ನವದೆಹಲಿ: ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ 6 ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ದಿಢೀರ್ ಏರಿಕೆ ದಾಖಲಾಗುತ್ತಿದ್ದು, ಈ ಬಗ್ಗೆ ನಿಗಾವಹಿಸಿ, ಸೋಂಕು ತಡೆಗಟ್ಟುವ ಕ್ರಮವನ್ನು ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರಸರ್ಕಾರ ಪತ್ರಬರೆದಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ತಮಿಳುನಾಡು, ಕೇರಳ ಹಾಗೂ ಕರ್ನಾಟಕ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಸೋಂಕು ಪರೀಕ್ಷೆ, ಚಿಕಿತ್ಸೆ, ಮೇಲ್ವಿಚಾರಣೆ ಹಾಗೂ ಲಸಿಕೆ ನೀಡಿಕೆಯನ್ನು ಹೆಚ್ಚಿಸಿ, ಖಚಿತಪಡಿಸಿಕೊಳ್ಳುವಂತೆ ಕೇಳಲಾಗಿದೆ.
ಅಲ್ಲದೇ, ಪ್ರಕರಣಗಳ ದಿಢೀರ್ ಏರಿಕೆ ಈವರೆಗಿನ ಎಲ್ಲ ಹೋರಾಟವನ್ನು ವಿಫಲಗೊಳಿಸುವ ಮುನ್ನ ಎಚ್ಚೆತ್ತುಕೊಳ್ಳುವಂತೆಯೂ ನಿರ್ದೇಶಿಸಿದೆ. 4 ತಿಂಗಳ ಬಳಿಕ ಗುರುವಾರ ಒಂದೇ ದಿನದಲ್ಲಿ 700 ಅಧಿಕ ಮಂದಿಗೆ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.