Advertisement

ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿದೆ ಕೋವಿಡ್ :  ಹೊರ ರಾಜ್ಯದ ವಿದ್ಯಾರ್ಥಿಗಳಲ್ಲಿ  ಸೋಂಕು

11:51 PM Aug 10, 2021 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ದಿನದ ಪ್ರಕರಣ ಏರುಗತಿಯಲ್ಲಿ ಸಾಗುತ್ತಿದ್ದು, ತಿಂಗಳಲ್ಲಿ ಎರಡನೇ ಬಾರಿ ರಾಜ್ಯದಲ್ಲೇ ಅತ್ಯಧಿಕ ಪ್ರಕರಣ ದಾಖಲಾಗಿದೆ. ಅದರಲ್ಲೂ ಹೊರ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳಲ್ಲಿಯೂ ಇದೀಗ ಕೊರೊನಾ ದೃಢಪಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ಆರೋಗ್ಯ ಇಲಾಖೆ ತಿಳಿಸಿದಂತೆ ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕೇರಳ ಸೇರಿದಂತೆ ಹೊರ ರಾಜ್ಯದ ಪ್ಯಾರಾಮೆಡಿಕಲ್‌ ವಿದ್ಯಾರ್ಥಿಗಳಲ್ಲಿ ಕೊರೊನಾ ಪ್ರಕರಣ ಕಾಣಿಸಿಕೊಳ್ಳುತ್ತಿದ್ದು, ಅವರ ಪ್ರಾಥಮಿಕ ಸಂಪರ್ಕ ಮತ್ತು ದ್ವಿತೀಯ ಸಂಪರ್ಕವನ್ನು ತಪಾಸಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಎಂಟು ಮೆಡಿಕಲ್‌ ಕಾಲೇಜು ಇದ್ದು, ಹೊರ ಜಿಲ್ಲೆ, ರಾಜ್ಯಗಳಿಂದ ಹೆಚ್ಚಿನ ಮಂದಿ ವಿದ್ಯಾರ್ಜನೆಗೆ ಜಿಲ್ಲೆಗೆ ಬರುತ್ತಾರೆ. ಹೀಗೆ ಬರುವಾಗ 72 ಗಂಟೆಗಳ ಆರ್‌ಟಿಪಿಸಿಆರ್‌ ನಗೆಟಿವ್‌ ವರದಿ ತರುತ್ತಿದ್ದರೂ ಇಲ್ಲಿ ಕ್ವಾರಂಟೈನ್‌ ಆದ ಬಳಿಕ ಅವರಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದೆ.

ಗ್ರಾಮೀಣ ಭಾಗದಲ್ಲಿ ಹೆಚ್ಚು :

ಜಿಲ್ಲೆಯಲ್ಲಿ ಕೊರೊನಾ ದೈನಂದಿನ ಏರಿಕೆ ಕಾಣುತ್ತಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಕರಣ ದಾಖಲಾಗುತ್ತಿದೆ. ಸದ್ಯ ಸಕ್ರಿಯ ಪ್ರಕರಣದಲ್ಲಿ ಮಂಗಳೂರಿನಲ್ಲಿ 1,424 ಪ್ರಕರಣ, ಬಂಟ್ವಾಳ 461, ಪುತ್ತೂರಿನಲ್ಲಿ 366, ಬೆಳ್ತಂಗಡಿಯಲ್ಲಿ 469, ಸಳ್ಯದಲ್ಲಿ 458 ಮತ್ತು ಹೊರ ಜಿಲ್ಲೆಯ 143 ಮಂದಿ ಸೋಂಕಿತರು ಇದ್ದಾರೆ. ಒಟ್ಟಾರೆ ಸಕ್ರಿಯ ಪ್ರಕರಣದ ಶೇ.80ರಷ್ಟು ಮಂದಿ (2,657 ಮಂದಿ) ಹೋಂ ಐಸೋಲೇಶನ್‌ನಲ್ಲೇ ಇದ್ದು, ಶೇ.16.38 (544 ಮಂದಿ) ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶೇ. 3.61 (120 ಮಂದಿ) ಮಂದಿ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡರೂ, ದೈನಂದಿನ ಪ್ರಕರಣ ಮಾತ್ರ ಕಡಿಮೆಯಾಗುತ್ತಿಲ್ಲ. ಕೇರಳದಲ್ಲಿ ಕೊರೊನಾ ಪ್ರಕರಣ ಏರಿಕೆಯಾಗುತ್ತಿರುವುದು ದ.ಕ. ಜಿಲ್ಲೆಗೆ ಸವಾಲಾಗಿ ಪರಿಣಮಿಸಿದೆ. ನೆರೆಯ ಕಾಸರಗೋಡು ಮತ್ತು ಮಹಾರಾಷ್ಟ್ರದಿಂದ ದ.ಕ. ಪ್ರವೇಶಕ್ಕೆ ಇದೀಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು ಆರ್‌ಟಿಪಿಸಿಆರ್‌ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.

Advertisement

ವಾರದಲ್ಲಿ ಅರ್ಧ ಲಕ್ಷ ಟೆಸ್ಟ್‌ ! :

ಜಿಲ್ಲೆಯಲ್ಲಿ ಕೊರೊನಾ ತಪಾಸಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕಳೆದ ಕೆಲ ದಿನಗಳಿಂದ ಸರಾಸರಿ 9,000ದಷ್ಟು ಮಂದಿಯನ್ನು ಟೆಸ್ಟ್‌ ಮಾಡಲಾಗುತ್ತಿದೆ. ವಾರದಲ್ಲಿ 59,102 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಒಟ್ಟು 2458 ಮಂದಿಗೆ ಕೊರೊನಾ ದೃಢಪಟ್ಟಿದೆ.

ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್‌ ಕುಮಾರ್‌ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ  ಜಿಲ್ಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ದೃಢಪಟ್ಟವರ ಪ್ರಾಥಮಿಕ ಸಂಪರ್ಕ ಟೆಸ್ಟ್‌ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ಕೊರೊನಾ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದರು.

ಕೊರೊನಾ ಅಂಕಿ ಅಂಶ :

ದಿನಾಂಕ            ಪ್ರಕರಣ             ಸಾವು    ಪಾಸಿಟಿವಿಟಿ ದರ (ಶೇ.)

ಆ. 10    378         8              4.28

ಆ. 9      273         3              3.52

ಆ. 8      438         6              4.57

ಆ. 7      342         4              3.79

ಆ. 6      411         4              4.42

ಆ. 5      337         3              3.71

ಆ. 4      350         6              4.07

ಅಗತ್ಯ ಕ್ರಮ :

ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.  ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ತಪಾಸಣ ಗುರಿಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು. ಎಲ್ಲಿಯೂ ವೈದ್ಯರು, ಲ್ಯಾಬ್‌ ಟೆಕ್ನೀಶಿಯನ್‌ ಹಾಗೂ ಎಎನ್‌ಎಂಗಳು ಇಲ್ಲ ಎನ್ನಬಾರದು. ಇಲ್ಲದಿದ್ದಲ್ಲಿ ಅವರ ನೇಮಕಾತಿ ಶೀಘ್ರದಲ್ಲಿಯೇ ಆಗಬೇಕು. ಗ್ರಾಮ ಪಂಚಾಯತ್‌ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅತ್ಯಗತ್ಯ ತಪಾಸಣ ಕಾರ್ಯ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಸ್‌. ಅಂಗಾರ,  ಕೊರೊನಾ ಮತ್ತು ನೆರೆ ಜಿಲ್ಲಾ ಉಸ್ತುವಾರಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next