ಗದಗ: ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆಯ ಸೋಂಕಿನ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಸೋಂಕಿತರ ಚಿಕಿತ್ಸೆಗೆ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ನಡುವೆ ಕೊರೊನಾ ಸೋಂಕು ತಡೆಗಟ್ಟಲು ಲಸಿಕಾಕರಣವೂ ಹೆಚ್ಚುತ್ತಿದೆ.
ವೃದ್ಧರು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದು, 15 ದಿನಗಳಲ್ಲಿ ಶೇ.37 ರಷ್ಟು ಗುರಿ ಸಾ ಧಿಸಲಾಗಿದೆ. ಕಳೆದ ವರ್ಷದಂತೆ ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಲ್ಲೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಏ.1 ರಿಂದ 15 ದಿನಗಳಲ್ಲಿ ಸೋಂಕಿತರ ಸಕ್ರಿಯ ಪ್ರಕರಣಗಳ ಸಂಖ್ಯೆ 175ಕ್ಕೆ ತಲುಪಿರುವುದು ಆತಂಕಕಾರಿ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಏ.16ರಂದು ಪತ್ತೆಯಾದ 34 ಕೇಸ್ ಸೇರಿದಂತೆ ಒಟ್ಟು 11504 ಪ್ರಕರಣಗಳು ದೃಢಪಟ್ಟಿದ್ದು, 11188 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಕೋವಿಡ್‌ನಿಂದ 141 ಮಂದಿ ಮೃತಪಟ್ಟಿದ್ದಾರೆ. ಸದ್ಯ 175 ಪ್ರಕರಣಗಳು ಸಕ್ರಿಯವಾಗಿವೆ. ಅವರಲ್ಲಿ 150 ಜನರು ಮನೆಯಲ್ಲೇ ಚಿಕಿತ್ಸೆ ಪಡೆಯತ್ತಿದ್ದಾರೆ. 15 ಜನರು ಜಿಮ್ಸ್ ಆಸ್ಪತ್ರೆಯಲ್ಲಿದ್ದು, ಅವರಲ್ಲಿ ಮೂವರು ಐಸಿಯುನಲ್ಲಿದ್ದಾರೆ. 10 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿ ಕಾರಿಗಳು ತಿಳಿಸಿದ್ದಾರೆ.
ಚಿಕಿತ್ಸೆಗೆ ಆಸ್ಪತ್ರೆಗಳು ಸನ್ನದ್ಧ: ಕೊರೊನಾ ಮೊದಲ ಹಂತದಲ್ಲಿ ಚಿಕಿತ್ಸೆ ನೀಡುವಲ್ಲಿ ಉಂಟಾದ ತೊಡಕುಗಳನ್ನು ಅವಲೋಕಿಸಿದ ಜಿಲ್ಲಾಡಳಿತ ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಿದೆ. ಜಿಮ್ಸ್ ಆವರಣದಲ್ಲಿರುವ 100 ಹಾಸಿಗೆಗಳ ಆಯುಷ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಚಿಕಿತ್ಸೆ ಮೀಸಲಿಡಲಾಗಿದೆ. ಸೋಂಕಿತರ ಚಿಕಿತ್ಸೆಗಾಗಿ ಸದ್ಯಕ್ಕೆ ಒಟ್ಟು 370 ಬೆಡ್ ಗಳನ್ನು ಮೀಸಲಿಟ್ಟಿದೆ. ಈ ಪೈಕಿ 117 ಸಾಮಾನ್ಯ ಬೆಡ್, 200 ಆಕ್ಸಿಜನ್ ಬೆಡ್, ಐಸಿಯು ವೆಂಟಿಲೇಟರ್ ಸಹಿತ 53 ಬೆಡ್‌ಗಳನ್ನು ವ್ಯವಸ್ಥೆ ಮಾಡಿದೆ. ಮುಂಡರಗಿ, ರೋಣ, ನರಗುಂದ ತಾಲೂಕು ಆಸ್ಪತ್ರೆಗಳಿಗೆ ತಲಾ 50 ಆಕ್ಸಿಜನ್ ಬೆಡ್‌ಗಳನ್ನು ಒದಗಿಸಿದೆ. ಶಿರಹಟ್ಟಿ 30, ಲಕ್ಷ್ಮೇಶ್ವರ ಮತ್ತು ಗಜೇಂದ್ರಗಡದಲ್ಲಿ ತಲಾ 10 ಆಕ್ಸಿಜನ್ ಬೆಡ್ ಸೇರಿದಂತೆ ತಕ್ಷಣಕ್ಕೆ 370 ಬೆಡ್‌ಗಳನ್ನು ವ್ಯವಸ್ಥೆ ಮಾಡಿ, ಸೋಂಕಿತರ ಚಿಕಿತ್ಸೆಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ.
ಲಸಿಕಾಕರಣ ಚುರುಕು: ಏ.1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಇತ್ತೀಚೆಗೆ ಚುರುಕು ಪಡೆದಿದೆ. ಜಿಲ್ಲೆಯ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.22.88 ಜನರಿಗೆ ಲಸಿಕಾಕರಣಕ್ಕೆ ರಾಜ್ಯ ಸರಕಾರ ಗುರಿ ನಿಗದಿಪಡಿಸಿದೆ. ಏ.15ರ ವರೆಗೆ 45 ವರ್ಷ 58798 ಗುರಿ ಪೈಕಿ 43701 ಜನರಿಗೆ ಲಸಿಕಾ ಕರಣವಾಗಿದ್ದು, ಶೇ.37 ರಷ್ಟು ಮತ್ತು 60 ವರ್ಷ ಮೇಲ್ಪಟ್ಟ 89891 ಪೈಕಿ 55416 ಸಾಧನೆಯಾಗಿದ್ದು, ಶೇ.62 ಆಗಿದೆ.
ಒಟ್ಟಾರೆ ಜಿಲ್ಲೆಯ 45 ವರ್ಷ ಮೇಲ್ಪಟ್ಟ 2,67,104 ಪೈಕಿ 99,117 ಜನರು ಲಸಿಕೆ ಪಡೆದಿದ್ದು, ಶೇ.37 ರಷ್ಟು ಪ್ರಗತಿಯಾಗಿದೆ. ಜಿಲ್ಲೆಯಲ್ಲಿ ತ್ವರಿತಗತಿಯಲ್ಲಿ ಒಟ್ಟು 48 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 1 ಜಿಲ್ಲಾ ಆಸ್ಪತ್ರೆ, 5 ಖಾಸಗಿ ಆಸ್ಪತ್ರೆ, 39 ಪ್ರಾಥಮಿಕ ಆರೋಗ್ಯ ಕೇಂದ್ರ, 4 ತಾಲೂಕು ಆರೋಗ್ಯ ಕೇಂದ್ರ, 2 ಸಮುದಾಯ ಆರೋಗ್ಯ ಕೇಂದ್ರ ಹಾಗೂ 3 ನಗರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ ಎಂದು ಆರ್‌ಸಿಎಚ್ ಅ ಧಿಕಾರಿ ಡಾ|ಗೋಜನೂರ ಮಾಹಿತಿ ನೀಡಿದರು. ಮೊದಲ ಹಂತದಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಸಫಲತೆ ಸಾ ಧಿಸಿದ್ದ ಗದಗ ಜಿಲ್ಲಾಡಳಿತ, ಇದೀಗ ಕೊರೊನಾ ಹರಡದಂತೆ ಹಾಗೂ ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ನಿಟ್ಟಿನಲ್ಲಿ ಕೊರೊನಾ ಲಸಿಕಾಕರಣಕ್ಕೂ ಒತ್ತು ನೀಡಿದೆ. ಸ್ವಯಂ ಸೇವಾ ಸಂಘ, ಸಂಸ್ಥೆಗಳ ಮೂಲಕ ವ್ಯಾಪಕ ಜನಜಾಗೃತಿ ಮೂಡಿಸಿದ್ದು, ಸರಕಾರದ ಸೂಚನೆಯಂತೆ ಮೊದಲಿಗೆ 60 ವರ್ಷ ಹಾಗೂ ಇದೀಗ 45 ವರ್ಷ ಮೇಲ್ಪಟ್ಟ ಎಲ್ಲರನ್ನೂ ಲಸಿಕಾ ಕೇಂದ್ರದತ್ತ ಕರೆತರಲು ಪ್ರಯತ್ನಿಸುತ್ತಿದೆ.
ವೀರೇಂದ್ರ ನಾಗಲದಿನ್ನಿ