ಉಡುಪಿ: ಉಡುಪಿ ಜಿಲ್ಲೆಯ ಉಡುಪಿ ನಗರಸಭೆ, ಕಾರ್ಕಳ ಪುರಸಭೆ ಪ್ರದೇಶ ಮತ್ತು ದುರ್ಗಾ, ಕೋಟೇಶ್ವರ, ಇರ್ವತ್ತೂರು, ಬೆಳ್ಮಣ್ಣು, ಕುಕ್ಕುಂದೂರು, ಶಿರ್ವ ಗ್ರಾ.ಪಂ.ಗಳಲ್ಲಿ ಪಾಸಿಟಿವಿಟಿ ದರ ಕಳೆದ ವಾರಕ್ಕಿಂತ ಹೆಚ್ಚಳ ಕಂಡುಬಂದಿದೆ. ಜಿಲ್ಲೆಯ ಪಾಸಿಟಿವಿಟಿ ದರ ಕಡಿಮೆ ಇದ್ದರೂ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಹೆಚ್ಚು ಇರುವುದರಿಂದ ತಹಬಂದಿಗೆ ತಂದು ವಾರಾಂತ್ಯ ಕರ್ಫ್ಯೂವನ್ನು ಸಡಿಲಿಸುವ ಪ್ರಯತ್ನವೂ ನಡೆಯುತ್ತಿದೆ.
ಇಡೀ ರಾಜ್ಯದಲ್ಲಿ ಇಂತಹ ಪ್ರದೇಶಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಶೇ. 80 ಪ್ರಥಮ ಡೋಸ್ ಲಸಿಕೆಯನ್ನು ನೀಡಲಾಗಿದ್ದು 2ನೇ ಡೋಸ್‌ಗೆ ಆದ್ಯತೆ ನೀಡಲಾಗುತ್ತಿದೆ. ದಿನವೂ ಸುಮಾರು 25,000 ಡೋಸ್ ವಿತರಿಸಿದರೆ ಶೀಘ್ರದಲ್ಲಿ ಎಲ್ಲರಿಗೂ ಲಸಿಕೆ ನೀಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಲಸಿಕೆ ಪೂರೈಕೆಗೆ ಪ್ರಯತ್ನಿಸುತ್ತಿದ್ದೇವೆ ಎಂದು ಸಚಿವ ವಿ. ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.
ಗಂಟಲ ದ್ರವ ಪರೀಕ್ಷೆ ಪ್ರಮಾಣವನ್ನು 11,000ಕ್ಕೆ ಏರಿಸುವ ಗುರಿ ಇದೆ. ಮೂರು ದಿನಗಳಿಂದ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಜನರು ನಿಯಮಾವಳಿಗಳನ್ನು ಎಚ್ಚರದಿಂದ ಪಾಲಿಸಿದರೆ ವಾರಾಂತ್ಯ ಕರ್ಫ್ಯೂವಿನಿಂದ ಜಿಲ್ಲೆ ಮುಕ್ತವಾಗಲಿದೆ.
– ಸುನಿಲ್ ಕುಮಾರ್, ಸಚಿವ
ಈಗ ಕಂಟೈನ್ಮೆಂಟ್ ಪ್ರದೇಶವಾಗಿ ಸೋಂಕು ಹೆಚ್ಚಿಗೆ ಇರುವ ಗ್ರಾ.ಪಂ.ಗಳನ್ನು ಪರಿಗಣಿಸಲಾಗಿದೆ. ಇನ್ನು ಎರಡು ಮೂರು ದಿನಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗದಿದ್ದರೆ ಸೀಲ್‌ಡೌನ್ ಮಾಡಲು ನಿರ್ಧರಿಸಲಾಗುವುದು.
– ಡಾ| ನವೀನ್ ಭಟ್,ಉಡುಪಿ ಜಿ.ಪಂ. ಸಿಇಒ
ಕೆಲವು ಕಡೆಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಸರಾಸರಿ ಪ್ರಮಾಣ ಶೇ. 1.7ರ ಆಸುಪಾಸಿನಲ್ಲಿದೆ. ಎಲ್ಲೆಲ್ಲಿ ಸೋಂಕು ಹೆಚ್ಚು ಕಂಡುಬಂದಿದೆಯೋ ಅಲ್ಲಲ್ಲಿ ಲಸಿಕೆ ನೀಡಿಕೆ ಮತ್ತು ಪರೀಕ್ಷೆಯನ್ನು ಹೆಚ್ಚಿಸುತ್ತೇವೆ
– ಡಾ| ನಾಗಭೂಷಣ ಉಡುಪ, ಉಡುಪಿ ಡಿಎಚ್‌ಒ