ಕೊಪ್ಪಳ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಜನತೆಗೆ ಸೋಂಕಿನ ಬಗ್ಗೆ ಭಯವಿದ್ದರೂ ಇನ್ನೂ ಜಾಗೃತರಾಗುತ್ತಿಲ್ಲ. ಅನಗತ್ಯವಾಗಿ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದಾರೆ. ಪೊಲೀಸರು ದಂಡ ಹಾಕಿದ್ರೂ, ಎಫ್‌ಐಆರ್ ದಾಖಲಿಸಿದರೂ ಜನರು ಕ್ಯಾರೆ ಎನ್ನುತ್ತಿಲ್ಲ. ಇದು ಯಾರ ನಿರ್ಲಕ್ಷ್ಯ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.
ರಾಜ್ಯದಲ್ಲಿ ಸರ್ಕಾರವು ಆರಂಭದಲ್ಲಿ ಕರ್ಫ್ಯೂ ಜಾರಿಗೊಳಿಸಿದ ಬಳಿಕ 6ರಿಂದ 10 ಗಂಟೆವರೆಗೂ ಅಗತ್ಯ ವಸ್ತುಗಳ ಖರೀದಿ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿತ್ತು. ಇದನ್ನೇ ಜನರು ತಮಗೆ ಯಾವ ಭಯವೂ ಇಲ್ಲವೆಂಬಂತೆ ಅನಗತ್ಯವಾಗಿ ಸುತ್ತಾಡುತ್ತಿದ್ದಾರೆ. ಒಂದೆಡೆ ಜಿಲ್ಲೆಯಲ್ಲಿ ನಿತ್ಯ ಸೋಂಕಿತರ ಪ್ರಮಾಣ ಹಾಗೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಜನರು ಸಹ ಅಲ್ಲಿ ಇಷ್ಟು ಜನರಿಗೆ ಸೋಂಕು ದೃಢಪಟ್ಟಿದೆಯಂತೆ, ಇಲ್ಲಿ ಇಷ್ಟು ಜನ ಸೋಂಕಿಗೆ ಬಲಿಯಾಗಿದ್ದಾರಂತೆ.
ಜಿಲ್ಲೆಯಲ್ಲಿ ಅಷ್ಟು ಜನರು ಸತ್ತಿದ್ದಾರಂತೆ ಎಂದು ಮಾತನಾಡಿಕೊಳ್ಳುತ್ತಾರೆ. ಆದರೆ ಅನಗತ್ಯವಾಗಿ ಸುತ್ತಾಡುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಇದು ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಆಡಳಿತಕ್ಕೂ ದೊಡ್ಡ ಸಮಸ್ಯೆಯಾಗುತ್ತಿದೆ. ಒಂದೆಡೆ ಪೊಲೀಸ್ ಇಲಾಖೆ ಸರ್ಕಾರದ ಮಾರ್ಗಸೂಚಿ ಪಾಲಿಸುತ್ತಿದ್ದೇವೆ ಎನ್ನುತ್ತಿದೆ. ಕರ್ಫ್ಯೂ ಜಾರಿ ಮಾಡಿದ ಬಳಿಕ ಜಿಲ್ಲಾದ್ಯಂತ ಕೋವಿಡ್ ನಿಯಮ ಉಲ್ಲಂಘಿಸಿದ 41,235 ಜನರಿಗೆ ಸ್ಥಳದಲ್ಲೇ ದಂಡ ಹಾಕಲಾಗಿದೆ. ದಂಡದ ಮೊತ್ತವೇ 43,83,614 ಸಂಗ್ರಹವಾಗಿದೆ. ದಂಡದ ಮೊತ್ತ ಏರಿಕೆಯಾಗುತ್ತಿದೆ ವಿನಃ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಇದಲ್ಲದೇ 71 ಜನರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಕದ್ದುಮುಚ್ಚಿ ವ್ಯಾಪಾರ: ಇನ್ನು ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಆದರೂ ಕೆಲ ವ್ಯಾಪಾರಿಗಳು ಕದ್ದುಮುಚ್ಚಿ ಅಂಗಡಿಗಳ ಶೆಟರ್‌ಗಳನ್ನು ಅರ್ಧಕ್ಕೆ ಎಳೆದು ವಹಿವಾಟು ಮಾಡುತ್ತಿದ್ದಾರೆ. ಪೊಲೀಸರಿಂದ ದಂಡ ಬಿದ್ದರೂ ಸಹಿತ ಅವರು ಮತ್ತೆ ಮತ್ತೆ ಅದೇ ಕೆಲಸ ಮಾಡುತ್ತಿದ್ದು ಪೊಲೀಸ್ ಇಲಾಖೆಯೂ ಈ ಬಗ್ಗೆ ಮೌನ ವಹಿಸುತ್ತಿದೆ. ಇಲ್ಲಿ ಯಾರ ನಿರ್ಲಕ್ಷ್ಯ ಎನ್ನುವುದೇ ತಿಳಿಯುತ್ತಿಲ್ಲ.
ಬ್ಯಾಂಕ್ ಮುಂದೆ ಜನೋವೋ: ಜನ ಕೋವಿಡ್ ಆರ್ಭಟದ ಮಧ್ಯೆಯೂ ನಗರದ ವಿವಿಧ ಬ್ಯಾಂಕ್‌ಗಳಲ್ಲಿ ಹಣ ಪಡೆಯಲು ಸಾಲುಗಟ್ಟಿ ನಿಂತಿದ್ದು, ನಿಜಕ್ಕೂ ಅಚ್ಚರಿ ತರಿಸುತ್ತಿದೆ. ಹಣ ಸಿಗುತ್ತೋ ಇಲ್ಲವೋ ಎನ್ನುವಂತೆ ಜನರು ಬ್ಯಾಂಕಿನ ಮುಂದೆ ಜನ ಜಂಗುಳಿ ಸೇರುತ್ತಿದ್ದಾರೆ. ಪೊಲೀಸರು, ಬ್ಯಾಂಕ್ ಸಿಬ್ಬಂದಿ ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ ಎಂದು ಜನರಿಗೆ ಪದೇ ಪದೆ ಹೇಳುವುದೇ ಆಗಿದೆ. ಇಷ್ಟಾದರೂ ಜನದಟ್ಟಣೆ ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಇದು ನಿಜಕ್ಕೂ ವಿಪರ್ಯಾಸವೇ ಸರಿ.