Advertisement

ಕೋವಿಡ್ ಹೆಡೆಮುರಿ ಕಟ್ಟಿದ ಜಿಲ್ಲೆ ಜನ : ಸೋಂಕು, ಸಾವಿನ ಪ್ರಮಾಣ ಗಣನೀಯ ಇಳಿಕೆ

04:31 PM Oct 10, 2020 | sudhir |

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಳೆದ ಎರಡು ತಿಂಗಳಿಗೆ ಹೋಲಿಕೆ ಮಾಡಿದರೆ ಕೊರೊನಾ ಅಬ್ಬರ ತಕ್ಕಮಟ್ಟಿಗೆ ಕಡಿಮೆಯಾಗಿದೆ. ಮರಣದ ಪ್ರಮಾಣ ಸಹ ಇಳಿಕೆಯಾಗಿದೆ. ಆದರೆ ಆತಂಕ ಮಾತ್ರ ಇನ್ನೂ ದೂರವಾಗಿಲ್ಲ.
ತಿಂಗಳ ಹಿಂದೆ ಪ್ರತಿ 100 ಜನರಲ್ಲಿ ಶೇ.35ರಷ್ಟು ಜನರಿಗೆ ಕೊರೊನಾ ಸೋಂಕು ಇರುವದು ಖಚಿತವಾಗಿರುತ್ತಿತ್ತು. ಆಗ ಪ್ರತಿ ದಿನ
ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ³ ಪ್ರಕರಣಗಳು ವರದಿಯಾಗುತ್ತಿದ್ದವು. ಈಗ ಅದರ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಈಗ ಪ್ರತಿ 100 ಜನರಲ್ಲಿ ಶೇ.5 ಜನರಿಗೆ ಸೋಂಕು ಪತ್ತೆಯಾಗುತ್ತಿದೆ.

Advertisement

ನಿರಂತರ ಜಾಗೃತಿ, ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲನೆ, ಕಾಲ ಕಾಲಕ್ಕೆ ತಿಳಿವಳಿಕೆ ನೀಡಿದ್ದು ಜನರಲ್ಲಿ ಸ್ವಲ್ಪಮಟ್ಟಿನ ಪರಿಣಾಮ ಬೀರಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಜನರು ಹೆಚ್ಚು ಜಾಗೃತರಾಗಿದ್ದಾರೆ. ಹೀಗಾಗಿ ಕೊರೊನಾ ಎಲ್ಲ ಕಡೆ ವ್ಯಾಪಕವಾಗಿ ಹರಡಿಲ್ಲ ಎಂಬುದು ಅರೋಗ್ಯ ಇಲಾಖೆ ಅಧಿಕಾರಿಗಳ ಹೇಳಿಕೆ.

ಇದನ್ನೂ ಓದಿ:ಸಮಾಧಿಯಲ್ಲಿ ಕುಳಿತು ಕಬ್ಬಿನ ಬಾಕಿ ಬಿಲ್ ಗೆ ಆಗ್ರಹಿಸಿ ರೈತನ ಪ್ರತಿಭಟನೆ!

ಗುಣಮುಖ ಹೆಚ್ಚಳ: ಕೊರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಜತೆಗೆ ಮರಣ ಪ್ರಮಾಣದಲ್ಲಿ ಸಹ ಸಾಕಷ್ಟು ಸುಧಾರಣೆ ಕಂಡಿದೆ. ಈ ಮೊದಲು ಪ್ರತಿದಿನ ಮರಣ ಸಂಖ್ಯೆ 10ರಿಂದ 20ರಷ್ಟಿತ್ತು. ಈಗ ಮೂರರಿಂದ ಐದರಷ್ಟಿದೆ. ಎಲ್ಲಕ್ಕಿಂತ
ಸಮಾಧಾನಕರ ಸಂಗತಿ ಎಂದರೆ ಗುಣಮುಖರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಪ್ರತಿದಿನ ಸರಾಸರಿ 200 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ.

ಕೊರೊನಾ ಸಂಖ್ಯೆ ಕಡಿಮೆಯಾಗಿದೆ ಎಂದ ಮಾತ್ರಕ್ಕೆ ಎಲ್ಲವನ್ನೂ ಮರೆತು ಓಡಾಡುವುದು ಬಹಳ ಅಪಾಯಕಾರಿ. ಈ ಎರಡು ತಿಂಗಳು ಬಹಳ ಎಚ್ಚರಿಕೆಯ ದಿನಗಳು. ಮೈಮರೆತು ಓಡಾಡಿದರೆ ಮುಂದೆ ಬಹಳ ತೊಂದರೆಯಾಗಲಿದೆ. ಹೀಗಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿ ಡಾ| ಎಸ್‌ ಎ ಮುನ್ಯಾಳ ಹೇಳಿದರು.

Advertisement

ಇದನ್ನೂ ಓದಿ:ನೆರಳಿಗಾಗಿ ಮರದಡಿ ಕುಳಿತವರಿಗೆ ಸಿಡಿಲು ಬಡಿತ: ತಾಯಿ-ಮಗಳು ಸಾವು

ಸೋಂಕಿತರಿಗೆ ಎಲ್ಲ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಇಲ್ಲ ಮೇಲಾಗಿ ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಸಹ ಚಿಕಿತ್ಸೆ ಆರಂಭಿಸಲಾಗಿದೆ. ಆಕ್ಸಿಜನ್‌ ಕೊರತೆ ಇಲ್ಲ. ಈಗ ಪರೀಕ್ಷೆಯ ಸಂಖ್ಯೆಯನ್ನೂ ಸಹ ಹೆಚ್ಚಿಸಲಾಗಿದೆ.
ರೋಗದ ಲಕ್ಷಣ ಕಂಡುಬಂದ ತಕ್ಷಣ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಂಡರೆ ಯಾವುದೇ ಸಮಸ್ಯೆ ಇಲ್ಲದೆ ಗುಣಮುಖರಾಗಬಹುದು. ಕೊರೊನಾ ಬಂದಿದೆ ಎಂದ ಮಾತ್ರಕ್ಕೆ ಹೆದರುವ ಅಗತ್ಯ ಎಲ್ಲ ಎಂಬುದು ವೈದ್ಯರ ಅಭಯ.

ಜಿಲ್ಲೆಯಲ್ಲಿ ಈಗ ಕೊರೊನಾ ಸಕ್ರಿಯ ಸೋಂಕಿತರ ಸಂಖ್ಯೆ 1507ರಷ್ಟಿದೆ. ಜಿಲ್ಲೆಯಲ್ಲಿ ಇದುವರೆಗೆ 1,72,651 ಜನರ ಗಂಟಲು ದ್ರವ ಮಾದರಿ ಸಂಗ್ರಹ ಮಾಡಿ ಪರೀಕ್ಷೆಗೆ ಕಳಿಸಲಾಗಿದ್ದು ಅದರಲ್ಲಿ 1,46,138 ಜನರಿಗೆ ಯಾವುದೇ ರೋಗದ ಲಕ್ಷಣಗಳು ಇಲ್ಲ. ಒಟ್ಟು
20,760 ಜನರಿಗೆ ಸೋಂಕು ದೃಢಪಟ್ಟಿದ್ದು ಅದರಲ್ಲಿ 18943 ಜನರು ಗುಣಮುಖರಾಗಿದ್ದಾರೆ. ಒಟ್ಟು 310 ಜನರು ಮೃತಪಟ್ಟಿದ್ದಾರೆ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಹೇಳಿಕೆ. ಈಗಿನ ಸ್ಥಿತಿಯಲ್ಲಿ ಕಡ್ಡಾಯವಾಗಿ ಮಾಸ್ಕ ಧರಿಸುವುದು, ಸಾರ್ವಜನಿಕ
ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಮೇಲಿಂದ ಮೇಲೆ ಕೈ ತೊಳೆದುಕೊಳ್ಳುವದು ಕೊರೊನಾ ಮಹಾಮಾರಿಗೆ ಇರುವ ಪರಿಣಾಮಕಾರಿ ಮದ್ದು. ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ನಾವು ಸೋಂಕನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಅಪಾಯದಿಂದ ಪಾರಾಗಬಹುದು ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next