Advertisement

ಮೈಮರೆತರೆ ಅಪಾಯ!

11:57 PM Sep 02, 2021 | Team Udayavani |

ಹೊಸದಿಲ್ಲಿ: ಬಹುತೇಕ ರಾಜ್ಯ ಗಳಲ್ಲಿ ಭೌತಿಕ ಶಾಲಾ ತರಗತಿಗಳು ಆರಂಭವಾಗಲಿವೆ, ಹಬ್ಬಗಳು ಹೊಸ್ತಿಲಲ್ಲಿವೆ. ಮಾರುಕಟ್ಟೆಗಳಲ್ಲಿ ಮೈ ಮರೆತು ಸೇರಿರುವ ಜನಸಂದಣಿ ಕಾಣಸಿಗುತ್ತಿದೆ. ಈ ಮಧ್ಯೆ ಬುಧವಾರದಿಂದ ಗುರುವಾರದ ಅವಧಿಯಲ್ಲಿ ದೇಶಾದ್ಯಂತ ದೃಢಪಟ್ಟಿರುವ ಕೊರೊನಾ ಪ್ರಕರಣಗಳ ಸಂಖ್ಯೆ 3ನೇ ಅಲೆಯ ಭೀತಿಯನ್ನು ಇಮ್ಮಡಿಗೊಳಿಸಿದೆ.

Advertisement

ಕೇವಲ 24 ತಾಸುಗಳ ಅವಧಿಯಲ್ಲಿ ಸೋಂಕುಪೀಡಿತರ ಸಂಖ್ಯೆಯಲ್ಲಿ ಶೇ. 12ರಷ್ಟು ಏರಿಕೆಯಾಗಿದ್ದು, 47,092 ಮಂದಿಗೆ ಸೋಂಕು ದೃಢಪಟ್ಟಿದೆ. 509 ಮಂದಿ ಸಾವಿಗೀಡಾಗಿದ್ದಾರೆ. ದಿನವಹಿ ಸೋಂಕುಪೀಡಿತರ ಸಂಖ್ಯೆ 47 ಸಾವಿರದಾಟಿರುವುದು ಕಳೆದ 2 ತಿಂಗಳುಗಳಲ್ಲಿ ಇದೇ ಮೊದಲು. ಕೇರಳದಲ್ಲಿ ಒಂದೇ ದಿನ 32,097 ಪ್ರಕರಣ ವರದಿಯಾಗಿವೆ. ಮಹಾರಾಷ್ಟ್ರ, ತ.ನಾಡು, ಆಂಧ್ರ, ಮಿಜೋರಾಂ ಸಹಿತ ಹಲವು ರಾಜ್ಯಗಳಲ್ಲಿ ಸೋಂಕು ಹೆಚ್ಚಳವಾಗುತ್ತಿದೆ.

ಕರ್ನಾಟಕದಲ್ಲಿ ಗುರುವಾರ 1,240 ಪ್ರಕರಣ ಪತ್ತೆಯಾಗಿದ್ದು, 22 ಮಂದಿ ಮೃತಪಟ್ಟಿದ್ದಾರೆ. ಲಸಿಕೆ ವಿತರಣೆ ವೇಗ ಪಡೆದಿದ್ದರೂ ಈ ಎಲ್ಲ ಬೆಳವಣಿಗೆಗಳು ಕೊರೊನಾ 3ನೇ ಅಲೆ ನಮ್ಮ ಬೆನ್ನ ಹಿಂದೆಯೇ ಇದೆ, ಎಚ್ಚರಿಕೆ ಎಂಬ ಸಂದೇಶ ನೀಡುತ್ತಿವೆ.

ಶಾಲಾರಂಭದ ಬಗ್ಗೆ ಆತಂಕ :

ದೇಶದ ಬಹುತೇಕ ರಾಜ್ಯಗಳಲ್ಲಿ ಶಾಲೆಗಳು ಪುನಾರಂಭ ಗೊಂಡಿರುವ ಬಗ್ಗೆ ಆರೋಗ್ಯ ಮತ್ತು ವೈರಾಣು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಸೋಂಕು ಪೀಡಿತರ ಸಂಖ್ಯೆ ದಿನೇದಿನೆ ಹೆಚ್ಚು ತ್ತಿದೆ. ಲಸಿಕೆ ಪಡೆಯದ ಮಕ್ಕಳು ಸುಲಭವಾಗಿ 3ನೇ ಅಲೆಗೆ ತುತ್ತಾಗುವ ಸಾಧ್ಯತೆಯಿರುವ ಕಾರಣ ಆದಷ್ಟು ಮುನ್ನೆಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದ್ದಾರೆ. ಅಕ್ಟೋಬರ್‌ ವೇಳೆಗೆ 3ನೇ ಅಲೆ ಆರಂಭವಾಗಿ, ನವೆಂಬರ್‌ನಲ್ಲಿ ಉತ್ತುಂಗಕ್ಕೇರಲಿದೆ ಎಂದು ತಜ್ಞರು ಹೇಳಿದ್ದಾರೆ. ಸೋಂಕಿನ ತೀವ್ರತೆ  ರೂಪಾಂತರಿಯನ್ನು ಅವಲಂಬಿಸಿದ್ದು, ಪ್ರಬಲ ರೂಪಾಂತರಿ ಕಾಟ ಆರಂಭವಾದರೆ ಪರಿಸ್ಥಿತಿ ಬಿಗಡಾ ಯಿಸಬಹುದು ಎಂದಿದ್ದಾರೆ.

Advertisement

ಕೇಂದ್ರ ಸರಕಾರದ ಎಚ್ಚರಿಕೆ ! :

  • ಲಸಿಕೆ ಪಡೆದ ಬಳಿಕವೂ ಮಾಸ್ಕ್ ಧಾರಣೆ ನಿಲ್ಲಿಸಬೇಡಿ.
  • ಹಬ್ಬಗಳನ್ನು ಮನೆಯಲ್ಲೇ ಆಚರಿಸಿ, ಜಾಗ್ರತೆ ವಹಿಸಿ.
  • ಯಾವುದೇ ಕಾರಣಕ್ಕೂ ಜನದಟ್ಟಣೆ ಆಗದಿರಲಿ.
  • ಹೆಚ್ಚಿನ ಜನ ಸೇರುವ ಕಾರ್ಯಕ್ರಮದಲ್ಲಿ ಲಸಿಕೆ ಪಡೆದವರಷ್ಟೇ ಭಾಗವಹಿಸುವಂತೆ ನೋಡಿಕೊಳ್ಳಿ.
  • ಗರ್ಭಿಣಿಯರು ಆದಷ್ಟು ಬೇಗ ಲಸಿಕೆ ಪಡೆಯಲಿ.
  • ಪ್ರತಿಕಾಯ ಸೃಷ್ಟಿಯಾಗಲು ಲಸಿಕೆಯ ಎರಡೂ ಡೋಸ್‌ ಪಡೆಯುವುದು ಮುಖ್ಯ.

ಲಸಿಕೆ ಪಡೆಯಿರಿ :

ಸೋಂಕಿನಿಂದ ರಕ್ಷಣೆಗೆ ಲಸಿಕೆಯೇ ಪ್ರಮುಖ ರಕ್ಷಣ ಕವಚ. ಎಲ್ಲಿ ಲಸಿಕೆ ಅಭಿಯಾನ ಹಿಂದುಳಿದಿದೆಯೋ ಅಲ್ಲೆಲ್ಲ ಸೋಂಕು ಹೆಚ್ಚಾಗಿ ರುವ ನಿದರ್ಶನ ನಮ್ಮ ಮುಂದಿದೆ. ನಮ್ಮ ರಾಜ್ಯದಲ್ಲಿ ಲಸಿಕೆ ಲಭ್ಯವಿದ್ದರೂ ಶೇ. 30ರಷ್ಟು ಮಂದಿ ಲಸಿಕೆ ಯಿಂದ ದೂರ ಉಳಿದಿದ್ದಾರೆ. ಉ. ಕರ್ನಾಟಕದ ಜನರು ಲಸಿಕೆ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಪಡೆದವರಲ್ಲಿ ಸೋಂಕಿನ ತೀವ್ರತೆ ಕಡಿಮೆ ಮತ್ತು ಅಂಗಾಂಗಗಳಿಗೆ ಹಾನಿಯಾಗುವುದಿಲ್ಲ. 1 ಡೋಸ್‌ನಿಂದ ಶೇ. 40ರಷ್ಟು, 2 ಡೋಸ್‌ಗಳಿಂದ ಶೇ. 90ರಷ್ಟು ರಕ್ಷಣೆ ಸಿಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಮುಂಬರುವ ಅಲೆಯಿಂದ ನಮ್ಮನ್ನು ಮತ್ತು ನಮ್ಮ ಆಪ್ತರನ್ನು ರಕ್ಷಿಸಿಕೊಳ್ಳಲು ಎಲ್ಲರೂ ಕೂಡಲೇ ಲಸಿಕೆ ಹಾಕಿಸಿಕೊಳ್ಳಿ. ಹಿಂಜರಿಕೆ ಬಿಟ್ಟು, ರಕ್ಷಣೆಗೆ ಆದ್ಯತೆ ನೀಡಿ ಎನ್ನುವುದು ಉದಯವಾಣಿ ಆಶಯ.

ಕೇರಳದಲ್ಲಿ ಹಬ್ಬದ ಅನಂತರ ಸೋಂಕು ಸಾಕಷ್ಟು ಏರಿತು. ನಮ್ಮ ರಾಜ್ಯದಲ್ಲಿ ಸದ್ಯ ಕಡಿಮೆ ಇದ್ದು, ಮುಂಬರುವ ಹಬ್ಬಗಳ ಸಮಯದಲ್ಲಿ ಜನರು ನಿರ್ಲಕ್ಷ್ಯ ಮಾಡಿದರೆ ಸೋಂಕು ಹೆಚ್ಚಳವಾಗುತ್ತದೆ. ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಗುಂಪು ಸೇರದೆ, ಸರಳ ಆಚರಣೆಗೆ ಆದ್ಯತೆ ನೀಡಿ. ಲಸಿಕೆಯಿಂದ ದೂರ ಉಳಿದವರು ಶೀಘ್ರ ಲಸಿಕೆ ಪಡೆಯಲು ಮುಂದಾಗಬೇಕು.ಡಾ| ಸಿ.ಎನ್‌. ಮಂಜುನಾಥ್‌,  ನಿರ್ದೇಶಕ, ಜಯದೇವ ಹೃದ್ರೋಗ ಆಸ್ಪತ್ರೆ

Advertisement

Udayavani is now on Telegram. Click here to join our channel and stay updated with the latest news.

Next