Advertisement

ಕೋವಿಡ್ : ಜೀವಹಾನಿ ತಡೆಗೆ ಮುನ್ನೆಚ್ಚರಿಕೆಯೊಂದೇ ಪರಿಹಾರ

10:35 PM May 27, 2021 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೆಲವು ದಿನಗಳಿಂದ ಕೊರೊನಾ ದೈನಂದಿನ ಪ್ರಕರಣ ಕಡಿಮೆಯಾಗುತ್ತಿದ್ದರೂ ಸಾವಿನ ಸಂಖ್ಯೆ ಏರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜೀವಹಾನಿ ತಡೆಯಲು ಜನರು ಮುನ್ನೆಚ್ಚರಿಕೆ ವಹಿಸುವುದೊಂದೇ ಮಾರ್ಗವಾಗಿದೆ.

Advertisement

ಉಭಯ ಜಿಲ್ಲೆಗಳಲ್ಲಿ ಕಳೆದ ಒಂದು ತಿಂಗಳಿನಲ್ಲಿ 259 ಮಂದಿ ಕೋವಿಡ್ ನಿಂದ ಸಾವಿಗೀಡಾಗಿದ್ದಾರೆ. ದ.ಕ.ದಲ್ಲಿ 137, ಉಡುಪಿ ಜಿಲ್ಲೆಯಲ್ಲಿ 122 ಮಂದಿ ಮೃತಪಟ್ಟಿದ್ದಾರೆ. ಕಳೆದ ಒಂದು ವಾರದಿಂದಂತೂ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಮೇ 26ರಂದು ಒಂದೇ ದಿನ ದ.ಕ. ಜಿಲ್ಲೆಯಲ್ಲಿ ಬರೋಬ್ಬರಿ 11 ಮಂದಿ ಸಾವನ್ನಪ್ಪಿದ್ದಾರೆ.

ದ.ಕ.ದಲ್ಲಿ 2021ರ ಮಾರ್ಚ್‌ 1ರಿಂದ ಮೇ 16ರ ವರೆಗೆ ಮೃತಪಟ್ಟ 75 ಮಂದಿಯಲ್ಲಿ 61ರಿಂದ 70 ವರ್ಷದೊಳಗಿನ 29 ಮಂದಿ, 31-40 ವರ್ಷದೊಳಗಿನ ಒಬ್ಬರು, 41ರಿಂದ 50 ವರ್ಷದೊಳಗಿನ 7 ಮಂದಿ, 51ರಿಂದ 60ರೊಳಗಿನ 19 ಮಂದಿ, 71ರಿಂದ 80 ವರ್ಷದೊಳಗಿನ 15 ಮಂದಿ ಮತ್ತು 81ರಿಂದ 90 ವರ್ಷದೊಳಗಿನ ನಾಲ್ವರು ಸೇರಿದಂತೆ 25 ಮಂದಿ ಮಹಿಳೆಯರು, 50 ಮಂದಿ ಪುರುಷರು ಸೇರಿದ್ದಾರೆ.

ಬ್ಲ್ಯಾಕ್‌ ಫಂಗಸ್‌ ಕಾಟ :

ಕೋವಿಡ್ ಏರಿಳಿತದ ನಡುವೆಯೇ ಬ್ಲ್ಯಾಕ್‌ ಫಂಗಸ್‌ ಮತ್ತಷ್ಟು ಆತಂಕ ಹುಟ್ಟಿಸಿದೆ. ದ.ಕ.ದಲ್ಲಿ ಈಗಾಗಲೇ 25 ಮಂದಿಯಲ್ಲಿ ಬ್ಲ್ಯಾಕ್‌ ಫಂಗಸ್‌ ಕಾಣಿಸಿಕೊಂಡಿದೆ. ಇದರಲ್ಲಿ 18 ಮಂದಿ ಹೊರಜಿಲ್ಲೆಯವರು. ಕೆಲವರಿಗೆ ಈಗಾಗಲೇ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿದೆ. ಇಬ್ಬರು ಈಗಾಗಲೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 12 ಮಂದಿಗೆ ಬ್ಲ್ಯಾಕ್‌ ಫಂಗಸ್‌ ದೃಢಪಟ್ಟಿದೆ. ಒಬ್ಬರು ಮೃತಪಟ್ಟಿದ್ದಾರೆ. ಈ ರೋಗಕ್ಕೆ ಆಸ್ಪತ್ರೆಗಳಲ್ಲಿ ಔಷಧದ ಕೊರತೆ ಕಾಣುತ್ತಿದೆ. ಔಷಧಕ್ಕಾಗಿ ಖಾಸಗಿ ಆಸ್ಪತ್ರೆಗಳು ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡಬೇಕು. ಆದರೂ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ.

Advertisement

ಸಾವಿನ ಲೆಕ್ಕ ಕೆಲವು ಮಾತ್ರ! :

ಬೇರೆ ಕಾಯಿಲೆ ಇದ್ದು, ಕೋವಿಡ್ ದೃಢ ಪಟ್ಟು ಮೃತಪಟ್ಟರೆ ಅಂತಹ ಸಾವನ್ನು ಕೊರೊನಾದಿಂದಾದದ್ದು ಎಂದು ಪರಿಗಣಿಸಲಾ ಗುವುದಿಲ್ಲ. ಬದಲಾಗಿ ಆ ಸಮಯದಲ್ಲಿ ಆತನಿಗೆ ಬೇರೆ ಕಾಯಿಲೆ ಇದ್ದರೆ, ಸಾವಿನ ನಿಖರತೆ ಪತ್ತೆ ಮಾಡಿದ ಬಳಿಕವೇ ಕಾರಣವನ್ನು ನಿರ್ಧರಿಸಲಾಗುತ್ತದೆ. ಇದಕ್ಕಾಗಿಯೇ 13 ಮಂದಿ ವೈದ್ಯಾಧಿಕಾರಿಗಳ ತಂಡವನ್ನು ಹಿಂದಿನ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ರಚಿಸಿದ್ದರು.

ನಿರ್ಲಕ್ಷ್ಯ ಸಲ್ಲದು :

ಸಾರ್ವಜನಿಕರು ಕೋವಿಡ್ ನಿರ್ಲಕ್ಷಿಸದೆ ನಿಯಮ ಪಾಲಿಸಬೇಕು. ರೋಗ ಲಕ್ಷಣ ಕಂಡುಬಂದರೆ ಕೂಡಲೇ ಕೊರೊನಾ ಪರೀಕ್ಷೆಗೆ ಒಳಗಾಗಿ. ಆಸ್ಪತ್ರೆ ಬಗ್ಗೆ ನಿರ್ಲಕ್ಷ್ಯ ಮನೋಭಾವ, ಸುಳ್ಳು ಸುದ್ದಿಗಳನ್ನು ನಂಬಬೇಡಿ. ಎರಡನೇ ಅಲೆಯಲ್ಲಿ ವೈರಸ್‌ ತೀವ್ರಗತಿಯಲ್ಲಿ ಹರಡುತ್ತಿದೆ.ಡಾ| ಸುಧೀರ್‌ ಚಂದ್ರ ಸೂಡ, ಉಡುಪಿ ಡಿಎಚ್‌

ನಿಯಮ ಪಾಲಿಸಿ :

ಕೋವಿಡ್‌ ಲಕ್ಷಣ ಇದ್ದರೂ ಕೆಲವರು ಹತ್ತಿರದ ಮೆಡಿಕಲ್‌, ವೈದ್ಯರಿಂದ ಜ್ವರದ ಮಾತ್ರೆಗಳನ್ನು ತೆಗೆದುಕೊಂಡು ತಾತ್ಕಾಲಿಕವಾಗಿ ಸುಧಾರಿಸಿಕೊಳ್ಳುತ್ತಾರೆ. ಉಲ್ಬಣಗೊಂಡ ಬಳಿಕ ಕೊರೊನಾ ಪರೀಕ್ಷೆ ನಡೆಸುತ್ತಿದ್ದಾರೆ. ಮೊದಲ ಅಲೆಯಲ್ಲಿ 70 ವರ್ಷ ಮೇಲ್ಪಟ್ಟವರ ಸಾವಿನ ಸಂಖ್ಯೆ ಹೆಚ್ಚು ಇತ್ತು. ಈಗ 45-65 ವರ್ಷದೊಳಗಿನವರೇ ಹೆಚ್ಚಾಗಿ ಸಾವಿಗೀಡಾಗುತ್ತಿದ್ದಾರೆ. ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ. ಎಲ್ಲರೂ ನಿಯಮ ಪಾಲನೆ ಮಾಡಬೇಕು. ಡಾ| ಅಣ್ಣಯ್ಯ ಕುಲಾಲ್‌, ಡೆತ್‌ ಆಡಿಟ್‌ ಕಮಿಟಿ ಸದಸ್ಯ,  ದ.ಕ. ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next