Advertisement

ಕೆಲವು ರಾಜ್ಯಗಳಲ್ಲಿ ಸೋಂಕು ಸುಧಾರಣೆ

11:55 PM May 03, 2021 | Team Udayavani |

ಹೊಸದಿಲ್ಲಿ: ದೇಶದ ಕೆಲವು ರಾಜ್ಯಗಳಲ್ಲಿ ಸೋಂಕಿನ ಸ್ಥಿತಿ ಸುಧಾರಣೆಯಾಗುತ್ತಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಹೊಸದಿಲ್ಲಿಯಲ್ಲಿ ಮಾತನಾಡಿದ ಆರೋಗ್ಯ ಸಚಿವಾಲಯದಲ್ಲಿನ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌, ದಿಲ್ಲಿ, ಛತ್ತೀಸ್‌ಗಢ, ಮಹಾರಾಷ್ಟ್ರ ಸಹಿತ 13 ರಾಜ್ಯಗಳಲ್ಲಿ ಶೀಘ್ರ ಚೇತರಿಕೆಯ ಲಕ್ಷಣಗಳು ಕಂಡುಬರುತ್ತಿವೆ ಎಂದು ಹೇಳಿದ್ದಾರೆ.

Advertisement

ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್‌, ದಿಲ್ಲಿ ಸಹಿತ  12 ರಾಜ್ಯಗಳಲ್ಲಿ ಸಕ್ರಿಯ ಕೇಸುಗಳೇ 1 ಲಕ್ಷಕ್ಕಿಂತ ಹೆಚ್ಚಾಗಿವೆ. ಇದು ಕಳವಳಕಾರಿ ಅಂಶ ಎಂದಿದ್ದಾರೆ. 22 ರಾಜ್ಯಗಳಲ್ಲಿ ಶೇ.15ಕ್ಕಿಂತ ಹೆಚ್ಚು ಪಾಸಿಟಿವಿಟಿ ಪ್ರಮಾಣ ಇದೆ. 50 ಸಾವಿರದಿಂದ 1ಲಕ್ಷ  ಸಕ್ರಿಯ ಸೋಂಕುಗಳು ಇರುವ ಏಳು ರಾಜ್ಯಗಳು ಇವೆ. ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸಹಿತ 22 ರಾಜ್ಯಗಳಲ್ಲಿ ಕೊರೊನಾ ಕೇಸುಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದಾರೆ ಅಗರ್ವಾಲ್‌.

ದೇಶಾದ್ಯಂತ 45 ವರ್ಷ ಮೇಲ್ಪಟ್ಟ  10.53 ಕೋಟಿ ಮಂದಿಗೆ ಮೊದಲ ಡೋಸ್‌ ಲಸಿಕೆ ನೀಡಲಾಗಿದೆ ಮತ್ತು 1.54 ಕೋಟಿ ಮಂದಿಗೆ 2ನೇ ಡೋಸ್‌ ನೀಡಲಾಗಿದೆ ಎಂದು ಹೇಳಿದ್ದಾರೆ.

ಆಕ್ಸಿಜನ್‌ ಕೊರತೆ ಇಲ್ಲ: ದೇಶದಲ್ಲಿ ಮೆಡಿಕಲ್‌ ಆಕ್ಸಿಜನ್‌ ಕೊರತೆ ಇಲ್ಲ. ಆದರೆ, ಅದನ್ನು ಜತನದಿಂದ ಬಳಕೆ ಮಾಡಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪಿಯೂಷ್‌ ಗೋಯಲ್‌ ಮಾತನಾಡಿ  ಆಕ್ಸಿಜನ್‌  ಉತ್ಪಾದಿಸಲು ಪ್ರಯತ್ನಗಳು ನಡೆದಿವೆ. ನೈಟ್ರೋಜನ್‌ ಉತ್ಪಾದಿಸುವ ಘಟಕಗಳಲ್ಲಿ ಮೆಡಿಕಲ್‌ ಆಕ್ಸಿಜನ್‌ ಉತ್ಪಾದಿಸಲು ಸಾಧ್ಯವೇ ಎಂಬುದರ ಬಗ್ಗೆ ಚರ್ಚೆ ನಡೆದಿದೆ. ದೇಶದಲ್ಲಿ ಸದ್ಯ 9 ಸಾವಿರ ಮೆ. ಟನ್‌ ಆಕ್ಸಿಜನ್‌ ಉತ್ಪಾದಿಸಲಾಗುತ್ತಿದೆ. ಕಳೆದ ಆಗಸ್ಟ್‌ನಲ್ಲಿ ಅದರ ಪ್ರಮಾಣ 5,700 ಮೆಟ್ರಿಕ್‌ ಟನ್‌ ಆಗಿತ್ತು ಎಂದಿದ್ದಾರೆ

ನಿಯಮ ಪಾಲನೆ ಮಾಡದ್ದಕ್ಕೆ ಒದ್ದ ತಹಶೀಲ್ದಾರ್‌: ಕೋವಿಡ್ ನಿಯಮ ಪಾಲನೆ ಮಾಡಿಲ್ಲ ಎಂಬ ವಿಚಾರಕ್ಕೆ ವ್ಯಕ್ತಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಪಾಲಿಸಿಲ್ಲವೆಂದು ಇಂದೋರ್‌ ಜಿಲ್ಲೆಯ ದೇಪ್ಲಾಪುರ ಪಟ್ಟದಲ್ಲಿ ತಹಶೀಲ್ದಾರ್‌ ವ್ಯಕ್ತಿ ಒದೆದಿದ್ದಾರೆ. ಅದನ್ನು ಯಾರೋ ಚಿತ್ರೀಕರಿಸಿ ಜಾಲತಾಣಗಳಿಗೆ ಅಪ್‌ಲೋಡ್‌ ಮಾಡಿದ್ದಾರೆ. ಶಿಕ್ಷೆ ಪಾಲಿಸದ ವ್ಯಕ್ತಿಗೆ ಹಿಂದಿನಿಂದ ತಹಶೀಲ್ದಾರ್‌ ಒದೆಯುವುದು ದೃಶ್ಯಾವಳಿಗಳಲ್ಲಿದೆ. ವೈರಲ್‌ ಆಗಿರುವ ವೀಡಿಯೋ ಗಮನಿಸಿ ಮಧ್ಯಪ್ರದೇಶ ಮಾನವ ಹಕ್ಕುಗಳ ಆಯೋಗ ಜಿಲ್ಲಾಡಳಿತಕ್ಕೆ ತತ್‌ಕ್ಷಣವೇ ವರದಿ ಸಲ್ಲಿಸುವಂತೆ ಸೂಚಿಸಿದೆ.

Advertisement

3.68 ಲಕ್ಷ ಕೇಸು ದಾಖಲು: ರವಿವಾರದಿಂದ ಸೋಮವಾರದ ಅವಧಿಯಲ್ಲಿ ದೇಶದಲ್ಲಿ 3,68,147 ಹೊಸ ಪ್ರಕರಣ ಮತ್ತು 3,417 ಮಂದಿ ಕೊರೊನಾದಿಂದಾಗಿ ಅಸುನೀಗಿದ್ದಾರೆ. 34,13,642 ಸಕ್ರಿಯ ಕೇಸುಗಳಿವೆ. ಚೇತರಿಕೆ ಪ್ರಮಾಣ ಶೇ.81.77 ಆಗಿದೆ ಎಂದು ಕೇಂದ್ರ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ  ತಿಳಿಸಿದೆ.

ದೇಶಾದ್ಯಂತ ಲಾಕ್‌ಡೌನ್‌ ಇಲ್ಲ: ಕೇಂದ್ರ :

ಕೋವಿಡ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್‌ ಹೇರುವುದಿಲ್ಲ ಎಂದು ಕೇಂದ್ರ ಸರಕಾರ ಮತ್ತೂಮ್ಮೆ ಸ್ಪಷ್ಟಪಡಿಸಿದೆ. ಅಲ್ಲದೆ, ಸಾಂಕ್ರಾಮಿಕ ತಡೆಗೆ ವಿವಿಧ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಗಳು ಜಾರಿಗೊಳಿಸಿರುವ ಕಠಿನ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಬೇಕು ಎಂದು ಸಲಹೆ ನೀಡಿದೆ. ಮೇ 3ರಿಂದ 20ರ ವರೆಗೆ ದೇಶಾದ್ಯಂತ ಲಾಕ್‌ಡೌನ್‌ ಘೋಷಣೆಯಾಗಲಿದೆ ಎಂದು ಜಾಲತಾಣ ಗಳಲ್ಲಿ ವದಂತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದಿಂದ ಈ ಸ್ಪಷ್ಟನೆ ಹೊರಬಿದ್ದಿದೆ.

ಮತ್ತೂಂದೆಡೆ, ಸಾಂಕ್ರಾಮಿಕ ಪರಿಸ್ಥಿತಿ ತಡೆಗಟ್ಟಲು ಪೂರ್ಣ ಲಾಕ್‌ಡೌನ್‌ ಅಗತ್ಯವಿಲ್ಲ. ಅದರ ಬದಲು, ದೇಶದಲ್ಲಿರುವ ಒಟ್ಟಾರೆ ಕಂಟೈನ್ಮೆಂಟ್‌ ವಲಯಗಳ ಪಟ್ಟಿಯನ್ನು ತಯಾರಿಸಿ, ಅಲ್ಲಿ ವಿಧಿಸಲಾಗಿರುವ ನಿರ್ಬಂಧಗಳು ಸಮರ್ಪಕವಾಗಿ ಅನುಷ್ಠಾನಗೊಳು ತ್ತಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು “ದ ಲ್ಯಾನ್ಸೆಟ್‌ ಇಂಡಿಯಾ ಟಾಸ್ಕ್ ಫೋರ್ಸ್‌’, ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ. ಪ್ರತಿದಿನವೂ 10 ಲಕ್ಷ ಜನರನ್ನು ತಪಾಸಣೆಗೊಳಿಸುವಂಥ ವ್ಯವಸ್ಥೆ, ಇವರಲ್ಲಿ ಹೊಸ ಪ್ರಕರಣಗಳು ಎಷ್ಟು ಪತ್ತೆಯಾಗುತ್ತಿವೆ ಎಂಬ ಲೆಕ್ಕಾಚಾರ, ದಿನಂಪ್ರತಿಯಲ್ಲಿ ಪತ್ತೆಯಾಗುವ ಹೊಸ ಪ್ರಕರಣ, ಸೋಂಕು ಹೆಚ್ಚಳದ ದಿನಂಪ್ರತಿ ಅಂಕಿ-ಅಂಶಗಳನ್ನು ಮನದಲ್ಲಿಟ್ಟುಕೊಂಡು ನಿರ್ಬಂಧಗಳನ್ನು ಬಿಗಿಗೊಳಿಸಬೇಕು ಎಂದು ಶಿಫಾರಸು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next