Advertisement

ಕೇರಳದಲ್ಲಿ ಕೋವಿಡ್‌ ಹೆಚ್ಚಳ: ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ; ಜಿಲ್ಲಾಧಿಕಾರಿ

12:14 AM Jul 31, 2021 | Team Udayavani |

ಉಳ್ಳಾಲ: ಕೇರಳದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಪರಿಣಾಮ ಗಡಿಭಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪಾಸಿಟಿವಿಟಿ ದರ ಹೆಚ್ಚುತ್ತಿದೆ. ಇದರ ನಿಯಂತ್ರಣಕ್ಕಾಗಿ ಮುಂದಿನೆರಡು ದಿನಗಳಲ್ಲಿ ಹೊಸ ಮಾರ್ಗಸೂಚಿಯನ್ನು ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

Advertisement

ಶುಕ್ರವಾರ ತಲಪಾಡಿ ಚೆಕ್‌ ಪೋಸ್ಟ್‌ಗೆ ಭೇಟಿ ನೀಡಿ, ಜಿಲ್ಲೆಗೆ ಬರುವವರ ತಪಾಸಣೆ ಕಾರ್ಯ ಪರಿಶೀಲಿಸಿ ಮಾತನಾಡಿದ ಅವರು, ಲಸಿಕೆ ಹಾಕಿಸಿಕೊಂಡವರಿಗೆ ಮತ್ತು ಕೋವಿಡ್‌ ನೆಗೆಟಿವ್‌ ವರದಿ ಇರುವವರಿಗೆ ದ.ಕ. ಜಿಲ್ಲೆಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಪ್ರಥಮ ಅಲೆಯ ಸಂದರ್ಭ ದಿನನಿತ್ಯ ಸಂಚರಿಸುವವರಿಗೆ ಪಾಸ್‌ ವ್ಯವಸ್ಥೆ ಮಾಡಲಾಗಿತ್ತು. ಅದರ ಮರು ಅನುಷ್ಠಾನಕ್ಕೆ ಚಿಂತನೆ ಮಾಡಲಾಗುವುದು ಎಂದರು.

ಜಿಲ್ಲೆಯ ಗಡಿಯ 4 ಕೇಂದ್ರಗಳಲ್ಲಿ ಕೇರಳದಿಂದ ಬರುವವರ ತಪಾಸಣೆಗೆ ಚೆಕ್‌ ಪಾಯಿಂಟ್‌ ಆರಂಭಿಸಲಾಗಿದೆ. ಒಳರಸ್ತೆಗಳಲ್ಲೂ ಚೆಕ್‌ಪಾಯಿಂಟ್‌ ಹಾಕಲು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಶನಿವಾರ ಜಿಲ್ಲಾ ವಿಪತ್ತು ಪ್ರಾ ಧಿಕಾರದ ಸಭೆ ನಡೆಯಲಿದ್ದು, ಅಂತಾರಾಜ್ಯ ವಾಹನ ಸಂಚಾರ ಸಹಿತ ಧಾರ್ಮಿಕ ಕ್ಷೇತ್ರ, ಶಾಲಾ ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ನಿಯಮ ಹೇರುವ ಕುರಿತು ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ಹೊಸ ಮಾರ್ಗಸೂಚಿಯನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.

9 ಸಾವಿರ ಪರೀಕ್ಷೆಗೆ ಗುರಿ
ಜಿಲ್ಲೆಯಲ್ಲಿ ದಿನವೊಂದಕ್ಕೆ 9,000 ಜನರ ಪರೀಕ್ಷೆಗೆ ಗುರಿ ಇಟ್ಟುಕೊಳ್ಳಲಾಗಿದ್ದು ಪ್ರತೀದಿನ 7ರಿಂದ 8 ಸಾವಿರದವರೆಗೆ ಪರೀಕ್ಷೆ ನಡೆಸಲಾಗುತ್ತಿದೆ. ಮುಂದೆ ಹೆಚ್ಚುವರಿ ತಂಡ ರಚಿಸಿ ಪರೀಕ್ಷೆಯ ಪ್ರಮಾಣ ಹೆಚ್ಚಿಸಲಾಗುವುದು. ಇದರೊಂದಿಗೆ ಕೋವಿಡ್‌ ದೃಢಪಟ್ಟವರಿಗೆ ಹೋಂ ಐಸೊಲೇಶನ್‌ನೊಂದಿಗೆ ಕೋವಿಡ್‌ ಕೇರ್‌ ಸೆಂಟರ್‌ಗೆ ಕಡ್ಡಾಯವಾಗಿ ದಾಖಲಾಗಲು ಸೂಚಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next