Advertisement

ಮೃತ ವ್ಯಕ್ತಿ ಸಹಿತ ನಾಲ್ವರಿಗೆ ಸೋಂಕು ದೃಢ; ಸಾವಿನ ಸಂಖ್ಯೆ 6ಕ್ಕೆ; ಪ್ರಕರಣ 70ಕ್ಕೇರಿಕೆ

09:05 AM May 26, 2020 | mahesh |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಸೋಮವಾರ ಮತ್ತೂಂದು ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಮೃತ ವ್ಯಕ್ತಿಯ ಸಹಿತ ನಾಲ್ವರಲ್ಲಿ ಕೋವಿಡ್ ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ ಕೂಡ ಇದೀಗ 70 ಆಗಿದೆ. ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ 43 ವರ್ಷದ ವ್ಯಕ್ತಿ ಮೃತಪಟ್ಟವರು. ಯಕೃತ್‌ ಮತ್ತು ಮೂತ್ರಕೋಶದ ತೊಂದರೆ ಯಿಂದ ಬಳಲುತ್ತಿದ್ದ ಈ ವ್ಯಕ್ತಿ ಮೇ 23ರಂದು ರಾತ್ರಿ 8.47ಕ್ಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅದೇ ದಿನ ರಾತ್ರಿ 9.25ಕ್ಕೆ ಮೃತಪಟ್ಟಿದ್ದರು. ಅವರ ಗಂಟಲು ದ್ರವ ಮಾದರಿಯನ್ನು ತೆಗೆದು ಪರೀಕ್ಷೆಗೆ ಕಳುಹಿಸಿದ್ದು, ಸೋಮವಾರ ಇದರ ವರದಿ ಬಂದಿದ್ದು, ಕೋವಿಡ್ ಇರುವುದು ದೃಢ ಪಟ್ಟಿದೆ. ಮೃತ ವ್ಯಕ್ತಿಯ ಶವ ಸಂಸ್ಕಾರ ವನ್ನು ವೈದ್ಯಕೀಯ ಶಿಷ್ಟಾಚಾರದಂತೆ ನೆರವೇರಿಸಲಾಗಿದೆ.

Advertisement

ಮುಂಬಯಿಯಿಂದ ಸೋಂಕು
ಮೇ 18ರಂದು ಥಾಣೆಯಿಂದ ಆಗಮಿಸಿದ 55 ವರ್ಷದ ವ್ಯಕ್ತಿ, ಮಹಾರಾಷ್ಟ್ರದ ಪುಣೆಯಿಂದ ಆಗಮಿಸಿದ 30 ವರ್ಷದ ವ್ಯಕ್ತಿ, ಕುರ್ಲಾದಿಂದ ಆಗಮಿಸಿದ 25 ವರ್ಷದ ವ್ಯಕ್ತಿ ಕೋವಿಡ್ ದೃಢ ಪಟ್ಟವರು. ಮುಂಬಯಿಯಿಂದ ಆಗಮಿಸಿದ ಮೂವರನ್ನೂ ಕ್ವಾರಂಟೈನ್‌ ಕೇಂದ್ರದಲ್ಲಿ ಇರಿಸಿ ಅವರ ಗಂಟಲು ದ್ರವ ಮಾದರಿ ಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಸೋಮವಾರ ಬಂದಿರುವ ವರದಿಯಲ್ಲಿ ಅವರಿಗೆ ಕೋವಿಡ್ ಇರುವುದು ದೃಢಪಟ್ಟಿದೆ.

ಕ್ವಾರಂಟೈನ್‌ನಲ್ಲಿದ್ದ ಇಬ್ಬರಿಗೆ ಪಾಸಿಟಿವ್‌
ಸೋಮವಾರ ಇಬ್ಬರಿಗೆ ಕೋವಿಡ್ ಪಾಸಿಟಿವ್‌ ವರದಿ ಬಂದಿದ್ದು, ಆರಂಬೋಡಿಯ ಸೋಂಕಿತ ಮಹಿಳೆ ಸಂಪರ್ಕದಲ್ಲಿದ್ದ 55 ವರ್ಷದ ಸಂಬಂಧಿ ಹಾಗೂ ಪುಣೆಯಿಂದ ಹಿಂದಿರುಗಿ ಬಂದು ಹೊಕ್ಕಾಡಿಗೋಳಿಯಲ್ಲಿ ಸರಕಾರಿ ಕ್ವಾರಂಟೈನ್‌ನಲ್ಲಿದ್ದ 34 ವರ್ಷದ ವ್ಯಕ್ತಿಗೂ ಸೋಂಕು ಖಚಿತವಾಗಿದೆ.

531 ವರದಿ ಬಾಕಿ
ಸೋಮವಾರ ಸ್ವೀಕರಿಸಲಾದ 246 ವರದಿಗಳ ಪೈಕಿ 4 ಪಾಸಿಟಿವ್‌ ಮತ್ತು 242 ನೆಗೆಟಿವ್‌ ಆಗಿದೆ. 138 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗೆ ಹೊಸದಾಗಿ ಕಳುಹಿಸಲಾಗಿದ್ದು, 531 ಮಂದಿಯ ವರದಿ ಬರಲು ಬಾಕಿ ಇದೆ. 11 ಮಂದಿ ತೀವ್ರ ಉಸಿರಾಟದ ಸಮಸ್ಯೆಯಿಂದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಸುರತ್ಕಲ್‌ನ ಎನ್‌ಐಟಿಕೆಯಲ್ಲಿ 47 ಮತ್ತು ಕದ್ರಿಯ ಇಎಸ್ಐ ಆಸ್ಪತ್ರೆಯಲ್ಲಿ 24 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ.

ವೇಣೂರು: ಅಂಗಡಿ, ಮನೆ ಸೀಲ್‌ಡೌನ್‌
ವೇಣೂರು/ಬೆಳ್ತಂಗಡಿ: ಕೋವಿಡ್ ದೃಢಪಟ್ಟ ವೇಣೂರಿನ ಮೃತ ವ್ಯಕ್ತಿಯ ಮನೆ, ಅವರು ಕೆಲಸಕ್ಕಿದ್ದ ಅಂಗಡಿ ಹಾಗೂ ಅವರ ಸಂಬಂಧಿಕರ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಟೆಂಪೋ ಚಾಲಕರಾಗಿದ್ದ ಅವರು ಮಂಗಳೂರಿನ ಬಂದರು ಹಾಗೂ ವಿವಿಧ ಕಡೆಗಳಿಂದ ಸಾಮಗ್ರಿಗಳನ್ನು ತರುತ್ತಿದ್ದರು. ಇತರ ಸಮಯದಲ್ಲಿ ತನ್ನ ಸ್ವಂತ ರಿಕ್ಷಾದಲ್ಲಿ ದುಡಿಯುತ್ತಿದ್ದರು. ಹೆಚ್ಚಿನ ಟ್ರಾವೆಲ್‌ ಹಿಸ್ಟರಿಯೇ ಇಲ್ಲದ ಇವರಿಗೆ ಸೋಂಕು ಹೇಗೆ ಹರಡಿದೆ ಎಂಬುದನ್ನು ಪತ್ತೆ ಹಚ್ಚಲು ಜಿಲ್ಲಾಡಳಿತಕ್ಕೆ ಸವಾಲಿನ ಕೆಲಸವಾಗಿದ್ದು, ಪ್ರಾಥಮಿಕ ಸಂಪರ್ಕದಲ್ಲಿದ್ದ ನೂರಾರು ಮಂದಿ ಈಗ ಆತಂಕಕ್ಕೊಳಗಾಗಿದ್ದಾರೆ.

Advertisement

ಮೃತರ ಪತ್ನಿ ಹಾಗೂ ಮಗಳನ್ನು, ಮೃತರು ದುಡಿಯುತ್ತಿದ್ದ ಅಂಗಡಿ ಮಾಲಕರ ಅಂಗಡಿ-ಮನೆಯನ್ನು ಹಾಗೂ ಆಸ್ಪತ್ರೆಗೆ ಸಾಗಿಸಿದ ವಾಹನ ಚಾಲಕನನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಬೆಳ್ತಂಗಡಿ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ಹಾಗೂ ಆರೋಗ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಮೃತರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈತ ಉಜಿರೆ ಖಾಸಗಿ ಆಸ್ಪತ್ರೆಯೊಂದಕ್ಕೂ ಭೇಟಿ ನೀಡಿರುವುದರಿಂದ ಅಲ್ಲಿನ ವೈದ್ಯರನ್ನು ಕ್ವಾರಂಟೈನ್‌ಗೊಳಪಡಿಸಲಾಗಿದೆ. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿರುವವರು ವೇಣೂರು ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಬೇಕೆಂದು ಕೇಳಿಕೊಳ್ಳಲಾಗಿದೆ.

ಕ್ವಾರಂಟೈನ್‌ ಕೇಂದ್ರವೇ ಆತಂಕಕಾರಿ
ಹೊರ ರಾಜ್ಯಗಳಿಂದ ಬಂದವರನ್ನು ಸರಕಾರಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಆದರೆ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದರಿಂದ ಕ್ವಾರಂಟೈನ್‌ ಕೇಂದ್ರದಿಂದಲೇ ಸೋಂಕು ಹರಡುವ ಆತಂಕ ಎದುರಾಗಿದೆ. ತಾಲೂಕಿನ ಕೆಲವೆಡೆ ಸರಕಾರಿ ಕ್ವಾರಂಟೈನ್‌ ಕೇಂದ್ರಕ್ಕೆ ಮೇ 18ಕ್ಕೆ ಬಂದಿದ್ದರೂ ಈವರೆಗೆ ಗಂಟಲು ದ್ರವ ಮಾದರಿ ಸಂಗ್ರಹಿಸಿಲ್ಲ. ಇಲ್ಲಿರುವವರಿಗೆ ಆಹಾರ ಪೂರೈಕೆ ಆಗದಿರುವುದರಿಂದ ಮನೆಮಂದಿಯೇ ಆಹಾರ, ಬಟ್ಟೆ ಒದಗಿಸುತ್ತಿರುವುದು ಆಘಾತಕಾರಿ ವಿಷಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next