ಮಂಡ್ಯ:ಜಿಲ್ಲೆಯಲ್ಲಿ ಶನಿವಾರ ಕೋವಿಡ್ ಗೆ ನಾಲ್ವರು ಮೃತಪಟ್ಟಿದ್ದು, ಒಂದೇ ದಿನ 291 ಮಂದಿ ಕೋವಿಡ್ ದಿಂದ ಮುಕ್ತರಾಗಿ ಬಿಡುಗಡೆಯಾಗಿದ್ದಾರೆ. ಇದರ ಜೊತೆಗೆ ಒಂದೇ ದಿನ 246 ಮಂದಿಗೆ ಸೋಂಕು ಆವರಿಸಿದೆ.
ಮಂಡ್ಯ ತಾಲೂಕಿನ 65 ಹಾಗೂ 80 ವರ್ಷದ ಇಬ್ಬರು ವೃದ್ಧೆಯರು, ಮದ್ದೂರಿನ 70 ವರ್ಷದ ವೃದ್ಧ ಹಾಗೂ ಪಾಂಡವಪುರ ತಾಲೂಕಿನ 58 ವರ್ಷದ ವ್ಯಕ್ತಿ ಕೋವಿಡ್ ದಿಂದ ಮೃತಪಟ್ಟಿದ್ದಾರೆ. ನಾಲ್ಕು ಮಂದಿಗೂ ತೀವ್ರ ಉಸಿರಾಟ ತೊಂದರೆ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೋವಿಡ್ ಗೆ ಮೃತಪಟ್ಟವರ ಸಂಖ್ಯೆ 71ಕ್ಕೇರಿದೆ.
246 ದೇಹ ಹೊಕ್ಕಿದ ಸೋಂಕು: ಶನಿವಾರ ಒಂದೇ ದಿನ 246 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಮಂಡ್ಯ 99, ಮದ್ದೂರು 12, ಮಳವಳ್ಳಿ 32, ಪಾಂಡವಪುರ 31, ಶ್ರೀರಂಗ ಪಟ್ಟಣ 27, ಕೆ.ಆರ್.ಪೇಟೆ 30 ಹಾಗೂ ನಾಗಮಂಗಲ 15 ಮಂದಿಗೆ ಸೋಂಕು ಆವರಿಸಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6540ಕ್ಕೇರಿದೆ. ಸರ್ಕಾರಿ ಆಸ್ಪತ್ರೆಗಳ ಐಸೋಲೇಷನ್ ನಲ್ಲಿ 529, ಖಾಸಗಿ ಆಸ್ಪತ್ರೆಗಳ ಐಸೋಲೇಷನ್‌ನಲ್ಲಿ 133, ಜಿಲ್ಲೆಯ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 393 ಹಾಗೂ ಹೋಂ ಐಸೋಲೇಷನ್‌ನಲ್ಲಿ 974 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
1648 ಮಂದಿಗೆ ಪರೀಕ್ಷೆ: ರ್ಯಾಪಿಡ್ 1258 ಹಾಗೂ ಆರ್‌ಟಿಪಿಸಿಆರ್ 390 ಪರೀಕ್ಷೆ ಸೇರಿದಂತೆ ಶನಿವಾರ 1648 ಮಂದಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದೆ.
291 ಮಂದಿ ಕೋವಿಡ್ ದಿಂದ ಮುಕ್ತ: ಶನಿವಾರ ಒಂದೇ ದಿನ ದಾಖಲೆಯ 291 ಮಂದಿ ಕೋವಿಡ್ ದಿಂದ ಮುಕ್ತ ರಾಗಿದ್ದಾರೆ. ಮದ್ದೂರು 176, ಪಾಂಡವಪುರ 66, ಕೆ.ಆರ್.ಪೇಟೆ 46, ಮಂಡ್ಯ, ಶ್ರೀರಂಗಪಟ್ಟಣ ಹಾಗೂ ನಾಗಮಂಗಲದ ತಲಾ ಒಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೂ 4440 ಮಂದಿ ಗುಣಮುಖರಾಗಿದ್ದು, 2029 ಸಕ್ರಿಯ ಪ್ರಕರಣಗಳಿವೆ.