Advertisement

ಬಣ್ಣದಾಟಕ್ಕೆ ಅಡ್ಡಿ; ಇತಿಹಾಸದಲ್ಲೇ ಮೊದಲು

04:12 PM Mar 22, 2021 | Team Udayavani |

ಬಾಗಲಕೋಟೆ: ದೇಶದಲ್ಲೇ ಅತಿ ವಿಶಿಷ್ಟ ಹಾಗೂ ವಿನೂತನವಾಗಿ ನಡೆಯುವ ಬಾಗಲಕೋಟೆಯ ಹೋಳಿ ಹಬ್ಬಕ್ಕೆ ಈ ಬಾರಿ ಕೋವಿಡ್ 2ನೇ ಅಲೆ ಅಡ್ಡಿಯಾಗಿದೆ. ಹೋಳಿ ಹಬ್ಬದ ಇತಿಹಾಸದಲ್ಲೇಮೊದಲ ಬಾರಿಗೆ ಬಣ್ಣದಾಟ ರದ್ದಾಗಿದೆ.

Advertisement

ಹೌದು, ಬಾಗಲಕೋಟೆಯ ಹೋಳಿ ಆಚರಣೆ,ಅತ್ಯಂತ ವಿನೂತನ. ಇದಕ್ಕೊಂದು ದೊಡ್ಡ ಇತಿಹಾಸವೂ ಇದೆ. ಮೊದಲು ಐದು ದಿನಗಳ ವರೆಗೆ ನಡೆಯುತ್ತಿದ್ದ ಇಲ್ಲಿನ ಬಣ್ಣದಾಟ ನೋಡಲೆಂದೇ ಹಲವಾರು ಜಿಲ್ಲೆ, ಊರುಗಳಿಂದ ಜನ ಬರುತ್ತಿದ್ದರು. ದೇಶ-ವಿದೇಶಗಳಿಗೆ ಹೋಗಿದ್ದ ಬಾಗಲಕೋಟೆಯಜನ, ಹೋಳಿ ಹಬ್ಬಕ್ಕಾಗಿ ಮರಳು ಇಲ್ಲಿಗೆಬರುತ್ತಿದ್ದರು. ಐದು ದಿನಗಳ ಕಾಲ ನಡೆಯುತ್ತಿದ್ದಬಣ್ಣದಾಟದಿಂದ ನಗರದ ವರ್ತಕರಿಗೆ, ವಿವಿಧ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಅದನ್ನು ಮೂರು ದಿನಗಳಿಗೆ ಇಳಿಸಲಾಗಿತ್ತು.ಸುಮಾರು 180ರಿಂದ 200 ವರ್ಷಗಳ ಇತಿಹಾಸಹೊಂದಿರುವ ಬಾಗಲಕೋಟೆಯ ಹೋಳಿ-ಬಣ್ಣದಾಟ, ಈ ಬಾರಿ ಕೋವಿಡ್ 2ನೇ ಅಲೆಯ ಪರಿಣಾಮ ಸಪ್ಪೆಯಾಗಿದೆ.

ಬಣ್ಣದ ಬಂಡಿ ನೋಡುವುದೇ ಹಬ್ಬ: ಕಾಮ ದಹನದ ಮರುದಿನದಿಂದ ಮೂರು ದಿನಗಳಕಾಲ ನಡೆಯುತ್ತಿದ್ದ ಇಲ್ಲಿನ ಬಣ್ಣದ ಬಂಡಿಗಳು,ಅದರ ಮುಂದೆ ಹೋಗುವ ತುರಾಯಿ ಹಲಗೆಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಹೋಳಿಆಚರಣೆಗೆಂದೇ ಇಲ್ಲಿ ಬಾಬುದಾರರ ಮನೆತನಗಳಿವೆ.ಕೆಲವು ಬಾಬುದಾರ ಮನೆಯಿಂದ ಹಲಗೆ ಬಂದರೆ,ಇನ್ನೂ ಕೆಲವರ ಮನೆಯಿಂದ ಕಾಮ ದಹನಕ್ಕೆ ಕಟ್ಟಿಗೆ ಬರುತ್ತವೆ.

ಎಲ್ಲ ಸಮಾಜ ಬಾಂಧವರು ಒಟ್ಟಿಗೇ ಕೂಡಿ,ಜಾತಿ-ಪಕ್ಷ, ಪ್ರತಿಷ್ಠೆ ಇಲ್ಲದೇ ಬಣ್ಣದಲ್ಲಿ ಮಿಂದೆದ್ದು,ಬಾಗಲಕೋಟೆಯ ಸಂಸ್ಕೃತಿ ಮೆರೆಯುತ್ತಾರೆ. ಇದುಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಮಾನ್ಯತೆ ಸಿಗುವ ಸಮಯದಲ್ಲೇ ರದ್ದು: ಬಾಗಲಕೋಟೆಯಲ್ಲಿ ಹುಟ್ಟಿ ಬೆಳೆದ, ಸಧ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿರುವ ಅರವಿಂದ ಲಿಂಬಾವಳಿ ಹೋಳಿ ಹಬ್ಬಕ್ಕೆ ಇಲಾಖೆಯಿಂದವಿಶೇಷ ಮಾನ್ಯತೆ ಕೊಡಿಸುವ ಉಮೇದಿಯಲ್ಲಿದ್ದಾರೆ.ಅದಕ್ಕಾಗಿ ಇಲಾಖೆಯಿಂದ ಪ್ರಸ್ತಾವನೆ ತರಿಸಿಕೊಂಡು,ಖಾಯಂ ಆಗಿ ಅನುದಾನ ನಿಗದಿ ಮಾಡುವ ಮೂಲಕಈ ಸಂಸ್ಕೃತಿ, ಪರಂಪರೆಗೆ ಸರ್ಕಾರದ ಅಚ್ಚು ಒತ್ತುವ ಕೆಲಸ ಮಾಡಲು ಸಿದ್ಧರಾಗಿದ್ದಾರೆ. ಇದೇ ಮೊದಲ ಬಾರಿಗೆ ಇಲಾಖೆಯ ಸಚಿವರೊಬ್ಬರು ವಿಶೇಷ ಕಾಳಜಿ ವಹಿಸಿರುವಾಗಲೇ ಕೋವಿಡ್ ಎಂಬ ಮಾರಿ, ಮೂರು ದಿನಗಳ ಬಣ್ಣದಾಟಕ್ಕೆ ಬ್ರೇಕ್‌ ನೀಡಿರುವುದು ಅತ್ಯಂತ ಬೇಸರವನ್ನು ಇಲ್ಲಿನ ಜನತೆಗೆ ತರಿಸಿದೆ.

Advertisement

ನಾನು ಕಳೆದ 28 ವರ್ಷಗಳಿಂದ ಹೋಳಿ ಆಚರಣೆ ಸಮಿತಿ ಕಾರ್ಯದರ್ಶಿಯಾಗಿದ್ದೇನೆ. 40 ವರ್ಷದಿಂದ ಬಣ್ಣದಾಟ, ಆಚರಣೆ ನೋಡಿಕೊಂಡು ಬಂದಿದ್ದೇನೆ. ಈ ಬಣ್ಣದಾಟಕ್ಕೆ ಸುಮಾರು 180ರಿಂದ 200 ವರ್ಷಗಳ ಇತಿಹಾಸವಿದೆ. ಆರಂಭಗೊಂಡಾಗಿನಿಂದ ಒಮ್ಮೆಯೂ ನಿಂತಿರಲಿಲ್ಲ. ಆದರೆ, ಈ ಬಾರಿ ಕೋವಿಡ್  2ನೇ ಅಲೆಯಿಂದ ಜನರಿಗೆ ತೊಂದರೆಯಾಗಬಾರದು. ನೀರಿನಿಂದ ಒಬ್ಬರಿಗೊಬ್ಬರು ಬಣ್ಣ ಎರಚುತ್ತೇವೆ. ಹೀಗಾಗಿ ಯಾವುದೇ ಸಮಸ್ಯೆ ಉಂಟಾಗದಿರಲಿ ಎಂಬ ಉದ್ದೇಶದಿಂದ ಈ ಬಾರಿ ರೇನ್‌ ಡ್ಯಾನ್ಸ್‌, ಬಣ್ಣದ ಬಂಡಿಗೆಅವಕಾಶವಿಲ್ಲ. ಆದರೆ, ಸಾಂಪ್ರದಾಯಿಕ ಹೋಳಿ ಆಚರಣೆ, ಬಣ್ಣದ ಬಂಡಿಹೋಗುವ ಮಾರ್ಗದಲ್ಲಿ ತುರಾಯಿ ಹಲಗೆ ಸಾಗಲಿದೆ. ಈ ವರ್ಷ, ಬಣ್ಣದಾಟಕ್ಕೆ ಕೋವಿಡ್   ಅಡ್ಡಿಯಾಗಿದ್ದು ನಮಗೂ ಬೇಸರ ತರಿಸಿದೆ. -ಮಹಾಬಲೇಶ್ವರ ಗುಡಗುಂಟಿ, ಕಾರ್ಯದರ್ಶಿ, ಹೋಳಿ ಆಚರಣೆ ಸಮಿತಿ, ಬಾಗಲಕೋಟೆ

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next