ಕೊರೊನಾದಿಂದಾಗಿ ಸಾವನ್ನಪ್ಪಿದವರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಬುಧವಾರವಷ್ಟೇ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕೊರೊನಾದಿಂದ ಮೃತಪಟ್ಟ ಕುಟುಂಬದವರಿಗೆ ತಲಾ 50 ಸಾವಿರ ರೂ. ಪರಿಹಾರ ನೀಡುವುದಾಗಿ ಸುಪ್ರೀಂ ಕೋರ್ಟ್‌ಗೆ ಅಫಿದ ವಿತ್ ಮೂಲಕ ತಿಳಿಸಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದ ಕಾನೂನು ಸಮರಕ್ಕೊಂದು ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.
ಈ ಪರಿಹಾರದ ಹಣವನ್ನು ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದ ಮೂಲಕ ನೀಡಲಾಗುತ್ತದೆ ಎಂದು ಕೇಂದ್ರ ಸರಕಾರ ಹೇಳಿದೆ. ಹೀಗಾಗಿ, ರಾಜ್ಯ ಸರಕಾರಗಳೇ ಪರಿಹಾರದ ಮೊತ್ತವನ್ನು ಹೊಂದಿಸಿ ಕೊಡಬೇಕಾಗಿದೆ. ಇದು ರಾಜ್ಯ ಸರಕಾರಗಳಿಗೆ ಹೊರೆಯಾದರೂ ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರದ ರೂಪದಲ್ಲಿ ಸಣ್ಣ ಮೊತ್ತವನ್ನಾದರೂ ನೀಡುವ ಮೂಲಕ ಅವರಿಗೆ ಹೆಗಲು ಕೊಟ್ಟಂತಾಗುತ್ತದೆ.
ಆದರೂ ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದ ನಿಧಿಯಲ್ಲಿ ಕೇಂದ್ರ ಸರಕಾರದ ಪಾಲೇ ಶೇ.75ರಷ್ಟಿರುತ್ತದೆ. ಇದು ರಾಜ್ಯ ಸರಕಾರಗಳ ಲೆಕ್ಕಾಚಾರವಾದರೆ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.90ರಷ್ಟು ಹಣವನ್ನು ಕೇಂದ್ರ ಭರಿಸುತ್ತದೆ. ಅಷ್ಟೇ ಅಲ್ಲ, ಇದು ಈಶಾನ್ಯ ರಾಜ್ಯಗಳು, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರಕ್ಕೂ ಅನ್ವಯವಾಗುತ್ತದೆ. ಹೀಗಾಗಿ ರಾಜ್ಯಗಳಿಗೆ ಅಷ್ಟೇನೂ ಹೊರೆಯಾಗುವುದಿಲ್ಲ ಎಂಬ ವಿಶ್ಲೇಷಣೆಗಳಿವೆ.
ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡಬೇಕು ಎಂದು ವಕೀಲರೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರವಾಗಿ ಕೇಂದ್ರ ಸರಕಾರ ಈ ಪ್ರಮಾಣದ ಪರಿಹಾರ ನೀಡಲು ಸಾಧ್ಯವೇ ಇಲ್ಲ ಎಂದಿತ್ತು. ಈಗಾಗಲೇ ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟದಲ್ಲಿದ್ದೇವೆ ಎಂದೂ ಹೇಳಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸುಪ್ರೀಂ ಕೋರ್ಟ್ ಶೀಘ್ರದಲ್ಲಿಯೇ ಎಷ್ಟು ಪರಿಹಾರ ಕೊಡಬಹುದು ಎಂಬ ನಿರ್ಧಾರ ತೆಗೆದುಕೊಳ್ಳಿ ಎಂದಿತ್ತು.
ಹೀಗಾಗಿ ಕೇಂದ್ರ ಸರಕಾರ ಬುಧವಾರವಷ್ಟೇ ಪರಿಹಾರ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ. ಸದ್ಯ ದೇಶದಲ್ಲಿ 4.45 ಲಕ್ಷ ಮಂದಿ ಕೊರೊನಾದಿಂದ ಮೃತರಾಗಿದ್ದಾರೆ. ಕರ್ನಾಟಕದಲ್ಲೇ 37 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ರಾಜ್ಯದಲ್ಲಿನ ಕೊರೊನಾದಿಂದಾಗಿ ಮೃತಪಟ್ಟ ಬಿಪಿಎಲ್ ಕಾರ್ಡ್‌ದಾರರಿಗೆ ಒಂದು ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಇದರ ಜತೆಗೇ ಉಳಿದವರಿಗೂ ಇನ್ನು ಮುಂದೆ ಪರಿಹಾರ ಸಿಗಲಿದೆ.
ಸುಪ್ರೀಂನ ಆದೇಶದಂತೆ ಪರಿಹಾರವೇನೋ ಘೋಷಣೆಯಾಗಿದೆ. ಆದರೆ ಇನ್ನು ದಾಖಲಾತಿಗಳ ಸಮಸ್ಯೆ ಕಾಡುವ ಆತಂಕವೂ ಹೆಚ್ಚಾಗಿದೆ. ಕೊರೊನಾ ಎರಡನೇ ಅಲೆಯಲ್ಲಿ ಅದೆಷ್ಟೋ ಮಂದಿ ತಮ್ಮವರು ಇಲ್ಲವಾದ ಅನಂತರ ಅದೇ ನೋವಿನಲ್ಲಿ ಮರಣ ದಾಖಲೆ, ಆಸ್ಪತ್ರೆಯಲ್ಲಿನ ಚಿಕಿತ್ಸಾ ದಾಖಲೆಗಳನ್ನು ಪಡೆಯದಿರಬಹುದು. ಇಂಥವರಿಗೆ ಸ್ಥಳಿಯಾಡಳಿತಗಳು ಕೊಂಚವಾದರೂ ಸಮಯ ಕೊಡಬೇಕು. ಪದೇ ಪದೆ ದಾಖಲೆಗಳಿಗಾಗಿ ಅಲೆದಾಡಿಸದೇ ಅವರಿಗೆ ಪರಿಹಾರ ನೀಡುವ ಕೆಲಸವಾಗಬೇಕು. ದಾಖಲೆಗಳೇ ಸಿಗುತ್ತಿಲ್ಲ, ಪರಿಹಾರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಗೊಂದಲಕ್ಕೆ ಜನ ಬೀಳದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರಗಳ ಮೇಲಿದೆ.