Advertisement

ಶಾಲೆಗಳಲ್ಲಿ ಕೋವಿಡ್‌ ಪ್ರಕರಣ ಪತ್ತೆ: ಆತಂಕ

04:05 PM Sep 22, 2021 | Team Udayavani |

ಚಾಮರಾಜನಗರ: ಜಿಲ್ಲೆಯ ಕೆಲವು ಶಾಲಾ ಕಾಲೇಜುಗಳಲ್ಲಿ ಕೋವಿಡ್‌ ನಿಯಮಗಳನ್ನು ಪಾಲಿ ಸದ ಕಾರಣ ಅಲ್ಲಲ್ಲಿ ಸೋಂಕು ಪ್ರಕರಣಗಳು ವರದಿ ಯಾಗುತ್ತಿವೆ. ಇದು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುವ ಆತಂಕ ಉಂಟಾಗಿದೆ.

Advertisement

ವಿದ್ಯಾರ್ಥಿಗಳು ಭೌತಿಕ ತರಗತಿಗಳಿಂದ ವಂಚಿತ ವಾಗಬಾರದೆಂಬ ಕಾರಣಕ್ಕೆ ರಾಜ್ಯ ಸರ್ಕಾರ ಮೊದಲಿಗೆ, ಪ್ರೌಢಶಾಲೆ, ಕಾಲೇಜುಗಳಲ್ಲಿ ಕೋವಿಡ್‌ ಎಸ್‌ ಒಪಿ ಪಾಲಿಸಿ ಭೌತಿಕ ತರಗತಿಗಳ ಆರಂಭಕ್ಕೆ ಅನುಮತಿ ನೀಡಿತು. ತದ ನಂತರ 6, 7, 8ನೇ ತರಗತಿಗಳಿಗೂ ಅನುಮತಿ ನೀಡಿತು.

ಶಾಲೆಗಳು ಪುನಾರಂಭವಾದ ದಿವಸ, ವಿದ್ಯಾರ್ಥಿಗಳು ಭೌತಿಕ ಅಂತರ ಕಾಪಾಡಿಕೊಂಡು ಶಾಲೆಗೆ ಆಗಮಿಸಬೇಕು ಎಂದು ಸೂಚಿಸಲಾಗುತ್ತದೆ. ಬರುವ ವಿದ್ಯಾರ್ಥಿಗಳ ಕೈಗೆ ಸ್ಯಾನಿಟೈಸರ್‌ ಹಾಕಲಾಗುತ್ತದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗುತ್ತದೆ. ಭೌತಿಕ ಅಂತರ ಕಾಪಾಡಿಕೊಂಡು ವಿದ್ಯಾರ್ಥಿಗಳನ್ನು ತರಗತಿಗಳಲ್ಲಿ ಕೂರಿಸಲಾಗುತ್ತದೆ. ಆದರೆ, ಮೂರು ನಾಲ್ಕು ವಾರಗಳ ನಂತರ ಈ ಕೋವಿಡ್‌ ನಿಯಮಗಳನ್ನು ಮರೆಯಲಾಗುತ್ತದೆ.

ಜಿಲ್ಲೆಯ ಅನೇಕ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಗಳನ್ನು ಮಾಮೂಲಿ ದಿನಗಳಂತೆ ಬೆಂಚಿಗೆ ನಾಲ್ಕೈದು ಮಂದಿಯಂತೆ ಕೂರಿಸಲಾಗುತ್ತಿದೆ. ಅನೇಕ ವಿದ್ಯಾರ್ಥಿಗಳು ಮಾಸ್ಕ್ ಧರಿಸಿರುವುದಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಶಿಕ್ಷಕರು ಪಾಠ ಮಾಡುವಾಗ ವಿದ್ಯಾರ್ಥಿಗಳು ಮಾಸ್ಕ್ ಧರಿಸಿದ್ದರೂ, ಅವರು ತರಗತಿ ಮುಗಿಸಿ ಹೋದ ಬಳಿಕ ಮಾಸ್ಕ್ ತೆಗೆಯುತ್ತಾರೆ. ತರಗತಿಯಿಂದ ಹೊರಗೆ ಶಾಲಾ ಕಾಲೇಜು ಆವರಣದಲ್ಲಿ ಮಾಸ್ಕ್ ಧರಿಸು ವುದಿಲ್ಲ. ಇದರ ಪರಿಣಾಮ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿವೆ. ಯಳಂದೂರು ತಾಲೂಕಿನ ಮೆಲ್ಲಹಳ್ಳಿ ಗೇಟ್‌ ನಲ್ಲಿರುವ ಆದರ್ಶ ಶಾಲೆಯಲ್ಲಿ ಇಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನಾಲ್ಕೈದು ದಿನಗಳ ಹಿಂದೆ ಕೋವಿಡ್‌ ಪಾಸಿಟಿವ್‌ ಆಗಿತ್ತು. ಆ ವಿದ್ಯಾರ್ಥಿಗಳು ಈಗ ಸಂತೆಮರಹಳ್ಳಿಯ ಕೋವಿಡ್‌ ಕೇರ್‌ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಲೆಗೆ ಐದು ದಿನ ರಜೆ ನೀಡಲಾಗಿತ್ತು.

ಇದನ್ನೂ ಓದಿ:IPL : ಹೈದ್ರಾಬಾದ್ ಆಟಗಾರನಿಗೆ ಕೋವಿಡ್ ದೃಢ : 6 ಮಂದಿ ಐಸೋಲೇಶನ್

Advertisement

ಹನೂರು ತಾಲೂಕಿನ ಮಂಗಲದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಓದುತ್ತಿರುವ ಪಿಯುಸಿ, ಎಸ್‌ಎಸ್‌ ಎಲ್‌ಸಿ, 9ನೇ ತರಗತಿ (ಮೂವರು) ವಿದ್ಯಾರ್ಥಿಗಳಿಗೆ ಕೋವಿಡ್‌ ಪಾಸಿಟಿವ್‌ ಆಗಿದೆ. ವಿದ್ಯಾರ್ಥಿಗಳಿಗೆ ಪಾಸಿಟಿವ್‌ ಬಂದಿದ್ದರೂ ಈ ಶಾಲೆಯಲ್ಲಿ ರಜೆ ನೀಡದೇ ತರಗತಿಗಳನ್ನು ನಡೆಸಲಾಗಿದೆ. ಇದಲ್ಲದೇ ಹನೂರು ತಾಲೂಕಿನ ಮಾರ್ಟಳ್ಳಿಯ 11 ವರ್ಷದ ಬಾಲಕನೋರ್ವ ಕೋವಿಡ್‌ ಪಾಸಿಟಿವ್‌ ಆಗಿ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆರೋಗ್ಯ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಆರ್‌ ಟಿಪಿಸಿಆರ್‌ ಪರೀಕ್ಷೆ ನಡೆಸಿದ ಕಾರಣ, ಕೋವಿಡ್‌ ಇರುವುದು ಪತ್ತೆಯಾಗಿದೆ. ಇನ್ನೂ ಎಷ್ಟೋ ಶಾಲಾ ಕಾಲೇಜುಗಳಲ್ಲಿ ಪರೀಕ್ಷೆ ನಡೆಸಿಲ್ಲ. ಹೀಗಾಗಿ ಕೆಲವೆಡೆ ಕೋವಿಡ್‌ ಇದ್ದರೂ ಆ ಪ್ರಕರಣಗಳು ವರದಿಯಾಗಿಲ್ಲ. ಕೋವಿಡ್‌ 3ನೇ ಅಲೆಯ ಆತಂಕ ಇರುವುದರಿಂದ, ಶಾಲೆಗಳಲ್ಲಿ ನೂರಾರು, ಸಾವಿರಾರು ವಿದ್ಯಾರ್ಥಿಗಳು ಒಂದೆಡೆ ಸೇರುವುದರಿಂದ ಹೀಗೆ ನಿಧಾನವಾಗಿ ಕೋವಿಡ್‌ ಪ್ರಕರಣಗಳು ಹೆಚ್ಚುವ ಸಂಭವ ಇದೆ. ಹಾಗಾಗಿ ಶಾಲಾ ಕಾಲೇಜುಗಳಲ್ಲಿ ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಸೂಚನೆ ನೀಡಬೇಕಾಗಿದೆ.

ಜಿಲ್ಲೆಯ ಎರಡು ವಸತಿ ಶಾಲೆಗಳಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿಶ್ವೇಶ್ವರಯ್ಯ ಅವರು ಆರೋಗ್ಯಾಧಿಕಾರಿಗಳ ಆನ್‌ಲೈನ್‌ ಮೀಟಿಂಗ್‌ ನಡೆಸಿದ್ದಾರೆ. ವಸತಿ ಶಾಲೆಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ 6 ವಿದ್ಯಾರ್ಥಿಗಳಿಗೆ ಕೋವಿಡ್‌ ಸೋಂಕು
ಜಿಲ್ಲೆಯಲ್ಲಿ ಇದುವರೆಗೆ ಶಾಲಾ ಕಾಲೇಜುಗಳ 6 ವಿದ್ಯಾರ್ಥಿಗಳಿಗೆ ಕೋವಿಡ್‌ ಪಾಸಿಟಿವ್‌ ಆಗಿರುವುದು ವರದಿಯಾಗಿದೆ. ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿರುವ ಸಂತೆಮರಹಳ್ಳಿ ಕೋವಿಡ್‌ ಕೇರ್‌ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದೆ. ಕೋವಿಡ್‌ ನಿಯಮ ಪಾಲಿಸಿ ಬೋಧನೆ ಮಾಡುವಂತೆ ಶಾಲಾ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್‌ ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲ ಆಶ್ರಮ ಶಾಲೆಗಳು, ವಸತಿ ಶಾಲೆಗಳಲ್ಲಿ, ಹಾಸ್ಟೆಲ್‌ಗ‌ಳಲ್ಲಿ ವಿದ್ಯಾರ್ಥಿಗಳಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸುವಂತೆ ತಾಲೂಕು ವೈದ್ಯಾಧಿಕಾರಿಗಳಿಗೆ, ಸ್ಥಳೀಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶಾಲಾ ಕಾಲೇಜುಗಳಲ್ಲಿ ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗುವುದು.
-ಡಾ. ವಿಶ್ವೇಶ್ವರಯ್ಯ, ಡಿಎಚ್‌ಓ

-ಕೆ.ಎಸ್‌. ಬನಶಂಕರ ಆರಾಧ್ಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next