Advertisement

ಬೆರಳೆಣಿಕೆಗೆ ಇಳಿದ ಕೋವಿಡ್ ಕೇಸ್‌

04:28 PM Feb 28, 2021 | Team Udayavani |

ಹಾವೇರಿ: ದೇಶದಲ್ಲಿ ಕೋವಿಡ್ ಮಹಾಮಾರಿಯಎರಡನೇ ಅಲೆಯ ಆತಂಕ ಹೆಚ್ಚುತ್ತಿರುವ ನಡುವೆಯೂ ಜಿಲ್ಲೆಯಲ್ಲಿ ವೈರಸ್‌ ಹಾವಳಿ ಬೆರಳೆಣಿಕೆಗೆ ಇಳಿಮುಖವಾಗಿದೆ.

Advertisement

ಜಿಲ್ಲೆಯಲ್ಲಿ ಕೊರೊನಾ ವೈರಸ್‌ನಿಂದ ಸಾಯುವವರ ಸಂಖ್ಯೆ ಸಂಪೂರ್ಣ ನಿಂತಿದ್ದು, ಜಿಲ್ಲೆಯ ಕೆಲ ತಾಲೂಕಿನಲ್ಲಿ ವೈರಸ್‌ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ತಲುಪಿದೆ. ಹಾವೇರಿ ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಶೀಘ್ರದಲ್ಲಿಯೇ ಶೂನ್ಯವಾಗಲಿವೆ ಎಂದುವೈದ್ಯಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದಾಗ ಕಾಣಿಸಿಕೊಳ್ಳದ ಕೊರೊನಾ ಲಾಕ್‌ಡೌನ್‌ ಸಡಿಲಗೊಳ್ಳುತ್ತಿದ್ದಂತೆ ಒಂದೊಂದೇ ಕಾಣಿಸಿಕೊಳ್ಳಲು ಆರಂಭಿಸಿದ್ದವು. ಜಿಲ್ಲೆಯಲ್ಲಿ ಕಳೆದ ಮೇ 3ರಂದು ಕೋವಿಡ್ ಸೋಂಕಿತ ಮೊದಲ ಪ್ರಕರಣ ಪತ್ತೆಯಾಗಿತ್ತು. ಆಗಸ್ಟ್‌ ಅಂತ್ಯದ ವೇಳೆಗೆ ಈ ಸಂಖ್ಯೆ 5 ಸಾವಿರ ಗಡಿಗೆ ಬಂದು ತಲುಪಿತ್ತು. ಅಗಸ್ಟ್‌ ತಿಂಗಳೊಂದರಲ್ಲಿಯೇ 89 ಜನರು ಸೋಂಕಿನಿಂದ ಮೃತಪಡುವ ಮೂಲಕ ಸಾಕಷ್ಟು ಭೀತಿ ಉಂಟು ಮಾಡಿತ್ತು. ಇದರಿಂದ ಸಣ್ಣ ಕೆಮ್ಮು, ನೆಗಡಿ, ಜ್ವರಕ್ಕೂ ಆತಂಕ ಪಡುವ ಪರಿಸ್ಥಿತಿ ನಿರ್ಮಣಗೊಂಡಿತ್ತು. ವೈರಸ್‌ ನಿಯಂತ್ರಣಕ್ಕೆ ಜಿಲ್ಲಾಡಳಿತ ಸಾಕಷ್ಟು ಕ್ರಮ ಕೈಗೊಂಡಿದ್ದರೂ ವೈರಸ್‌ಹಾವಳಿ ನಿಯಂತ್ರಣಕ್ಕೆ ಬಂದಿರಲಿಲ್ಲ. ಆದರೆ ಕಳೆದ ಮೂರ್ನಾಲ್ಕು ತಿಂಗಳಿಂದ ವೈರಸ್‌ ಪ್ರಕರಣಗಳಲ್ಲಿ ತೀವ್ರ ಇಳಿಕೆ ಕಂಡು ಬಂದಿದ್ದು, ಸಾವಿನ ಸಂಖ್ಯೆ ಶೂನ್ಯಕ್ಕಿಳಿದಿದೆ. ಜಿಲ್ಲೆಯಲ್ಲಿ ಈವರೆಗೆ ಸುಮಾರು 2 ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್ ಸಂಬಂಧ ಆರೋಗ್ಯ ತಪಾಸಣೆ ಮಾಡಲಾಗಿದೆ.

ಈವರೆಗೆ ಎಷ್ಟು ಪ್ರಕರಣ?: ಜಿಲ್ಲೆಯಲ್ಲಿ ಈವರೆಗೆ 11,279 ಕೋವಿಡ್ ಪಾಸಿಟಿವ್‌ ಪ್ರಕರಣಗಳು ಕಂಡು ಬಂದಿವೆ. ಈ ಪೈಕಿ 11,075 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ. ನಿತ್ಯ ಸಾವಿರಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ಬೆರಳೆಣಿಕೆಗೆ ಇಳಿಮುಖವಾಗಿವೆ. ಸದ್ಯ ಹಾವೇರಿ ಜಿಲ್ಲೆಯಲ್ಲಿ 9 ಪ್ರಕರಣಗಳು ಪಾತ್ರ ಸಕ್ರಿಯವಾಗಿದ್ದು, 195 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕಣಗಳ ಪೈಕಿ ಹಾನಗಲ್ಲ ತಾಲೂಕಿನಲ್ಲಿ 4, ಹಾವೇರಿ 3, ರಾಣೆಬೆನ್ನೂರು 2 ಪ್ರಕರಣಗಳು ಪಾತ್ರ ಸಕ್ರಿಯವಾಗಿವೆ. ಬ್ಯಾಡಗಿ, ಹಿರೇಕೆರೂರು ಸವಣೂರು, ಶಿಗ್ಗಾವಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಶೂನ್ಯಕ್ಕಿಳಿದಿದೆ.

ಈವರೆಗೆ 5790 ಜನರು ಪಡೆದಿದ್ದಾರೆ ಲಸಿಕೆ :

Advertisement

ಕೋವಿಶೀಲ್ಡ್‌ ಮೊದಲ ಹಂತದ ಲಸಿಕಾ ಕಾರ್ಯಕ್ರಮದಲ್ಲಿಲಸಿಕೆ ಪಡೆಯಲು ನೋಂದಾಯಿಸಿದ್ದ8619 ಜನರಲ್ಲಿ ಈವರೆಗೆ5790 ಜನರು ಲಸಿಕೆಪಡೆದಿದ್ದಾರೆ. ಫೆ.9ರಿಂದಎರಡನೇ ಹಂತದ ಲಸಿಕೆ ನೀಡುವ ಕಾರ್ಯಕ್ರಮ ಶುರುವಾಗಿದ್ದು, 5790 ಜನರುಲಸಿಕೆ ಪಡೆಯಲು ನೋಂದಾಯಿಸಿದ್ದಾರೆ.ಈವರೆಗೆ 2208 ಜನರು ಲಸಿಕೆ ಪಡೆದಿದ್ದುಶೇ.38 ಪ್ರಗತಿ ಸಾಧಿಸಲಾಗಿದೆ.

ಎರಡನೇ ಅಲೆ ಎದುರಿಸಲು ಸಿದ್ಧತೆ :

ದೇಶಾದ್ಯಂತ ಕೋವಿಡ್ ಎರಡನೇ ಅಲೆ ಸದ್ದು ಮಾಡುತ್ತಿದ್ದು, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಹ ಸಮರ್ಥವಾಗಿಎದುರಿಸಲು ಮುಂಜಾಗ್ರತೆಯ ಸಿದ್ಧತೆನಡೆಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರಲ್ಲಿ ಕೋವಿಡ್ ವೈರಸ್‌ ಬಗ್ಗೆ ನಿರ್ಲಕ್ಷ್ಯ ಬೇಡ, ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಲಾಗುತ್ತಿದೆ.ಆದರೂ, ಬಹುತೇಕ ಕಡೆ ಜನರು ಮಾಸ್ಕ್ ಧರಿಸಿರುವುದು ಕಂಡು ಬರುತ್ತಿಲ್ಲ. ಸಾಮಾಜಿಕ ಅಂತರ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬರುತ್ತಿದೆ.

ಜಿಲ್ಲೆಯಲ್ಲಿ ಕೋವಿಡ್ ಸಂಪೂರ್ಣ ಇಳಿಮುಖವಾಗುತ್ತಿದೆ. ದೇಶದಲ್ಲಿ ಕೋವಿಡ್ ಎರಡನೇ ಅಲೆ ಕಂಡು ಬರುತ್ತಿದೆ ಎನ್ನಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಕೋವಿಡ್ ವಾರಿಯರ್ಸ್ ಲಸಿಕೆ ಪಡೆಯುವಂತೆ ಸೂಚನೆ ನೀಡಲಾಗಿದ್ದು, ಮೊದಲ ಹಂತದ ಲಸಿಕಾ ಕಾರ್ಯಕ್ರಮದಲ್ಲಿ ಶೇ.68 ಪ್ರಗತಿ ಸಾಧಿಸಲಾಗಿದೆ. ಎರಡನೇ ಹಂತದ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ.  – ಡಾ|ರಾಜೇಂದ್ರ ದೊಡ್ಡಮನಿ, ಡಿಎಚ್‌ಒ, ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next