ಹುಬ್ಬಳ್ಳಿ: ಕೋವಿಡ್ ಮಹಾಮಾರಿ ಮದ್ಯ ಮಾರಾಟದ ಮೇಲೂ ಬಹಳಷ್ಟು ಪರಿಣಾಮ ಬೀರಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಕುಡಿಯುವವರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದ್ದು, ಲಾಕ್‌ಡೌನ್ ಸಡಿಲಿಕೆ ನಂತರವೂ ಮದ್ಯ ಮಾರಾಟದಲ್ಲಿ ಸಾಕಷ್ಟು ಕುಸಿತ ಕಂಡಿದೆ ಅಬಕಾರಿ ಇಲಾಖೆಯ ಅನುಸಾರ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಏಪ್ರಿಲ್‌ನಿಂದ ಜುಲೈವರೆಗೆ ನಾಲ್ಕು ತಿಂಗಳ ಅವಧಿಯಲ್ಲಿ ಶೇ. 30 ಮದ್ಯ ಮಾರಾಟ ಕಡಿಮೆಯಾಗಿದೆ.
ಅದರಲ್ಲೂ ಮಹಿಳೆಯರು, ಯುವತಿಯರು, ಪುರುಷರು, ಯುವಕರೆನ್ನದೆ ಬಹುತೇಕರ ಅಚ್ಚುಮೆಚ್ಚಿನ ಬಿಯರ್ ಮಾರಾಟದಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ಶೇ.60 ಕಡಿಮೆಯಾಗಿದೆ. ಮದ್ಯ ಸೇವಿಸುವವರಿಗೆ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹಾನಿ ಮಾಡಲಿದೆ ಎನ್ನುವ ಭಯವೂ ಮದ್ಯ ಮಾರಾಟಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
2019ರಲ್ಲಿ ಏಪ್ರಿಲ್‌ನಿಂದ ಜುಲೈ ತಿಂಗಳವರೆಗೆ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಿಂದ ಸರಬರಾಜು ಆಗುವ ಐಎಂಎಲ್‌ನ ಎಲ್ಲ ಬಗೆಯ ಮದ್ಯವು 4,98,073 ಬಾಕ್ಸ್ ಮಾರಾಟವಾಗಿತ್ತು. ಆದರೆ 2020ರಲ್ಲಿ ಇದೇ ಅವಧಿಯಲ್ಲಿ 3,46,915 ಬಾಕ್ಸ್ ಮಾತ್ರ ಮಾರಾಟವಾಗಿದೆ. ಅಂದರೆ ಕಳೆದ ವರ್ಷಕ್ಕೆಹೋಲಿಸಿದರೆ 1,51,158 ಬಾಕ್ಸ್ ಕಡಿಮೆಯಾಗಿದೆ. ಇದು ಶೇ. 30 ಮಾರಾಟ ಕುಸಿತ ಕಂಡಿದೆ. ಕಳೆದ ವರ್ಷ ಈ ಅವಧಿಯಲ್ಲಿ ಆದಾಯ ಸಂಗ್ರಹವು 387.54 ಕೋಟಿ ರೂ. ಆಗಿದ್ದರೆ, ಈ ವರ್ಷ 284.42 ಕೋಟಿ ರೂ.ದಷ್ಟಾಗಿದೆ. ಅಂದರೆ 103.12 ಕೋಟಿ ರೂ.ದಷ್ಟು ಕಡಿಮೆಯಾಗಿದ್ದು, ಶೇ.26 ಕುಸಿತವಾಗಿದೆ.
ಮದ್ಯ ಮಾರಾಟದಿಂದ ಜಿಲ್ಲೆಯಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ ಅಂದರೆ 2019ರ ಏಪ್ರಿಲ್‌ನಿಂದ 2020ರ ಮಾರ್ಚ್‌ವರೆಗೆ 1,131.88 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಈ ವರ್ಷ ಏಪ್ರಿಲ್‌ನಿಂದ ಜುಲೈ ಅಂತ್ಯದವರೆಗೆ ನಾಲ್ಕು ತಿಂಗಳ ಅವಧಿಯಲ್ಲಿ 284.42ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಅದೇ ರೀತಿ 2019ರ ಏಪ್ರಿಲ್‌ನಿಂದ ಜುಲೈವರೆಗೆ ಬಿಯರ್ ಮಾರಾಟವು 2,56,213 ಬಾಕ್ಸ್ ಆಗಿತ್ತು. ಆದರೆ 2020ರ ಅವಧಿಯಲ್ಲಿ ಪಾತಾಳಕ್ಕಿಳಿದಿದೆ. ಕೇವಲ1,01,825 ಬಾಕ್ಸ್‌ಗಳು ಮಾತ್ರ ಮಾರಾಟವಾಗಿವೆ. ಶೇ.60 ಕುಸಿದಿದೆ. ಕೊರೊನಾ ವೈರಸ್ ಮಹಾಮಾರಿ ನಿಮಿತ್ತ ಲಾಕ್‌ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಿನಲ್ಲಿ ಮದ್ಯ ಮಾರಾಟ ಸಂಪೂರ್ಣ ನಿರ್ಬಂಧಿಸಲಾಗಿತ್ತು. ನಂತರ ಸರಕಾರವು ಲಾಕ್‌ಡೌನ್‌ದಲ್ಲಿ ಸ್ವಲ್ಪ ಸಡಿಲಿಕೆ ಮಾಡಿದ್ದರಿಂದ ಮೇ ತಿಂಗಳಲ್ಲಿ ಶೇ.25 ಮಾತ್ರ ಮಾರಾಟವಾಗಿತ್ತು. ತದನಂತರದ ದಿನಗಳಲ್ಲೂ ಹೇಳಿಕೊಳ್ಳುವಷ್ಟು ಮದ್ಯ ಮಾರಾಟವಾಗಿಲ್ಲ.
ಆದಾಯ ಸಂಗ್ರಹದಲ್ಲಿ ಭಾರಿ ಕುಸಿತ : ಸರಕಾರ ಈ ವರ್ಷ ಬಜೆಟ್‌ನಲ್ಲಿ 22,700 ಕೋಟಿ ರೂ. ಅಬಕಾರಿ ಆದಾಯ ಸಂಗ್ರಹದ ಗುರಿ ಹೊಂದಿದೆ. ಆದರೆ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳ ಅವಧಿಯಲ್ಲಿಯೇ ಅಬಕಾರಿ ಆದಾಯ ಸಂಗ್ರಹದಲ್ಲಿ ಭಾರಿ ಕುಸಿತವುಂಟಾಗಿದೆ. ಹೀಗಾಗಿ ಸರಕಾರ ಈ ವರ್ಷ ಅಬಕಾರಿ ಇಲಾಖೆಯಿಂದ ನಿರೀಕ್ಷೆ ಮಾಡಿದ್ದ ಆದಾಯ ಸಂಗ್ರಹದಲ್ಲೂ ಭಾರಿ ಕಡಿತವಾಗುವ ಲಕ್ಷಣಗಳಿವೆ ಎನ್ನುತ್ತಾರೆ ಅಬಕಾರಿ ಇಲಾಖೆ ಹಿರಿಯ ಅಧಿಕಾರಿಗಳು
ಪಾರ್ಸಲ್‌ಗೆ ಬಹುತೇಕ ಜನರ ಹಿಂದೇಟು : ಲಾಕ್‌ಡೌನ್ ಸಡಿಲಿಕೆ ನಂತರದಲ್ಲಿ ಕೌಂಟರ್ ಸೇಲ್‌ಗೆ ಮಾತ್ರ ಅವಕಾಶ ನೀಡಿದ್ದು, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ಅವಕಾಶ ನೀಡಿಲ್ಲ. ಹೀಗಾಗಿ ಇದು ಕೂಡ ಮದ್ಯ ಮಾರಾಟ ಕಡಿಮೆಯಾಗಲು ಕಾರಣವಾಗಿದೆ ಎನ್ನಲಾಗಿದೆ. ಬಾರ್‌ಗಳು ಬಂದ್ ಆಗಿರುವುದರಿಂದ ಬಹುತೇಕರು ಪಾರ್ಸಲ್ ತೆಗೆದುಕೊಂಡು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಹಕರ ಕೊರತೆಯಿಂದ ಕೆಲ ಮದ್ಯಗಳನ್ನು ಕೋಲ್ಡ್ ಸ್ಟೋರೇಜ್ ಮಾಡಲು ಅಂಗಡಿಕಾರರು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಅಬಕಾರಿ ಇಲಾಖೆ ಅಧಿಕಾರಿಗಳು
ಏಪ್ರಿಲ್‌ನಿಂದ ಜುಲೈ ತಿಂಗಳವರೆಗೆ ಮದ್ಯ ಮಾರಾಟದಲ್ಲಿ ಒಂದಿಷ್ಟು ಇಳಿಕೆ ಕಂಡು ಬಂದಿತ್ತು. ಇದೀಗ ಆಗಸ್ಟ್ ತಿಂಗಳಿನಿಂದ ಮಾರಾಟದಲ್ಲಿ ಚೇತರಿಕೆಯಾಗುತ್ತಿದೆ. –
ಶಿವನಗೌಡ, ಜಿಲ್ಲಾ ಆಯುಕ್ತ, ಅಬಕಾರಿ ಇಲಾಖೆ
– ಶಿವಶಂಕರ ಕಂಠಿ