ಮಹಾನಗರ: ದ.ಕ. ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ತೀವ್ರಗತಿಯಲ್ಲಿ ಹಬ್ಬುತ್ತಿದ್ದು, ಗುರುವಾರ ಒಂದೇ ದಿನ ಸಾವಿರಕ್ಕೂ ಹೆಚ್ಚಿನ ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. ಕೊರೊನಾ ಸೋಂಕಿಗೆ ಒಳಗಾಗಿರುವ ಕೆಲವು ಮಂದಿ ತಮ್ಮ ಪ್ರಾಥಮಿಕ ಸಂಪರ್ಕಿತರ ಮಾಹಿತಿಯನ್ನು ಗೌಪ್ಯವಾಗಿಡುತ್ತಿದ್ದು, ಇದು ಕೊರೊನಾ ಮತ್ತಷ್ಟು ಹರಡಲು ಕಾರಣವಾಗುತ್ತಿದೆ.
ಸೋಂಕಿತರ ಪೈಕಿ ಕೆಲವರು ಆರೋಗ್ಯ ಇಲಾಖೆಗೆ ತಾವು ಎಲ್ಲೆಲ್ಲಿ ಓಡಾಡಿದ್ದೇವೆ ಹಾಗೂ ಯಾರನ್ನೆಲ್ಲ ಸಂಪರ್ಕಿಸಿದ್ದೇವೆ ಎಂಬ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಈ ಕಾರಣಕ್ಕೆ ಸೋಂಕಿತರು, ಅವರ ಸಂಪರ್ಕಿತರನ್ನು ಪತ್ತೆ ಮಾಡುವುದು ಆರೋಗ್ಯ ಇಲಾಖೆಗೂ ಸವಾಲಾಗಿದೆ.
ಕೊರೊನಾ ಬಂತೆಂದು ಹೆದರುವ ಅಗತ್ಯವಿಲ್ಲ. ರೋಗ ಲಕ್ಷಣ ಬಂದಾಗ ಕಡ್ಡಾಯವಾಗಿ ತಪಾಸಣೆ ನಡೆಸಬೇಕು. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದರೆ ರೋಗ ಗುಣವಾಗುತ್ತದೆ. ಆದರೆ ಕೆಲವು ಮಂದಿ ಕೊರೊನಾ ಗುಣ-ಲಕ್ಷಣ ಇದ್ದರೂ ಮೆಡಿಕಲ್‌ಗಳಿಂದ ಜ್ವರ, ಶೀತ, ತಲೆನೋವಿನ ಮಾತ್ರೆ ಸೇವನೆಗೆ ಮುಂದಾಗುತ್ತಿದ್ದಾರೆ. ಇದರಿಂದ ರೋಗ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಬಳಿಕ ಯಾವುದೇ ರೀತಿಯ ಚಿಕಿತ್ಸೆ ನೀಡಿದರೂ ಅದು ಅಷ್ಟೊಂದು ಪರಿಣಾಮಕಾರಿಯಾಗುವುದಿಲ್ಲ.
ಕೊರೊನಾ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರ ಜವಾಬ್ದಾರಿ ಹೆಚ್ಚು ಇದೆ. ಒಂದು ವೇಳೆ ಕೊರೊನಾ ಸೋಂಕಿತ ವ್ಯಕ್ತಿಯು ತನ್ನ ಸಂಪರ್ಕಕ್ಕೆ ಬಂದಿದ್ದರೆ ಆ ವಿಷಯ ಮುಚ್ಚಿಡದೆ ತಾನು ಸ್ವಯಂ ಆಗಿ ತಪಾಸಣೆಗೆ ಒಳಗಾಗಬೇಕು. ಪಾಸಿಟಿವ್ ಬಂದರೆ, ತನ್ನ ಪ್ರಾಥಮಿಕ ಸಂಪರ್ಕದ ಮಾಹಿತಿಯನ್ನು ಆರೋಗ್ಯ ಇಲಾಖೆ ಜತೆಗೆ ಹಂಚಿಕೊಳ್ಳಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ತಪಾಸಣೆಯನ್ನು ಉಚಿತವಾಗಿ ನಡೆಸಲಾಗುತ್ತಿದೆ.
ಜಿಲ್ಲೆಯಲ್ಲಿ ಒಂದು ತಿಂಗಳಿನಿಂದ ಕೊರೊನಾ ರೋಗ ಪತ್ತೆ ತಪಾಸಣೆ ಏರಿಕೆ ಕಂಡಿದೆ. ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ, ಅಪಾರ್ಟ್‌ಮೆಂಟ್, ಹಾಸ್ಟೆಲ್, ಕಾನ್ವೆಂಟ್‌ಗಳಲ್ಲಿ ಹೆಚ್ಚಾಗಿ ಕೊರೊನಾ ಸೋಂಕು ಕಂಡುಬರುತ್ತಿದ್ದು, ಸೋಂಕಿತರೆಲ್ಲರ ಪ್ರಾಥಮಿಕ ಸಂಪರ್ಕವನ್ನು ತಪಾಸಣೆ ಮಾಡಲಾಗುತ್ತಿದೆ. ಅದೇ ರೀತಿ, ರೋಗ ಲಕ್ಷಣ ಇರುವವರ ತಪಾಸಣೆಯೂ ನಡೆಯುತ್ತಿದೆ. ದಿನವೊಂದಕ್ಕೆ ಸರಾಸರಿ 4ರಿಂದ 5 ಸಾವಿರ ಮಂದಿಯ ಕೊರೊನಾ ತಪಾಸಣೆ ನಡೆಯುತ್ತಿದ್ದು, ಇದರಿಂದಾಗಿ ಕೊರೊನಾ ತಪಾಸಣ ವರದಿ ಬರಲು ವಿಳಂಬವಾಗುತ್ತಿದೆ. ಹಾಗಂತ ವರದಿ ಬರುವವರೆಗೆ ಯಾವುದೇ ಕಾರಣಕ್ಕೆ ಮನೆಯಿಂದ ಹೊರಗೆ ಹೋಗದೆ, ಹೋಂ ಐಸೋಲೇಶನ್‌ನಲ್ಲಿ ಇರಬೇಕು.
ಸಾಮಾನ್ಯ ಜ್ವರವೆಲ್ಲಾ ಕೋವಿಡ್ ಅಲ್ಲ
ಕರಾವಳಿ ಭಾಗದಲ್ಲಿ ಕೆಲವು ದಿನಗಳಿಂದ ಮಳೆ ಬಿರುಸು ಪಡೆದಿದ್ದು, ಅನೇಕ ಕಡೆಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ವಾತಾವರಣ ಬದಲಾವಣೆಯಿಂದಾಗಿ ಸಾಮಾನ್ಯ ಶೀತ, ಜ್ವರ ಸಹಿತ ವೈರಲ್ ಜ್ವರ ಹೆಚ್ಚಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಅಗತ್ಯ. ಶೀತ, ತಲೆನೋವು, ಕೆಮ್ಮು, ಜ್ವರವನ್ನು ನಿರ್ಲಕ್ಷé ಮಾಡದೇ ವೈದ್ಯರ ಸಲಹೆಯಂತೆ ಸೂಕ್ತ ಔಷಧ ಪಡೆದುಕೊಳ್ಳಬೇಕು. ವೈದ್ಯರ ಸಲಹೆಯಿಲ್ಲದೆ, ಮೆಡಿಕಲ್ ಶಾಪ್‌ಗ್ಳಿಂದ ಔಷಧ ಖರೀದಿಸಿ ಸೇವಿಸಬಾರದು.
ತಪಾಸಣೆ ಅಗತ್ಯ
ಕೊರೊನಾ ರೋಗ ತೀವ್ರಗತಿಯಲ್ಲಿ ಹರಡುತ್ತಿದೆ. ಮೊದಲನೇ ಅಲೆಗಿಂತ ಎರಡನೇ ಅಲೆ ಹರಡುವಿಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜಾಗರೂಕರಾಗಿ, ಕೊರೊನಾ ಮಾರ್ಗಸೂಚಿ ಪಾಲನೆ ಮಾಡಬೇಕು. ಕೊರೊನಾ ಬಂತೆಂದು ಹೆದರಬೇಕಿಲ್ಲ. ಗುಣ ಲಕ್ಷಣವುಳ್ಳವರು ಕಡ್ಡಾಯವಾಗಿ ತಪಾಸಣೆ ನಡೆಸಬೇಕು. ಅವರ ಪ್ರಾಥಮಿಕ ಸಂಪರ್ಕ ಪತ್ತೆಗೆ ಆರೋಗ್ಯ ಇಲಾಖೆ ಜತೆ ಕೈಜೋಡಿಸಬೇಕು.
-ಡಾ| ಕಿಶೋರ್ ಕುಮಾರ್, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ