Advertisement
ಕೊರೊನಾ ಪೀಡಿತ ಭಾರತದಲ್ಲಿ ಆದದ್ದು ಇದೇ. ಆರ್ಥಿಕ ಬೆಳವಣಿಗೆಯ ದರ ಶೇ. 2ಕ್ಕೆ ಕುಸಿ ದಾಗ ಅರ್ಥಶಾಸ್ತ್ರಜ್ಞರು ಏನು ಮಾಡುತ್ತಿದ್ದಾರೆ ಎಂಬ ಹಾಹಾಕಾರ ಶುರುವಾಯಿತು. ಕೊರೊನಾಕ್ಕೆ ಲಸಿಕೆ ಕಂಡು ಹಿಡಿಯಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಂತೆ ಅರ್ಥಶಾಸ್ತ್ರಜ್ಞರು ಆರ್ಥಿಕ ಹಿಂಜರಿತವನ್ನು ಹಿಮ್ಮೆಟ್ಟಿಸಲು ಯತ್ನಿಸುತ್ತಿದ್ದರು. ಕೊರೊನಾಕ್ಕೇನೋ ಲಸಿಕೆ ಬಂತು. ಆರ್ಥಿಕತೆಯ ವ್ಯಾಧಿಗೆ ಪರಿಹಾರ ಸಿಗಲಿಲ್ಲ. ಇದಕ್ಕೆ ಬಲವಾದ ಕಾರಣಗಳಿವೆ.
Related Articles
Advertisement
ಆದರೂ ಕೃಷಿ ವಲಯದಲ್ಲಿ ಚೇತರಿಕೆ ಇದೆ. ಕೈಗಾರಿಕ ರಂಗದಲ್ಲಿ ಹಿಂಜರಿಕೆ ಇದೆ ಮತ್ತು ವ್ಯಾಪಾರ ರಂಗದಲ್ಲಿ ಮುಗ್ಗಟ್ಟು ಇದೆ. ಆರ್ಥಿಕತೆಯ ಮೂರು ರಂಗಗಳಲ್ಲಿ ಮೂರು ರೀತಿಯ ಪರಿಸ್ಥಿತಿಗಳು ಇರುವಾಗ ಪರಿಹಾರ ಕಂಡು ಹಿಡಿಯುವುದಾದರೂ ಹೇಗೆ? ಕೊರೊನಾ ಪೀಡಿತನಿಗೆ ಕ್ಯಾನ್ಸರ್‌ನೊಂದಿಗೆ ಗ್ಯಾಂಗ್ರಿನ್ ಕೂಡಾ ಇದ್ದರೆ ಯಾವ ವೈದ್ಯನಿಂದ ಗುಣ ಪಡಿಸಲು ಸಾಧ್ಯ?.
ಹಾಗಾದರೆ ಕೊರೊನಾ ಬಾಧಿತ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಇಲ್ಲವೆ? ಖಂಡಿತಾ ಇದೆ. ಈ ಪರಿಹಾರವನ್ನು ಗಾಂಧೀಜಿ ಚಿಂತನೆಯಲ್ಲಿ ಹುಡುಕಬೇಕು. ಅವರು ಆರ್ಥಿಕ ಸಿದ್ಧಾಂತಗಳನ್ನು ರೂಪಿಸಲಿಲ್ಲ. ಆರ್ಥಿಕ ತಣ್ತೀಗಳನ್ನು ಪ್ರತಿಪಾದಿಸಿದರು. ಸ್ವದೇಶಿ, ಸಾರ್ವಜನಿಕ ದತ್ತಿ, ಗ್ರಾಮೋದ್ಯೋಗಗಳ ನಿರ್ಮಾಣ, ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆ, ಗ್ರಾಮೀಣ ಬಡತನ ನೀಗಲು ಶ್ರೀಮಂತರ ಮಿಗತೆ ಆದಾಯದ ಬಳಕೆ, ವಿಕೇಂದ್ರೀಕರಣ ಇವು ಗಾಂಧೀಜಿ ಸೂಚಿಸಿದ ತಣ್ತೀ. ಇವುಗಳನ್ನು ಅನುಷ್ಠಾನಗೊಳಿಸಬಲ್ಲ ಎದೆಗಾರಿಕೆ ಆಡಳಿತಕ್ಕಿದ್ದರೆ ಆರ್ಥಿ ಕತೆಗೆ ಪುನಶ್ಚೇತನ ತುಂಬಲು ಸಾಧ್ಯವಿದೆ.
ಭಾರತದ ಇಂದಿನ ಆರ್ಥಿಕ ಬೆಳವಣಿಗೆ ಬಡವರ ಪರ ಇಲ್ಲ. ಆದುದರಿಂದ ಬಡವರನ್ನು ಒಳಗೊಳ್ಳುವ ಬೆಳವಣಿಗೆ (Inclusive Growth) ಎಂಬ ಪರಿಕಲ್ಪನೆ ಯನ್ನು ಅರ್ಥಶಾಸ್ತ್ರಜ್ಞರು ಹುಟ್ಟುಹಾಕಿದ್ದಾರೆ. ಬಡದೇಶಗಳ ಬಡವರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರಿ ಸುವುದು ಹೇಗೆ ಎಂಬ ಚಿಂತನೆ ಆರಂಭವಾಗಿದೆ. ಇದಕ್ಕೆ ಪೂರಕವಾದ ಆರ್ಥಿಕ ನೀತಿ ರೂಪುಗೊಳ್ಳಬೇಕಾಗಿದೆ. ದುರ್ದೈವವಶಾತ್ ಆರ್ಥಿಕತೆಯ ಮೂರು ವಲಯಗಳಾದ ಕೃಷಿ, ಕೈಗಾರಿಕೆ, ವ್ಯಾಪಾರ ರಂಗಗಳಲ್ಲಿ ಈಗಿರುವ ನೀತಿಗಳು ಬಡವರ ಪರವಾಗಿಲ್ಲ.
ಯಾರು ಏನೇ ಹೇಳಲಿ 50 ವರ್ಷಗಳಷ್ಟು ಹಿಂದಕ್ಕೆ ಹೋಗಿರುವ ನಮ್ಮ ಆರ್ಥಿಕತೆಯನ್ನು ಮೇಲಕ್ಕೆತ್ತಬೇಕಾದರೆ ಕೃಷಿ ಮತ್ತು ಗ್ರಾಮೀಣ ಕೈಗಾರಿಕೆಗಳ ಉತ್ಕರ್ಷ ಯೋಜನೆಗಳು ಜಾರಿಗೆ ಬರಬೇಕಾಗಿವೆ. ಇದು ಅರ್ಥಶಾಸ್ತ್ರಜ್ಞರ ಸಲಹೆ ಪಡೆದುಕೊಂಡು ಆಡಳಿತವು ಮಾಡಬೇಕಾದ ಕಾರ್ಯ. ದುರಂತವೆಂದರೆ ನಮ್ಮ ಚುನಾಯಿತ ಪ್ರತಿನಿಧಿಗಳಿಗೆ ಅರ್ಥಶಾಸ್ತ್ರ ಅರ್ಥವಾಗುವುದಿಲ್ಲ ಅಥವಾ ಜಾಣ ಕಿವುಡುತನ ಪ್ರದರ್ಶಿಸುತ್ತಿದ್ದಾರೆ. ಅವರು ವರ್ತಮಾನದ ಬಗ್ಗೆ ಆಸಕ್ತರಾಗಿರುತ್ತಾರೆಯೇ ಹೊರತು ದೀರ್ಘಕಾಲಿಕ ಅಭಿವೃದ್ಧಿಯಲ್ಲಿ ಅಲ್ಲ.
ಸರ್ವರೋಗ ಪೀಡಿತನಾದ ವ್ಯಕ್ತಿಯೊಬ್ಬನಿಗೆ ಕೊರೊನಾ ಕೂಡಾ ವಕ್ಕರಿಸಿದರೆ ವೈದ್ಯರು ಏನು ಮಾಡಬೇಕು? ಅರ್ಥಶಾಸ್ತ್ರಜ್ಞರು ಅಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಬಡವರನ್ನು ಒಳಗೊಳಿಸುವ ಬೆಳವಣಿಗೆ ಏಕೈಕ ಪರಿಹಾರ. ಆದರೆ ನಮ್ಮ ಆಡಳಿತ ಇದನ್ನು ಅನುಷ್ಠಾನಗೊಳಿಸುತ್ತದೆಯೇ?
– ಡಾ| ಪ್ರಭಾಕರ ಶಿಶಿಲ