಿ ಮಹಿಳೆಯರ ಹೆಗಲೇರಿದೆ. ತಂದೆ- ತಾಯಿಯಿಂದ ಅಗಲಿದ ಪುಟ್ಟ ಮಕ್ಕಳ ಶಿಕ್ಷಣ, ಭವಿಷ್ಯ ನೆನೆದು ಸಂಬಂಧಿ ಕರು ನಿತ್ಯ ಕಣ್ಣೀರಿಡುವಂತಾಗಿದೆ. ಅಲ್ಲದೇ, ತಮ್ಮ ಕುಟುಂಬಸ್ಥರು, ನೆರೆಹೊರೆಯವರ ಸಂಪರ್ಕದಿಂದ ಅನೇಕ ಹಿರಿಯ ನಾಗರಿಕರು ಸೋಂಕಿಗೆ ಒಳಗಾಗಿದ್ದಾರೆ. ತಮ್ಮದಲ್ಲದ ತಪ್ಪಿಗೆ ಜೀವ ಬಿಟ್ಟ ಪ್ರಕರಣಗಳಿಗೂ ಲೆಕ್ಕವಿಲ್ಲ ಎನ್ನುತ್ತಾರೆ ವೈದ್ಯರು.

Advertisement

Udayavani is now on Telegram. Click here to join our channel and stay updated with the latest news.

Next