Advertisement
ನಗರದಲ್ಲಿ 113 ದಿನಗಳಲ್ಲಿ 5280 ಮಂದಿಗೆ ಸೋಂಕು ದೃಢಪಟ್ಟಿದ್ದು, ಜು. 1ರಿಂದ ಶನಿವಾರದವರೆಗೆ 16862 ಮಂದಿಗೆ ಸೋಂಕು ತಗುಲಿದೆ. ದಿನದಿಂದ ದಿನಕ್ಕೆ ದಾಖಲೆಯ ಪ್ರಕರಣ ದೃಢಪಡುತ್ತಿದ್ದು, ರಾಜ್ಯದ ಈವರೆಗಿನ ಸೋಂಕಿತರ ಪೈಕಿ ಶೇ. 45 ಸೋಂಕಿತರು ಮಹಾನಗರದಲ್ಲಿದ್ದಾರೆ. ಬಹುತೇಕ ಸೋಂಕಿತರ ಸಂಪರ್ಕ ಇನ್ನೂ ಪತ್ತೆಯಾಗಿಲ್ಲ. ಶನಿವಾರವೂ ನಗರದಲ್ಲಿ ದಾಖಲೆ 1,533 ಮಂದಿ ಸೋಂಕು ದೃಢಪಟ್ಟಿದ್ದು, 23 ಸೋಂಕಿತರು ಮೃತಪಟ್ಟಿದ್ದಾರೆ.
Related Articles
Advertisement
ಯಾವ ವಾರ್ಡ್‌ಗಳಲ್ಲಿ ಅಧಿಕ ಸೋಂಕಿತರು? : ಪಟ್ಟಾಭಿ ರಾಮ ನಗರ 33, ಸಿಂಗಸಂದ್ರ 30, ಸಾರಕ್ಕಿ, ಅರಿಕೆರೆ, ಗಿರಿನಗರ, ರಾಮಸ್ವಾಮಿ ಪಾಳ್ಯ, ವಸಂತಪುರ ತಲಾ 15, ಎಚ್ ಎಸ್ ಆರ್ ಲೇಔಟ್, ಭಾರತಿ ನಗರ, ಜಯನಗರ, ಶೇಷಾದ್ರಿ ಪುರ ದಲ್ಲಿ ತಲಾ 11, ಥಣಿಸಂದ್ರ, ಶಿವಾಜಿನಗರ, ಗಾಯತ್ರಿ ನಗರದಲ್ಲಿ ತಲಾ 10 ಮಂದಿಗೆ ಸೋಂಕು ದೃಢಪಟ್ಟಿದೆ. 81 ವಾರ್ಡ್‌ಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸುದೀರ್ಘವಾಗಿ ಹೆಚ್ಚಳವಾಗುತ್ತಿದೆ. ಶನಿವಾರ ಅಂತ್ಯದ ವರೆಗೆ 3,181 ಕಂಟೈನ್ಮೆಂಟ್ ವಲಯ ಗುರುತಿಸಲಾಗಿದೆ.
ನಾಲ್ವರು ಪೊಲೀಸರಿಗೆ ಪಾಸಿಟಿವ್ : ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ನಾಲ್ವರು ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಯಶವಂತಪುರ ವಿಭಾಗದ ಅಗ್ನಿಶಾಮಕ ದಳದ ಮೂವರು ಸಿಬ್ಬಂದಿಗೆ ಕೋವಿಡ್ ಕಾಣಿಸಿಕೊಂಡಿದ್ದು, ಇತರೆ ಅಧಿಕಾರಿ-ಸಿಬ್ಬಂದಿಯಲ್ಲಿ ನಡುಕ ಶುರುವಾಗಿದೆ. ಮೂವರು ಸಿಬ್ಬಂದಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಸುಮಾರು 10 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಅಗ್ನಿಶಾಮಕ ದಳ ಅಧಿಕಾರಿಗಳು ಮಾಹಿತಿ ನೀಡಿದರು. ವಿಜಯನಗರ ಸಂಚಾರ ಠಾಣೆ ಕಾನ್ಸ್ ಸ್ಟೇಬಲ್ ವೊಬ್ಬರಿಗೆ ಕೋವಿಡ್ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಆದರೆ, ಶುಕ್ರವಾರ ಸಂಜೆ ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಕರೆ ಮಾಡಿ ಸೋಂಕು ದೃಢವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹೀಗಾಗಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 20 ಮಂದಿ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಮತ್ತೂಂದೆಡೆ ಸೋಂಕಿತ ಸಿಬ್ಬಂದಿಯ ಜತೆ ಊಟ, ಕೆಲಸ ಮಾಡಿದ್ದೇವೆ. ತಮ್ಮನ್ನು ಕ್ವಾರಂಟೈನ್ ಮಾಡುವಂತೆ ಕೇಳಿಕೊಂಡರೂ ಹಿರಿಯ ಅಧಿಕಾರಿಗಳು ಸರಿಯಾದ ಪ್ರತಿಕ್ರಿಯೆ ನೀಡುತ್ತಿಲ್ಲ. ಕೆಲಸ ಮಾಡುವಂತೆ ಸೂಚಿಸುತ್ತಿದ್ದಾರೆ ಎಂದು ಠಾಣಾ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.
ಸೋಮವಾರದವರೆಗೆ ಕೆಪಿಸಿಸಿ ಕಚೇರಿ ಸೀಲ್ : ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಯಲ್ಲಿ ಓಡಾಡಿದ ಶಾಸಕರಿಗೆ ಮತ್ತು ಸಿಬ್ಬಂದಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಚೇರಿಯನ್ನು ಸೋಮವಾರದವರೆಗೆ ಸೀಲ್‌ಡೌನ್ ಮಾಡಲಾಗಿದೆ. ಕೆಪಿಸಿಸಿಯ ಹಳೆ ಮತ್ತು ಹೊಸ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಧಿಕಾರಿಗಳು ನಿವಾರಕ ಸಿಂಪಡಿಸಿ ಸ್ವತ್ಛಗೊಳಿಸಲಾಗಿದೆ. ಸೋಂಕಿತ ಶಾಸಕ ಅಜಯ್ ಸಿಂಗ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರಿಂದ ಎಚ್.ಕೆ.ಪಾಟೀಲ್ ಅವರು ಹೋಮ್ ಕ್ವಾರಂಟೈನ್ ಆಗಿದ್ದಾರೆ.
ಚಿಕಿತ್ಸೆಗಾಗಿ ಗರ್ಭಿಣಿ ಪರದಾಟ : ಗರ್ಭಿಣಿಗೆ ಕೋವಿಡ್ ದೃಢಪಟ್ಟಿದ್ದು, ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗೆ 3 ಆಸ್ಪತ್ರೆಗಳಿಗೆ ಅಲೆದರೂ ಚಿಕಿತ್ಸೆ ಸಿಗದೇ ನರಳಾಡಿದ ಘಟನೆ ಶನಿವಾರ ನಡೆದಿದೆ. ಡಿಜಿ ಹಳ್ಳಿ ಸುಬ್ರಹ್ಮಣ್ಯ ದೇವಸ್ಥಾನ ಲೇಔಟ್ ನ ನಿವಾಸಿ 9 ತಿಂಗಳ ತುಂಬು ಗರ್ಭಿಣಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಶುಕ್ರವಾರ ತಡರಾತ್ರಿ ಹೆರಿಗೆ ನೋವು ಶುರುವಾಗಿದೆ. ರಾತ್ರಿಯೇ ಆ್ಯಂಬುಲೆನ್ಸ್ ಕರೆ ಮಾಡಿದ್ದರೂ ಬಂದಿಲ್ಲ. ಆದ್ದರಿಂದ ಆಟೋದಲ್ಲೇ ಆಸ್ಪತ್ರೆಗೆ ತೆರಳಿದ್ದಾರೆ. ವಾಣಿ ವಿಲಾಸ್, ಬೌರಿಂಗ್, ಹಾಗೂ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಅಲೆದರೂ ಯಾವೊಂದು ಆಸ್ಪತ್ರೆಯೂ ಆಕೆಯನ್ನೂ ಒಳಗೆ ಸೇರಿಸಿಲ್ಲ. ಹೀಗಾಗಿ ಸದ್ಯ ಮಹಿಳೆ ಆಟೋ ಮೂಲಕವೇ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದಾರೆ.
85 ಕಾರ್ಮಿಕರಿಗೆ ಸೋಂಕು : ಬಾಗಲೂರು ಠಾಣಾ ವ್ಯಾಪ್ತಿಯ ಕಣ್ಣೂರಿನ ಎಲ್ ಅಂಡ್ ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆ ಕಂಪನಿಯನ್ನು ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡಲಾಗಿದೆ. ನೂರಾರು ಮಂದಿ ಕೆಲಸ ಮಾಡುವ ಕಂಪನಿಯಲ್ಲಿ ಇತ್ತೀಚೆಗೆ ಸಾಮೂಹಿಕವಾಗಿ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿ ಬಂದಿದ್ದು, 85 ಕಾರ್ಮಿಕರಿಗೆ ಸೋಂಕಿರುವುದು ಪತ್ತೆಯಾಗಿದೆ. ಸೋಂಕಿತರೆಲ್ಲರನ್ನು ಜಿಕೆವಿಕೆಯಲ್ಲಿ ಕ್ವಾರಂಟೈನ್ ಗೆ ರವಾನಿಸಲಾಗಿದೆ. ಮಾಹಿತಿ ಸಂಗ್ರಹಿಸಲಾಗುತ್ತಿದೆ.