Advertisement
ಬೆಳಗಾವಿ: ಕೋವಿಡ್ದ ಮೊದಲ ಅಲೆಯ ಹೊಡೆತದಿಂದ ಹೊರಬಂದು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಕೈಗಾರಿಕಾ ವಲಯ ಎರಡನೇ ಅಲೆಯ ಸುಳಿಗೆ ಸಿಲುಕಿ ಮತ್ತಷ್ಟು ಸಂಕಷ್ಟ ಅನುಭವಿಸಬೇಕಾಗಿದೆ. ರಾಜ್ಯದಲ್ಲಿ ಕೋವಿಡ್ ಹಾವಳಿ ತೀವ್ರ ಆತಂಕ ಸೃಷ್ಟಿ ಮಾಡಿರುವ ಬೆನ್ನಲ್ಲೇ ಕೈಗಾರಿಕೋದ್ಯಮಿಗಳು ಮರಳಿ ಸರಕಾರದ ಸಹಾಯ ಹಸ್ತದ ಕಡೆ ಮುಖ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದಕ್ಕೆ ಗಡಿ ಜಿಲ್ಲೆ ಬೆಳಗಾವಿ ಸಹ ಹೊರತಾಗಿಲ್ಲ.
Related Articles
Advertisement
ಕೈಗಾರಿಕಾ ವಲಯದಲ್ಲಿ ಈಗ ಶೇಕಡಾ 60 ಉದ್ಯಮಿಗಳು ಕೋವಿಡ್ ಕಾರಣದಿಂದ ತೀವ್ರ ನಷ್ಟದಲ್ಲಿದ್ದಾರೆ. ಕಳೆದ ವರ್ಷ ಎಂಟು ತಿಂಗಳು ಹಾನಿ ಅನುಭವಿಸಿದ್ದಾರೆ. ಅವರಲ್ಲಿ ಬ್ಯಾಂಕ್‌ನ ಬಡ್ಡಿ ತುಂಬಲು ಹಣ ಇಲ್ಲ. ಎಲ್ಲರೂ ಒಳ್ಳೆಯ ದಿನಕ್ಕಾಗಿ ಕಾಯುತ್ತಿದ್ದಾರೆ. ಈಗ ಮತ್ತೆ ಪರೋಕ್ಷವಾಗಿ ಲಾಕ್‌ಡೌನ್ ಮಾಡಲಾಗಿದೆ. ಇದರಿಂದ ಏನು ಮಾಡಬೇಕೋ ತಿಳಿಯುತ್ತಿಲ್ಲ ಎಂಬುದು ಕೈಗಾರಿಕಾ ಸಂಘದ ಪದಾಧಿಕಾರಿಗಳ ಅನಿಸಿಕೆ.
ಉತ್ಪಾದನಾ ಪ್ರಮಾಣ ಕುಸಿತ: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕೈಯಲ್ಲಿ ಈಗ ಸಾಕಷ್ಟು ಬೇಡಿಕೆಗಳಿವೆ. ಆದರೆ ಕಚ್ಚಾವಸ್ತುಗಳ ಅಭಾವ ಎದುರಾಗಿದೆ. ಬೆಲೆ ಏರಿಕೆಯ ಮೇಲೆ ನಿಯಂತ್ರಣವೇ ಇಲ್ಲ. ಇಬ್ಬರು ದೊಡ್ಡ ಉದ್ಯಮಿಗಳ ಹಿಡಿತದಲ್ಲಿ ಇಡೀ ವ್ಯವಸ್ಥೆ ಇದೆ. ಕಚ್ಚಾ ವಸ್ತುಗಳ ಕೃತಕ ಅಭಾವ ಸೃಷ್ಟಿಸಿ ಬೆಲೆ ಎರಡು ಪಟ್ಟು ಹೆಚ್ಚು ಮಾಡುತ್ತಿದ್ದಾರೆ. ಇದರ ಪರಿಣಾಮ ನೇರವಾಗಿ ಸಣ್ಣ ಕೈಗಾರಿಕೆಗಳ ಮೇಲಾಗುತ್ತಿದೆ ಎನ್ನುತ್ತಾರೆ ಉದ್ಯಮಿ ಬಸವರಾಜ ಜವಳಿ. ಕಳೆದ ವರ್ಷ ಲಾಕ್‌ಡೌನ್ ಜಾರಿಯಾದರೂ ಕೈಗಾರಿಕೆಗಳಿಗೆ ಸರಕಾರಕ್ಕೆ ತೆರಿಗೆ ಕಟ್ಟುವುದು, ಹೆಸ್ಕಾಂಗೆ ವಿದ್ಯುತ್ ಬಿಲ್ ತುಂಬುವುದು, ಬ್ಯಾಂಕ್‌ಗಳಿಗೆ ಬಡ್ಡಿ ಮತ್ತು ಅಸಲು ತುಂಬುವುದು ತಪ್ಪಲಿಲ್ಲ. ಬಡ್ಡಿ ತುಂಬುವುದನ್ನು ಮೂರು ತಿಂಗಳು ಮುಂದೂಡಿದರೂ ಅದನ್ನು ಮನ್ನಾ ಮಾಡಲಿಲ್ಲ. ಲಾಕ್‌ಡೌನ್ ಮುಗಿಯುತ್ತಿದ್ದಂತೆ ಬ್ಯಾಂಕ್‌ದವರು ಸಾಲ ಮರುಪಾವತಿಗೆ ಒತ್ತಡ ಹಾಕುತ್ತಲೇ ಇದ್ದಾರೆ.
ಇದು ಉದ್ಯಮಿಗಳನ್ನು ಮತ್ತಷ್ಟು ಕಷ್ಟಕ್ಕೆ ಸಿಲುಕಿಸಿದೆ ಎಂಬುದು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಸದಸ್ಯರ ಅಸಮಾಧಾನ. ಬೆಲೆ ಏರಿಕೆ ನಿಯಂತ್ರಣ, ಆರ್ಥಿಕ ನೆರವು ಸೇರಿದಂತೆ ಕೈಗಾರಿಕೆಗಳ ನೆರವಿಗೆ ಸಾಕಷ್ಟು ಕಾನೂನುಗಳಿದ್ದರೂ ಆದಾವುದೂ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರುತ್ತಿಲ್ಲ. ಇದರ ಪರಿಣಾಮ ಸಣ್ಣ ಉದ್ಯಮಿಗಳ ಮೇಲಾಗುತ್ತಿದೆ. ಕೋವಿಡ್ ಸಂಕಷ್ಟದ ಸಮಯದಲ್ಲೂ ಪ್ಯಾಕೇಜ್ ಮೂಲಕ ತಮ್ಮ ನೆರವಿಗೆ ಬರುತ್ತಿಲ್ಲ ಎಂಬ ನೋವು ಸಣ್ಣ ಉದ್ಯಮಿಗಳನ್ನು ಕಾಡುತ್ತಿದೆ.